ಕಲಬುರಗಿ: ‘ರಾಹುಲ್ ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಹಂಚಿಕೆ ಮಾಡಿರುವ ನಾಗರಿಕ ನಿವೇಶನ ಕುರಿತು ಬಿಜೆಪಿ ಮುಖಂಡರು ಸುಳ್ಳು ಹೇಳಿಕೆ ನೀಡಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಸಂಘಟನೆ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7ರಂದು ಕೆಐಎಡಿಬಿ ನಾಗರಿಕ ನಿವೇಶನ ಹಂಚಿಕೆ ಮಾಡಲು ನಿಯಮಾವಳಿಗಳನ್ನು ವಿಧಿಸಿ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಪೂರಕವಾಗಿ ಅರ್ಜಿ ಸಲ್ಲಿಸಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನಿನಂತೆಯೇ ಭೂಮಿ ಮಂಜೂರು ಮಾಡಿದೆ’ ಎಂದು ಹೇಳಿದರು.
‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ವ್ಯಕ್ತಿಗತ ಟೀಕೆ ಮಾಡಿ ಪರಿಶಿಷ್ಟರ ಎಲ್ಲ ಸೌಲಭ್ಯ ಖರ್ಗೆ ಕುಟುಂಬ ಪಡೆದಿದೆ ಎನ್ನುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಇದೇ ನಾರಾಯಣ ಸ್ವಾಮಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಧಿಕಾರ ಅನುಭವಿಸಿದ್ದಾರೆ’ ಎಂದು ಆಪಾದಿಸಿದರು.
‘ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದೇ ಬಿಜೆಪಿ ಮತ್ತು ಆರ್‌ಎಸ್‌ಎಸ್ ದಲಿತ ನಾಯಕನನ್ನು ಖರ್ಗೆ ಬಗ್ಗೆ ಟೀಕೆ ಮಾಡಲು ಬಳಸಿಕೊಳ್ಳುತ್ತಿದೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಅವರಿಗೆ ನೀಡಿರುವ ನಿವೇಶನದಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯಲು ಇಚ್ಛಿಸಿ, ದಲಿತರ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಾರಾಯಣಸ್ವಾಮಿ ಅವರಿಗೆ ಹೇಗೆ ತಪ್ಪಾಗಿ ಕಂಡಿದೆ ಎಂಬುದು ತಿಳಿಯುತ್ತಿಲ್ಲ’ ಎಂದರು.