ಶನಿವಾರ, ನವೆಂಬರ್ 23, 2019
17 °C
ಅಳ್ಳೊಳ್ಳಿ: ಆರ್‌ಕೆಎಸ್ ನೇತೃತ್ವದಲ್ಲಿ ಧಿಕ್ಕಾರ ಮೊಳಗಿಸಿದ ರೈತರು

ಶೇಂಗಾಬೀಜ: ರೈತರಿಂದ ದಿಢೀರ್ ಪ್ರತಿಭಟನೆ

Published:
Updated:
Prajavani

ವಾಡಿ: ಹಿಂಗಾರು ಬಿತ್ತನೆಗಾಗಿ ಸಕಾಲಕ್ಕೆ ಶೇಂಗಾ ಬೀಜ ಪೂರೈಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ನೂರಾರು ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಅಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದ ಮುಂದೆ ಗುರುವಾರ ಜರುಗಿದೆ.

ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ನೇತೃತ್ವದಲ್ಲಿ ಕಚೇರಿ ಎದುರು ಜಮಾಯಿಸಿದ ಸುತ್ತಲಿನ ಗ್ರಾಮಗಳ ನೂರಾರು ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

‘ಬಿತ್ತನೆ ಬೀಜಕ್ಕಾಗಿ ಒಂದು ತಿಂಗಳಿನಿಂದ ಅಲೆದಾಡುತ್ತಿದ್ದೇವೆ. 3 ದಿನಗಳಿಂದ ಹಗಲು–ರಾತ್ರಿಯೆನ್ನದೆ ಹೊಟ್ಟೆಗೆ ಊಟವಿಲ್ಲದೆ ಕಚೇರಿ ಮುಂದೆ ಕ್ಯೂ ನಿಂತಿದ್ದೇವೆ. ಆದರೆ ಬೀಜ ಬಂದಿಲ್ಲ. ಅಧಿಕಾರಿಗಳು ಬರೀ ಕಾಲಹರಣ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಶೇಂಗಾ ಬೀಜಕ್ಕಾಗಿ ಹೆಣ್ಣು ಮಕ್ಕಳು ಸಹ ಚಿಕ್ಕ ಮಕ್ಕಳೊಂದಿಗೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಬಿತ್ತನೆ ಅವಧಿ ಪ್ರಾರಂಭವಾಗಿ 1 ತಿಂಗಳು ಗತಿಸುತ್ತಾ ಬಂದರೂ ಬೀಜ ಸಿಗದೆ ಅಕ್ಷರಶಃ ಕಂಗಾಲಾಗಿದ್ದೇವೆ. ಸಿದ್ಧಪಡಿಸಿದ ಜಮೀನು ಬೀಳು ಬೀಳುತ್ತಿದೆ. ಬೀಜವಿಲ್ಲದೆ ಪರೇಶಾನ್ ಆಗುತ್ತಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಕೆಎಸ್ ಸಂಘಟನೆಯ ಮುಖಂಡ ಗುಂಡಣ್ಣ ಎಂ.ಕೆ ಅವರು ಮಾತನಾಡಿ, 'ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ. ರೈತ ಮಹಿಳೆಯರು ಸಹ ಮಕ್ಕಳೊಂದಿಗೆ ಬಿತ್ತನೆ ಬೀಜಕ್ಕಾಗಿ ಹಗಲು ರಾತ್ರಿಯೆನ್ನದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಚಿತ್ತಾಪುರ ತಾಲ್ಲೂಕಿಗೆ 2500 ಕ್ವಿಂಟಲ್ ಶೇಂಗಾ ಬೀಜದ ಬೇಡಿಕೆ ಇದ್ದರೆ ರಾಜ್ಯ ಸರ್ಕಾರ ಕೇವಲ 100 ಕ್ವಿಂಟಲ್ ಕಳುಹಿಸಿದೆ. ಬಿತ್ತನೆಗೆ ಸಜ್ಜು ಮಾಡಿದ ಜಮೀನು ಈಗ ಕಸ ಕಡ್ಡಿಗಳಿಂದ ತುಂಬಿ ಹೋಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಮತ್ತೆ ಸಿದ್ಧಪಡಿಸಬೇಕಾದ ಪರಿಸ್ಥಿತಿ ತಲೆದೂರಿದೆ. ಸರ್ಕಾರ ಸಮಸ್ಯೆಯನ್ನು ತಕ್ಷಣ ಇತ್ಯರ್ಥಪಡಿಸಬೇಕು' ಎಂದು ಆಗ್ರಹಿಸಿದರು.

ಕೃಷಿ ಅಧಿಕಾರಿ ಕರಣಕುಮಾರ ಎ.ಮಾವನೂರು ಮನವಿಪತ್ರ ಸ್ವೀಕರಿಸಿದರು. ಆರ್‌ಕೆಎಸ್ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪೂರ, ಕಾರ್ಯದರ್ಶಿ ಮಲ್ಲಣ್ಣ ದಂಡಬಾ, ಸದಸ್ಯ ಮಲ್ಲಿಕಾರ್ಜುನ ಗಂಧಿ ಅವರು ಹೋರಾಟದ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)