ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 5 ಡಿಸೆಂಬರ್ 2022, 16:17 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಯೊಬ್ಬರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.

ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ ಮಾತನಾಡಿ, ‘ಆಲಮಟ್ಟಿ ಜಲಾಶಯವನ್ನು 519ರಿಂದ 524.256 ಮೀಟರ್‌ಗೆ ಎತ್ತರಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ತಕ್ಷಣವೇ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಸುಮಾರು 40 ವರ್ಷಗಳಿಂದ ಬಗರ್ ಹುಕುಂ ಅರ್ಜಿ ಸಲ್ಲಿಸಿದ್ದ ರೈತರಿಗೆ ಪಟ್ಟಾ ನೀಡಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಅವರಿಗೆ ಪರಿಹಾರ ಧನ ಪಾವತಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಸಕ್ಕರೆ ಕಾರ್ಖಾನೆಗಳು ಜಿಲ್ಲೆಗೊಂದು ದರ ನಿಗದಿಪಡಿಸಿ ಕಬ್ಬು ನುರಿಸುತ್ತಿವೆ. ಏಕ ರೂಪದ ಬೆಲೆ ನಿಗದಿಪಡಿಸಬೇಕು. ಕೆಲವು ಸಕ್ಕರೆ ಕಾರ್ಖಾನೆಗಳು ಎಂಆರ್‌ಪಿ ಅನ್ವಯ ಹಣ ಪಾವತಿಸದೆ ಬೆಳೆಗಾರರಿಗೆ ಮೋಸ ಮಾಡುತ್ತಿವೆ. ಅಂತಹ ಕಾರ್ಖಾನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೃಷಿಕರು ಮತ್ತು ಮಹಿಳೆಯರಿಗೆ ಚಿನ್ನದ ಮೇಲೆ ಸಾಲ ನೀಡಿದ ಗೋಲ್ಡ್ ಲೋನ್ ಸಂಸ್ಥೆಗಳು ಮೂರು ತಿಂಗಳ ಒಳಗೆ ಚಿನ್ನಾಭರಣಗಳನ್ನು ಹರಾಜು ಹಾಕುತ್ತಿವೆ. ಚಿನ್ನ ಅಡವಿಟ್ಟವರ ಒಪ್ಪಿಗೆ ಸಹ ಪಡೆಯುತ್ತಿಲ್ಲ. ಈಗಾಗಲೇ ಹರಾಜು ಹಾಕಿದ ಚಿನ್ನವನ್ನು ವಾರಸುದಾರರಿಗೆ ಮರಳಿಸಬೇಕು’ ಎಂದು ಕೋರಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಸಿದ್ದನಗೌಡ ಬಿರಾದಾರ, ಪಂಚಯ್ಯ ಸ್ವಾಮಿ ಹಿರೇಮಠ, ರಾಜಾರಾಮ್ ಸಿಂಗ್, ನಾಮದೇವ್ ಎಂ.ಶಕಾಪುರ, ಲಕ್ಷ್ಮಿ ದೊಡ್ಮನಿ, ಬಿ.ಸದಾಶಿವ, ಸುವರ್ಣಾ, ಅಶೋಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT