ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚಳ ಆಗ್ರಹಿಸಿ ಪ್ರತಿಭಟನೆ, 3 ಗಂಟೆ ರಸ್ತೆ ತಡ

Last Updated 31 ಅಕ್ಟೋಬರ್ 2022, 9:41 IST
ಅಕ್ಷರ ಗಾತ್ರ

ಕಲಬುರಗಿ: ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ(ಎಫ್‌ಆರ್‌ಪಿ) ಹೆಚ್ಚಿಸುವಂತೆ ಆಗ್ರಹಿಸಿ ‌ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಮುಖಂಡರು, ಕಬ್ಬು ಬೆಳೆಗಾರರು ಸೋಮವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

ದರ ಹೆಚ್ಚಳದ ಅಧಿಕೃತ ಭರವಸೆ ಹಾಗೂ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಜಿಲ್ಲಾಧಿಕಾರಿಗಳೇ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಈ ಬಗ್ಗೆ ತಕ್ಷಣವೇ ಸ್ಪದಿಸದೆ ಇದ್ದರೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಮಾಡುತ್ತೇವೆ. ಇದಕ್ಕೆ ಅವಕಾಶ ನೀಡದೆ ಇದ್ದರೇ ಅನಿರ್ದಿಷ್ಟಾವಧಿವರೆಗೆ ರಸ್ತೆ ಮೇಲೆಯೇ ಕುಳಿತು ಪ್ರತಿಭಟಿಸುವುದಾಗಿ ಹೇಳಿ ಬೆಳಿಗ್ಗೆ 11:30ರಿಂದ ಎಸ್‌ವಿಪಿ ವೃತ್ತ- ಮಾರ್ಕೆಟ್ ರಸ್ತೆ ತಡೆದು ಧರಣಿ ಕುಳಿತಿದ್ದಾರೆ‌.

ಬೆಳೆಗಾರರು ಮತ್ತು ಪೊಲೀಸರ ನಡೆವೆ ನೂಕಾಟ: ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಲು ಮುಂದಾದ ಪ್ರತಿಭಟನಾ ನಿರತರನ್ನು ಪೊಲೀಸರು ಪ್ರವೇಶ ದ್ವಾರದಲ್ಲಿ ತಡೆದರು. 'ನಾವು ನಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡಲು ಡಿ.ಸಿ ಕಚೇರಿಗೆ ತೆರಳುತ್ತಿದ್ದೇವೆ. ನ್ಯಾಯಯುತ ಹಕ್ಕು ಪಡೆಯಲು ಅಡ್ಡಿಪಡಿಸಬೇಡಿ' ಎಂದರು.

ಇದಕ್ಕೆ ಪೊಲೀಸರು ಅವಕಾಶ ‌ನೀಡಲಿಲ್ಲ.‌ ಪ್ರತಿಭಟನಾ ನಿರತರು ಒಳನುಗ್ಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ನೂಕಾಟ ನಡೆಯಿತು. ತಕ್ಷಣವೇ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ದೀಪನ್‌, ಸಂಚಾರ ಪೊಲೀಸ್ ಸಿಪಿಐ ಶಾಂತಿನಾಥ ಅವರು ಸ್ಥಳಕ್ಕೆ ಧಾವಿಸಿ ವಾತಾವರಣವನ್ನು ತಿಳಿಗೊಳಿಸಿದರು. ರಸ್ತೆಯ ಮೇಲೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ‌ಯಶವಂತ ಗುರುಕರ್ ಅವರು ಪ್ರತಿಭಟನಾ ನಿರತರ‌ ಬೇಡಿಕೆಗಳನ್ನು ಆಲಿಸಿ, ಒಂದು ಗಂಟೆ ಅವಕಾಶ ನೀಡುವಂತೆ ಮನವಿ ಮಾಡಿ ಕಚೇರಿಗೆ ತೆರಳಿದರು. ಬೇಡಿಕೆ ಈಡೇರಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನೆಯಲ್ಲಿ ತೊಡಗಿದರು.

ಸುಮಾರು‌ 3 ಗಂಟೆ ರಸ್ತೆ ತಡೆದಿದ್ದರಿಂದ ಜಿಲ್ಲಾ ಕೋರ್ಟ್‌ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT