ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಭೂಸ್ವಾಧೀನ: ಎಕರೆಗೆ ₹ 25 ಲಕ್ಷ ಪರಿಹಾರಕ್ಕೆ ಒತ್ತಾಯ

ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಹಲಕರ್ಟಿ ರೈತರ ಪ್ರತಿಭಟನೆ
Last Updated 24 ಜುಲೈ 2020, 16:51 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ 17 ರೈತರ ಜಮೀನನ್ನು ರೈಲ್ವೆ ಯೋಜನೆಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಆದರೆ, ರೈತರ ಅಭಿಪ್ರಾಯ ಪಡೆಯದೇ ಜಮೀನಿನ ಮೌಲ್ಯ ನಿರ್ಧರಿಸಿದ್ದರಿಂದ ಅನ್ಯಾಯವಾಗಿದ್ದು, ಪ್ರತಿ ಎಕರೆಗೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತರು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್‌) ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಫಲವತ್ತಾದ ಮತ್ತು ಗಣಿ ಸಂಪನ್ಮೂಲ ಹೊಂದಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಜಮೀನು ಸರ್ವೆ ಮಾಡುವಾಗ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ರೈತರಿಗೆ ಮತ್ತಷ್ಟು ಅನ್ಯಾಯ ಮಾಡಿದಂತಾಗಿದೆ. ಅಷ್ಟೇನೂ ಫಲವತ್ತಾಗಿರದ ಇದೇ ಗ್ರಾಮದ ಸಿಕಿಂದರಬಾದ–ರಾಯಚೂರು ರೈಲ್ವೆ ಯೋಜನೆಗೆ ಎಕರೆಗೆ ₹ 13.61 ಲಕ್ಷ ಮೌಲ್ಯ ನಿರ್ಧರಿಸಲಾಗಿದೆ. ಆದರೆ ನಮ್ಮದು ಕಪ್ಪುಮಣ್ಣಿನ ಫಲವತ್ತಾದ ಮತ್ತು ಗಣಿ ಸಂಪನ್ಮೂಲ ಹೊಂದಿದ ಭೂಮಿ ಆಗಿರುವುದರಿಂದ ಈ ರೈತರಿಗೆ ಕನಿಷ್ಟ 25 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.

ಭೂಮಿ ಕಳೆದುಕೊಳ್ಳಲಿರುವ ಕುಟುಂಬದ ಒಬ್ಬ ಸದಸ್ಯರಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಯೋಜನೆಯು ನಡೆಯುವ ದಾರಿಯಲ್ಲಿ ರೈತರು, ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳು ಓಡಾಡುವಂತೆ ಸೇತುವೆಗಳನ್ನು ಕಟ್ಟಿಸಬೇಕು. ಆಕ್ರಮಿಸಿಕೊಳ್ಳಬಯಸುವ ಜಮೀನಿನಲ್ಲಿ ಹಲವು ಗುಂಟೆ ಜಾಗ ಉಳಿಯುತ್ತಿದ್ದು ಅಲ್ಲಿ ವ್ಯವಸಾಯಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಉಳಿದ ಜಮೀನನ್ನೂ ಸಹ ಖರೀದಿಸಬೇಕು. ಈ ಹಿಂದೆ ಮಾಡಿದ ಸರ್ವೆಯಲ್ಲಿ ಭಾರಿ ಲೋಪವಾಗಿದ್ದು ರೈತರ ಸಮ್ಮುಖದಲ್ಲಿಯೇ ಪುನಃ ಸರ್ವೆ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು.

ಆರ್‌ಕೆಎಸ್‌ ರಾಜ್ಯ ಕಾರ್ಯದರ್ಶಿ ಎಚ್‌.ವಿ. ದಿವಾಕರ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ., ಚಿತ್ತಾಪುರ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಅಲ್ಲಿಪೂರಕರ್ ಹಾಗೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT