ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲಕರ್ಟಿ: 513 ಪಹಣಿಗಳು ದೋಷಮುಕ್ತ, ರೈತ ಸಂಘಟನೆ ಹೋರಾಟಕ್ಕೆ ಸ್ಪಂದನೆ

ದಶಕದ ಸಮಸ್ಯೆಗೆ ಮುಕ್ತಿ
Published : 13 ಆಗಸ್ಟ್ 2024, 5:56 IST
Last Updated : 13 ಆಗಸ್ಟ್ 2024, 5:56 IST
ಫಾಲೋ ಮಾಡಿ
Comments

ವಾಡಿ: ಕಳೆದ ಮೂವತ್ತು ವರ್ಷಗಳಿಂದ ಪಹಣಿ ದೋಷ ಸಮಸ್ಯೆಯಿಂದ ಬಸವಳಿದು ಕಂಗೆಟ್ಟಿದ್ದ ಹಲಕರ್ಟಿ ರೈತರ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು ಸಂತಸ ಮನೆ ಮಾಡಿದೆ.

ಮೂರು ದಶಕದಿಂದ ಕಾಡುತ್ತಿದ್ದ ಸಮಸ್ಯೆ ಈಗ ತಾರ್ಕಿಕ ಅಂತ್ಯ ಕಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಒಟ್ಟು 513 ರೈತರಿಗೆ ಪಹಣಿ ವಿತರಿಸುತ್ತಿದ್ದಾರೆ. ಇದರಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ರೈತ ಸಂಘಟನೆಯ ನೇತೃತ್ವದಲ್ಲಿ ಗ್ರಾಮಸ್ಥರು ನಿರಂತರ ಹೋರಾಟ ನಡೆಸಿದ ಫಲವಾಗಿ ಹಾಗೂ ಕಗ್ಗಂಟಾಗಿ ಆಡಳಿತಕ್ಕೆ ತೀವ್ರ ತಲೆನೋವು ತಂದಿದ್ದ ಪಹಣಿ ಸಮಸ್ಯೆ ವಿಷಯವನ್ನು ಬಗೆಹರಿಸಲೇಬೇಕು ಎನ್ನುವ ಒತ್ತಡಕ್ಕೆ ಯಶ ಸಿಕ್ಕಿದೆ. ಇದಕ್ಕೆ ಪೂರಕವಾಗಿ ದಿಶಾಂಕ್ ಅಪ್ ಸಹ ಅಪ್ಡೇಟ್ ಮಾಡಲಾಗಿದೆ.

1992ರ ಕಂದಾಯ ಗ್ರಾಮ ರಚನೆ ಸಮಯದಲ್ಲಿ ಹಲಕರ್ಟಿ ಗ್ರಾಮ ಬಸವೇಶ್ವರ ನಗರ, ವಾಡಿ, ಹಾಗೂ ದೇವಾಪುರ ಗ್ರಾಮಗಳಾಗಿ ವಿಂಗಡಣೆಯಾದ ಬಳಿಕ ಪಹಣಿ ದೋಷ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲ್ ಆದ ಬಳಿಕ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸಿತು. ಅಂದಿನಿಂದ ಪರಭಾರೆ, ಸಾಲ ಎತ್ತುವಿಕೆ, ಬೆಳೆನಷ್ಟ ಪರಿಹಾರ, ವಿಮಾ ಪರಿಹಾರ ಯಾವುದೂ ಸಾಧ್ಯವಾಗದೇ ರೈತರು ಗೋಳಾಟ ಅನುಭವಿಸುತ್ತಿದ್ದರು.

ಕೊನೆಗೆ 2016ರಿಂದ ಗ್ರಾಮಸ್ಥರು ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಿರಂತರ 6 ವರ್ಷಗಳ ಕಾಲ ಹಲವು ಹಂತದ ಹೋರಾಟ ರೂಪಿಸಿ ಆಡಳಿತದ ಮೇಲೆ ಒತ್ತಡ ಹೇರಿದ್ದರು. ಗ್ರಾಮದಿಂದ ತಹಶೀಲ್ದಾರ್ ಕಚೇರಿವರೆಗೆ ಎತ್ತಿನ ಬಂಡಿ ಮೆರವಣಿಗೆ, ರಾಷ್ಟ್ರೀಯ ಹೆದ್ದಾರಿ ತಡೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹೀಗೆ ನಿರಂತರ ಹೋರಾಟ ನಡೆಸಿ ಆಡಳಿತದ ಗಮನ ಸೆಳೆದಿದ್ದರು.

ಇಂದು ಸಚಿವರಿಂದ ಪಹಣಿ ಹಂಚಿಕೆ

ಹಲಕರ್ಟಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಚಿವರಿಂದ ಪಹಣಿ ಹಂಚುವ ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಸಾಂಕೇತಿಕ ಪಹಣಿ ವಿತರಿಸಲಿದ್ದಾರೆ. ಇದಕ್ಕೂ ಮುಂಚೆ ಸಚಿವರನ್ನು ಗ್ರಾಮಕ್ಕೆ ಎತ್ತಿನ ಬಂಡಿ ಮೂಲಕ ಕರೆತರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕುಂಭ ಸ್ವಾಗತ ಕೊರಲು ಮಹಿಳೆಯರು ಸಿದ್ಧತೆ ನಡೆಸಿದ್ದಾರೆ.

513 ಪಹಣಿಗಳ ಸಂಪೂರ್ಣ ದೋಷ ಸರಿಪಡಿಸಲಾಗಿದೆ. ಇನ್ನು ಮುಂದೆ ರೈತರು ತಮ್ಮ ಜಮೀನುಗಳ ಯಾವುದೇ ಸಮಸ್ಯೆಯಿಲ್ಲದೇ ಯಾವುದೇ ರೀತಿಯ ವ್ಯವಹಾರ ನಡೆಸಬಹುದು
- ಅಮರೇಶ ಬಿರಾದಾರ, ತಹಶೀಲ್ದಾರ್ ಚಿತ್ತಾಪುರ
ರೈತ ಸಂಘಟನೆ ನೇತೃತ್ವದಲ್ಲಿ ಒಂದುಗೂಡಿ ನಿರಂತರ 6 ವರ್ಷಗಳ ಕಾಲ ಹಲವು ರೀತಿಯ ಹೋರಾಟ ನಡೆಸಿ ಒತ್ತಡ ಹಾಕಿದ್ದರ ಫಲವಾಗಿ ಇಂದು ಪಹಣಿ ದೋಷ ಸಮಸ್ಯೆ ಪರಿಹಾರವಾಗಿದೆ
-ಶಿವಕುಮಾರ ಆಂದೋಲ, ತಾಲ್ಲೂಕು ಕಾರ್ಯದರ್ಶಿಗಳು ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT