ತೊಗರಿಗೆ ಭಾವಾಂತರ; ಒಕ್ಕೊರಲ ದನಿ

7
ಎಚ್‌ಕೆಸಿಸಿಐ ನೇತೃತ್ವದಲ್ಲಿ ರೈತರು, ವ್ಯಾಪಾರಸ್ಥರ ಬೃಹತ್‌ ಮೆರವಣಿಗೆ

ತೊಗರಿಗೆ ಭಾವಾಂತರ; ಒಕ್ಕೊರಲ ದನಿ

Published:
Updated:

ಕಲಬುರ್ಗಿ: ಭಾವಾಂತರ ಯೋಜನೆ ಅಡಿ ತೊಗರಿ ಬೆಳೆಯನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ನೂರಾರು ರೈತರು, ವರ್ತಕರು ನಗರದಲ್ಲಿ ಸೋಮವಾರ ಬೃಹತ್‌ ಮೆರವಣಿಗೆ ನಡೆಸಿದರು.

ಇಲ್ಲಿನ ಗಂಜ್‌ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಿಂದ ಆರಂಭವಾದ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ತಲುಪಿತು. ಅಲ್ಲಿ ಮಧ್ಯಾಹ್ನದವರೆಗೂ ಧರಣಿ ನಡೆಸಿದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತೊಗರಿಯು ಹೈದರಾಬಾದ್‌ ಕರ್ನಾಟಕ ಭಾಗದ ಜೀವನಾಧಾರ. ಕೃಷಿ ಮಾತ್ರವಲ್ಲದೇ, ವಾಣಿಜ್ಯ, ಕೈಗಾರಿಕೆ, ಜೀವನಮಟ್ಟ ಮುಂತಾದ ಆಯಾಮಗಳಲ್ಲಿ ಇದೇ ಬೆಳೆ ನಿರ್ಣಾಯಕವಾಗಿದೆ. ಆದ್ದರಿಂದ ಈ ಪ್ರಮುಖ ದ್ವಿದಳ ಧಾನ್ಯಕ್ಕೂ ಭಾವಾಂತರ ಅನಿವಾರ್ಯವಾಗಿದೆ ಎಂದು ರೈತರು ಆಗ್ರಹಿಸಿದರು.

ಕಲಬುರ್ಗಿ ವಿಭಾಗದಲ್ಲಿ 400ಕ್ಕೂ ಹೆಚ್ಚು ದಾಲ್‌ಮಿಲ್‌ಗಳಿವೆ. ರೈತರು, ವ್ಯಾಪಾರಸ್ಥರು, ಎಪಿಎಂಸಿ ಕಾರ್ಮಿಕರು, ದಾಲ್‌ಮಿಲ್‌ಗಳ ಸಿಬ್ಬಂದಿ, ಹಮಾಲರು ಸೇರಿ ಲಕ್ಷಾಂತರ ಜನ ತೊಗರಿಯನ್ನೇ ಅವಲಂಬಿಸಿದ್ದಾರೆ. ಪರೋಕ್ಷವಾಗಿ ಭಾವಾಂತರ ಇವರೆಲ್ಲರಿಗೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬೆಂಬಲ ಬೆಲೆ ಅಡಿ ತೊಗರಿ ಖರೀದಿಸುವುದು ಅವೈಜ್ಞಾನಿಕ. ಶೇ. 25ರಷ್ಟು ಮಾತ್ರ ಉತ್ಪನ್ನ ಖರೀದಿಸುವುದರಿಂದ ಏನೂ ಪ್ರಯೋಜನವಿಲ್ಲ. ಅಲ್ಲದೇ, ಖರೀದಿಸಿದ ಉತ್ಪನ್ನವನ್ನು ಸಂಗ್ರಹಿಸಿಡಲು ಅಪಾರ ವೆಚ್ಚ ಮಾಡಬೇಕು. ಕಳೆದ ವರ್ಷ ಬೆಲೆ ಕುಸಿತದಿಂದ ಸರ್ಕಾರಕ್ಕೆ ಪ್ರತಿ ಕ್ವಿಂಟಲ್‌ಗೆ ₹ 2,400 ಹಾನಿ ಉಂಟಾಗಿದೆ. ಈ ಅವಾಂತರಗಳಿಂದ ಪಾರಾಗಲು ಭಾವಾಂತರ ಒಂದೇ ದಾರಿ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಳಿಗ್ಗೆಯಿಂದಲೇ ಎಪಿಎಂಸಿ ವ್ಯಾಪಾರ– ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಧರಣಿಗೆ ಬೆಂಬಲ ಸೂಚಿಸಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ಜಿಲ್ಲಾ ಸಮನ್ವಯ ಸಮಿತಿ ಉಪಾಧ್ಯಕ್ಷ ಚನ್ನಮಲ್ಲಿಕಾರ್ಜುನ ಅಕ್ಕಿ, ಎಪಿಎಂಸಿ ಉಪಸಮಿತಿ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಸದಸ್ಯ ಶ್ರೀಮಂತ ಉದನೂರ, ಗುಲಬರ್ಗಾ ದಾಲ್‌ಮಿಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಚಿದಂಬರರಾವ ಪಾಟೀಲ ಮರಗುತ್ತಿ, ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಕುಮಾರ ಘಂಟಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !