ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೆಲೆಗೆ ಜಮೀನು ಖರೀದಿ; ಕ್ರಮಕ್ಕೆ ಆಗ್ರಹ

Last Updated 23 ಜೂನ್ 2022, 3:01 IST
ಅಕ್ಷರ ಗಾತ್ರ

ಕಲಬುರಗಿ: 'ಚಿತ್ತಾಪುರ ತಾಲ್ಲೂಕಿನ ಸ್ಟೇಷನ್‌ ತಾಂಡಾ ಹಾಗೂ ಇಟಗಾ ಗ್ರಾಮ ಸಮೀಪದ ಓರಿಯೆಂಟ್ ಸಿಮೆಂಟ್ ಕಂಪನಿಯು ರೈತರಿಂದ ಕಡಿಮೆ ಬೆಲೆಗೆ ಜಮೀನು ಖರೀದಿಸಿ, ಭೂ ಸ್ವಾಧೀನ ಕಾಯ್ದೆ ಉಲ್ಲಂಘಿಸಿದೆ’ ಎಂದು ಆರೋಪಿಸಿ ಕರ್ನಾಟಕ ರೈತರ ಪ್ರಾಂತ ಸಂಘದ ಪದಾಧಿಕಾರಿ, ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜೂನ್ 21ರಂದು ಇಟಗಾ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆ ಬುಧವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೊನೆಗೊಂಡಿತು. ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಯು ಬಸವರಾಜ, ‘ಕಂಪನಿಯು ಭೂ ಸ್ವಾಧೀನ ಕಾಯ್ದೆ ಪ್ರಕಾರ, ಪ್ರತಿ ಎಕರೆ ಜಮೀನಿಗೆ ₹ 60 ಲಕ್ಷಕ್ಕೆ ರೈತರಿಂದ ಜಮೀನು ಖರೀದಿಸಬೇಕಿತ್ತು. ಕೇವಲ ₹8 ಲಕ್ಷ ದರ ನೀಡಿ ಸ್ಟೇಷನ್ ತಾಂಡಾ, ಇಟಗಾ, ಮೊಗಲಾ, ಹುಡಾ, ದಿಗ್ಗಾಂವ ಗ್ರಾಮದ ರೈತರನ್ನು ವಂಚಿಸಿದೆ’ ಎಂದು ದೂರಿದರು.

‘ಭೂ ಸ್ವಾಧೀನ ಕಾಯ್ದೆ ಉಲ್ಲಂಘಿಸಿದ ಕಂಪೆನಿಯ ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೆ ಒಳಗಾಗಿ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು. ಕೃಷಿಕರಿಗೆ ಕಂಪೆನಿಯಲ್ಲಿ ಖಾಯಂ ಉದ್ಯೋಗ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕಂಪೆನಿಯು ಸುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಮೂಲಸೌಕರ್ಯ ಕಲ್ಪಿಸಬೇಕು. ಗುತ್ತಿಗೆ ಆಧಾರದ ಮೇಲೆ ಕಂಪೆನಿಗೆ ನೇಮಿಸಿಕೊಂಡ ಜಮೀನು ನೀಡಿದ ರೈತರನ್ನು ಖಾಯಂ ಮಾಡಿಕೊಳ್ಳಬೇಕು. ಕೆಲಸದಿಂದ ತೆಗೆದು ಹಾಕಿದ್ದ 13 ಕಾರ್ಮಿಕರನ್ನು ಮತ್ತೆ ನೇಮಿಸಿಕೊಳ್ಳಬೇಕು. ಬಾಕಿ ಉಳಿಸಿಕೊಂಡ ಕಾರ್ಮಿಕರ ವೇತನ ಪಾವತಿಸಬೇಕು. ಕಂಪನಿಯ ಧೂಳು ಸುತ್ತಲಿನ ಜಮೀನಿನ ಬೆಳೆಗಳ ಮೇಲೆ ಆವರಿಸಿಕೊಳ್ಳುತ್ತಿದೆ. ಇದರಿಂದ ಇಳುವರಿ ಕಡಿಮೆ ಆಗುತ್ತಿದೆ. ಹಾಗಾಗಿ, ಕಂಪೆನಿಯೇ ಆ ಎಲ್ಲ ಜಮೀನುಗಳನ್ನು ಖರೀದಿಸಬೇಕು. ಇಲ್ಲವೇ 3 ವರ್ಷಗಳ ಬೆಳೆ ನಷ್ಟ ಪರಿಹಾರ ಒದಗಿಸುವಂತೆ’ ಅವರು ಆಗ್ರಹಿಸಿದರು.

ಕಂಪೆನಿಯ ಕಲ್ಲು ಗಣಿಗಾರಿಕೆಯು ಇಟಗಾ ಗ್ರಾಮದ 200 ಮೀಟರ್‌ ದೂರದಲ್ಲಿ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮಕ್ಕೆ ಸಂಪರ್ಕಿಸುವ ಕಾಲು ಹಾದಿ, ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಜನ–ಜಾನುವಾರುಗಳ ಹಿತಕಾಯಲು ಮುಂದೆ ಬರಬೇಕು ಎಂದು ಬಸವರಾಜ ಒತ್ತಾಯಿಸಿದರು.

25 ಜನರ ಬಂಧನ, ಬಿಡುಗಡೆ

ಜಿಲ್ಲಾಧಿಕಾರಿ ಮನವಿ ಸಲ್ಲಿಸಲು ತೆರಳಿದಾಗ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಪಾಂಡುರಂಗ ಮಾವಿನಕರ ಸೇರಿ ಮಹಿಳೆಯರನ್ನೂ ಒಳಗೊಂಡು 25 ಜನರನ್ನು ಬಂಧಿಸಲಾಯಿತು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

‘ಓರಿಯಂಟ್ ಸಿಮೆಂಟ್ ಆಡಳಿತ ಮಂಡಳಿ ರೈತ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದೆ. ಅದರ ವಿರುದ್ಧ ಮನವಿ ಸಲ್ಲಿಸಲು ಹೋದಾಗ, ಜಿಲ್ಲಾಧಿಕಾರಿಗಳು ನಮ್ಮ ಅಹವಾಲು ಆಲಿಸದೆ ಕಂಪೆನಿಯ ಪ್ರತಿನಿಧಿಯಂತೆ ವರ್ತಿಸಿದ್ದಾರೆ’ ಎಂದು ಸಿಪಿಐ(ಎಂ) ನಗರ ಕಾರ್ಯದರ್ಶಿ ಎಂ.ಬಿ ಸಜ್ಜನ್ ಆರೋಪಿಸಿದರು.

‘ಜಿಲ್ಲಾಧಿಕಾರಿ ಪೊಲೀಸ್ ಬಲ ಬಳಸಿ ಮುಖಂಡರನ್ನು ಹೊರ ದಬ್ಬಿಸಿದ್ದಾರೆ. ನಂತರ ಅವರನ್ನು ಬಂಧಿಸಲು ಆಜ್ಞೆ ಮಾಡಿ, ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT