ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಂತ್ರೀಕೃತ ಬಿತ್ತನೆಗೆ ಮೊರೆ ಹೋದ ರೈತರು

ಚಿಂಚೋಳಿ: ಶೇ 60ರಷ್ಟು ಬಿತ್ತನೆ ಪೂರ್ಣ, ಅಲ್ಪ ಪ್ರಮಾಣದಲ್ಲಿ ಸೋಯಾ ಬೀಜ ಪೂರೈಕೆ
Last Updated 23 ಜೂನ್ 2020, 3:16 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದೆ. ಸರ್ಕಾರದ ಎಚ್ಚರಿಕೆಯ ನಡುವೆಯೂ ಕೆಲವು ಕಡೆ ಸೋಯಾ ಬೆಳೆಗಾರರು ನೆರೆಯ ಬೀದರ್ ಜಿಲ್ಲೆಯಿಂದ ಖಾಸಗಿಯಾಗಿ ಬೀಜ ಖರೀದಿಸಿ ತಂದು ಬಿತ್ತನೆ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ ಸದ್ಯ ಮುಂಗಾರು ಬಿತ್ತನೆ ಶೇ 60ರಷ್ಟು ಪೂರ್ಣವಾಗಿದೆ. ಮುಂಗಾರು ಬಿತ್ತನೆಗೆ ಸಿದ್ಧವಾಗಿದ್ದ ರೈತರಿಗೆ ಮಿರ್ಗಾ ಮಳೆ ಕೃಪೆ ತೋರಿದೆ. ತಾಲ್ಲೂಕಿನ ಐನಾಪುರ, ಕುಂಚಾವರಂ,ಸುಲೇಪೇಟ ಸುತ್ತಲೂ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಚಿಂಚೋಳಿ ಸುತ್ತಮುತ್ತ ಬಿತ್ತನೆ ಈಗ ಆರಂಭವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅನಿಲ ರಾಠೋಡ್ ತಿಳಿಸಿದರು.

ಪ್ರಸಕ್ತ ವರ್ಷ ತಾಲ್ಲೂಕಿಗೆ 3 ಸಾವಿರ ಕ್ವಿಂಟಲ್ ಸೋಯಾ ಬೀಜದ ಬೇಡಿಕೆ ಇತ್ತು. ಆದರೆ ಒಂದು ಸಾವಿರ ಕ್ವಿಂಟಲ್ ಬೀಜ ಪೂರೈಕೆಯಾಗಿದೆ. ಇದರಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ 600 ಕ್ವಿಂಟಲ್ ಮಾರಾಟ ಮಾಡಲಾಗಿದೆ. ಕಳಪೆ ಬೀಜ ಪೂರೈಕೆಯಾಗಿದ್ದರಿಂದ ಉಳಿದ 400 ಕ್ವಿಂಟಲ್ ವಾಪಸ್ ಕಳುಹಿಸಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಎತ್ತುಗಳ ಸಹಾಯದಿಂದ ಹೊಲ ಉಳುಮೆ ಮಾಡುವ ಮತ್ತು ಬಿತ್ತನೆ ನಡೆಸುವುದು ರೂಢಿಯಾಗಿತ್ತು. ಆದರೆ ಈ ವರ್ಷ ಬಹುತೇಕ ರೈತರು ಎತ್ತುಗಳನ್ನು ಮಾರಾಟ ಮಾಡಿ ಒಕ್ಕಲುತನ ತೆಗೆದು ಹಾಕಿದ್ದಲ್ಲದೆ, ಯಾಂತ್ರೀಕೃತ ಕೃಷಿಗೆ ಮುಂದಾಗಿದ್ದಾರೆ. ಟ್ರ್ಯಾಕ್ಟರ್ ನೆರವಿನಿಂದ ಬಿತ್ತನೆ ನಡೆಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ‘ಎತ್ತುಗಳ ಸಹಾಯದಿಂದ ಒಂದು ದಿನಕ್ಕೆ 4 ಎಕರೆ ಬಿತ್ತನೆ ನಡೆಸಬಹುದು. ಆದರೆ ಟ್ರ್ಯಾಕ್ಟರ್‌ನಿಂದ 12 ಎಕರೆ ಬಿತ್ತನೆ ನಡೆಸಬಹುದಾಗಿದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಆದರೆ ಬೀಜ ಸ್ವಲ್ಪ ಹೆಚ್ಚು ಬೇಕಾಗುತ್ತದೆ’ ಎಂದು ಸುಲೇಪೇಟದ ರೈತ ಶಿವರಾಮ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಯಾ ಬೀಜದ ಕೊರತೆಯಿಂದ ರೈತರು ತೊಗರಿ ಉದ್ದು ಹಾಗೂ ಹೆಸರು ಬಿತ್ತನೆಗೆ ಮೊರೆ ಹೋಗಿದ್ದಾರೆ. ಹೀಗಾಗಿ ಇವುಗಳ ಪ್ರದೇಶ ಹೆಚ್ಚಿದೆ.

‘ನಾನು ಸೋಯಾ ಬಿತ್ತನೆ ನಡೆಸಿದ್ದೇನೆ. ಶೇ 50 ರಷ್ಟು ಬೀಜ ನಾಟಿಯಾಗಿದೆ. ಬೀಜ ಕಳಪೆ ಎಂದು ಸರ್ಕಾರ ಹೇಳಿರುವುದರಿಂದ ಈಗ ಪೈರು ಇಡಬೇಕೋ, ಹರಗಬೇಕೋ ಎಂಬುದು ತಿಳಿಯುತ್ತಿಲ್ಲ’ ಎಂದು ಐನಾಪುರದ ರೈತ ನಾಗಶೆಟ್ಟಿ ಮಾಲಿ ಪಾಟೀಲ ಹೇಳಿದರು.

‘ನಾನು ಮಳೆಗಾಲದಲ್ಲಿ ಸೋಯಾ ಬಿತ್ತುತ್ತೇನೆ. ಸೋಯಾ ತೆಗೆದುಕೊಂಡ ಮೇಲೆ ತರಕಾರಿ ಬೆಳೆಯುತ್ತೇನೆ.ಈ ವರ್ಷ ಸೋಯಾ ಸಿಕ್ಕಿಲ್ಲ. ಇದರಿಂದ ತೊಂದರೆ ಆಗಿದೆ’ ಎಂದು ಮುಕರಂಬಾದ ರೈತ ಕಾಶಿನಾಥ ಗೋಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT