ಮಂಗಳವಾರ, ಸೆಪ್ಟೆಂಬರ್ 21, 2021
27 °C

ಚಿತ್ತಾಪುರ: ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಟ್ರೇಡ್ ಯುನಿಯನ್, ಅಂಗನವಾಡಿ ನೌಕರರ ಸಂಘ ಹಾಗೂ ಅಕ್ಷರ ದಾಸೋಹ ನೌಕರರ ಒಕ್ಕೂಟ ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.

ಪಟ್ಟಣದ ಎಪಿಎಂಸಿಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ಮಾತನಾಡಿ, ‘ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದ ಕಾರ್ಮಿಕ ಸಂಹಿತೆ, ಕೃಷಿ ಕಾಯ್ದೆ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಪಡಿಸಬೇಕು. ಎಲ್ಲ ಬೆಳೆಗಳಿಗೆ ಖಾತರಿ ಖರೀದಿ ಜತೆಗೆ ಕನಿಷ್ಠ ಬೆಂಬಲ ಬೆಲೆಯ ಕಾಯ್ದೆ ರೂಪಿಸಿ, ಋಣಮುಕ್ತ ಕಾಯ್ದೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

ಭೂ ಸುಧಾರಣಾ ಕಾಯ್ದೆ ರದ್ದು ಪಡಿಸಿ, ಭೂರಹಿತ ಬಡ ಸಾಗುವಳಿದಾರರಿಗೆ ಸರ್ಕಾರಿ ಜಮೀನಿಗೆ ಸಾಗುವಳಿ ಚೀಟಿ ನೀಡಿ ಸಕ್ರಮಗೊಳಿಸಬೇಕು. ನಿವೇಶನ ರಹಿತರಿಗೆ ಸಮಗ್ರ ಯೋಜನೆಯಡಿ ಮನೆ ನಿರ್ಮಿಸಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂತೆಗೆದುಕೊಳ್ಳಬೇಕು. ಅವಶ್ಯ ವಸ್ತುಗಳ ಬೆಲೆ ಏರಿಕೆ ತಡೆಯುವಂತೆ ಆಗ್ರಹಿಸಿದರು.

ಕೊರೊನಾ ವೇಳೆಯ ಉದ್ಯೋಗ ಹಾಗೂ ವೇತನ ನಷ್ಟಕ್ಕೆ ಪರಿಹಾರ ಒದಗಿಸಬೇಕು. ಖಾಲಿ ಇರುವ ಹುದ್ದೆಗಳ ಭರ್ತಿ ಶೀಘ್ರವೇ ಮುಂದಾಗಲಿ. ಗ್ರಾಮ ಪಂಚಾಯಿತಿ ನೌಕರರನ್ನು ಕಾಯಂ ಮಾಡಿ ಬಾಕಿ ವೇತನ ಪಾವತಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ 200 ದಿನ ಕೂಲಿ ಕೆಲಸ ನಿಗದಿಪಡಿಸಿ, ನಗರಗಳಿಗೂ ವಿಸ್ತರಿಸಬೇಕು ಎಂದರು.

ಆದಾಯ ತೆರಿಗೆಗೆ ಒಳಪಡದ ಕುಟುಂಬಗಳಿಗೆ ಮಾಸಿಕ ತಲಾ ₹10 ಸಾವಿರ ನಗದು ವರ್ಗಾವಣೆ ಮಾಡಬೇಕು. ಕೋವಿಡ್‌ನಿಂದ ಮೃತ ಪಟ್ಟವರ ಕುಟುಂಬ ಸದಸ್ಯರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಸಾರ್ವ ಜನಿಕ ಉದ್ಯಮಗಳ ಖಾಸಗೀಕರಣ ಸ್ಥಗಿ ತಗೊಳಿಸಬೇಕು ಎಂದು ಕೋರಿದರು. ‌

ರೈತ ಸಂಘದ ಕಾರ್ಯದರ್ಶಿ ಶಕುಂತಲಾ ಪವಾರ್, ಸಿಐಟಿಯು ಕಾರ್ಯದರ್ಶಿ ಶಿವಪುತ್ರಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ದೇವಮ್ಮ ಅನ್ನದಾನಿ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಸಂಗೀತಾ ಗುತ್ತೇದಾರ, ಸಿದ್ದಮ್ಮ, ತೋಟಮ್ಮ, ವಿಜಯಲತಾ ಸಂಕಾ, ಮೌನೇಶ, ಭಾಗಣ್ಣ, ಮುಭಾರಕ್, ಜ್ಯೋತಿ, ಪಾರ್ವತಿ ಡೊಣ್ಣೂರ, ಅಕ್ಕಮಹಾದೇವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.