ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓರಿಯೆಂಟ್ ಸಿಮೆಂಟ್ ಕಂಪನಿಯ ವಿರುದ್ಧ ರೈತರ ಅನಿರ್ದಿಷ್ಟ ಧರಣಿ ಆರಂಭ

Last Updated 21 ಸೆಪ್ಟೆಂಬರ್ 2021, 5:31 IST
ಅಕ್ಷರ ಗಾತ್ರ

ಚಿತ್ತಾಪುರ: ಓರಿಯೆಂಟ್ ಸಿಮೆಂಟ್ ಕಂಪನಿಯ ಗಣಿಗಾರಿಕೆಯ ದೂಳು, ಕಲ್ಲು ಕೃಷಿಕರ ಜಮೀನುಗಳಿಗೆ ವ್ಯಾಪಿಸಿಕೊಂಡು ಬೆಳೆಗಳು ಹಾನಿಯಾಗುತ್ತಿವೆ. ಕೂಡಲೇ ಗಣಿಗಾರಿಕೆಯ ಪರವಾನಿಗೆ ರದ್ದುಪಡಿಸುವಂತೆ ಎಂದು ಆಗ್ರಹಿಸಿ ತಾಲ್ಲೂಕಿನ ಇಟಗಾ ಗ್ರಾಮದ ರೈತರು ಸೋಮವಾರ ಜಮೀನಿನಲ್ಲಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ನಡೆಸುತ್ತಿದ್ದಾರೆ.

ನೆಲದೊಳಗಿನ ಸುಣ್ಣದ ಕಲ್ಲು ಹೊರ ತೆಗೆಯಲು ಕಂಪನಿಯ ಕಲ್ಲಿನ ಕ್ವಾರಿಯಲ್ಲಿ ಸಿಡಿಮದ್ದು ಬಳಸಿ ಸ್ಫೋಟ ನಡೆಸಲಾಗುತ್ತಿದೆ. ಇದು ವಾಯು ಮತ್ತು ಶಬ್ಧ ಮಾಲಿನ್ಯ ಉಂಟು ಮಾಡುತ್ತಿದೆ. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜಮೀನಿನಲ್ಲಿ ಕೆಲಸ ಮಾಡಲು ಜೀವ ಭಯ ಕಾಡುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಕಲ್ಲಿನ ಗಣಿಗಾರಿಕೆಯ ಪರವಾನಿಗೆ ಪಡೆದಿರುವ (ಎಂ.ಎಲ್-2681) ಗಣಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ರೈತರ ಜಮೀನಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಭೂ ಕಂದಾಯ ಕಾಯ್ದೆಯ 1964ರ 95(2), 95(4) ಮತ್ತು 95(7) ಉಲ್ಲಂಘನೆ ಆಗಿದೆ. ಈ ಬಗ್ಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಪ್ರತಿಭಟನೆ ನಿರತ ರೈತರು ಹೇಳಿದರು.

2012ರಿಂದ ಕ್ವಾರಿಯಲ್ಲಿ ದೊಡ್ಡ ಸ್ಫೋಟ ನಡೆಸಲಾಗುತ್ತಿದೆ. ಇದರಿಂದ ಗ್ರಾಮದಲ್ಲಿನ ಮನೆ, ಶಾಲಾ ಮತ್ತು ದೇವಸ್ಥಾನದ ಗೋಡೆಗಳು ಬಿರುಕು ಕಾಣಿಸಿಕೊಂಡಿವೆ. ಮನೆಗಳಿಗೆ ತೀವ್ರ ಹಾನಿ ಸಂಭವಿಸುತ್ತಿದೆ. ಗಣಿಯಲ್ಲಿನ ರಾಸಾಯನಿಕ ಮತ್ತು ಸಿಡಿಮದ್ದಿನ ದೂಳಿನ ಕಣಗಳ ಮಿಶ್ರಣ, ಗಣಿಯ ತಾಜ್ಯದ ನೀರು ಗ್ರಾಮದ ಪಕ್ಕದ ನಾಲೆಯಲ್ಲಿ ಹರಿಸಲಾಗುತ್ತಿದೆ. ಇದರಿಂದ ಜನ, ಜಾನುವಾರು, ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ರೈತರು ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಸೋಮವಾರ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗಣಿಗಾರಿಕೆಯ ದೂಳಿನಿಂದ ಉಂಟಾಗುತ್ತಿರುವ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಕಂಪನಿ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿದೆ. ಇದುವರೆಗೂ ಯಾರೂ ಸ್ಪಂದಿಸಿಲ್ಲ. ರೈತರ ಸಮಸ್ಯೆ ಈಡೇರಿಸಲು ಸರ್ಕಾರ, ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ನಿರ್ಲಕ್ಷ್ಯ ತೋರುತ್ತಿವೆ. ನ್ಯಾಯ ನೀಡುವಂತೆ ಕೋರಿ ಮತ್ತು ಗಣಿಗಾರಿಕೆ ಪರವಾನಿಗೆ ರದ್ದು ಮಾಡುವಂತೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ರೈತರು ಪ್ರಾದೇಶಿಕ ಆಯಕ್ತರಿಗೆ ದೂರಿದ್ದಾರೆ.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಕುಮಾರ ಯಲಗೋಡ, ರೈತರಾದ ಸುಭದ್ರಮ್ಮ ಚಂದ್ರಶೇಖರ ಪಾಟೀಲ, ಪ್ರಭು ವಾಲೀಕಾರ, ಮಹಾದೇವ ಮುಗಟಿ, ಸಾಬಣ್ಣ ಕುಂಬಾರ, ಅಂಬರೀಶ ವಾಡಿ, ಶಂಕರಪ್ಪ, ಪ್ರೇಮ ವಾಲಿಕಾರ್, ಇಮ್ಯಾನುವಲ್, ಶರಣಪ್ಪ, ನಾಗಪ್ಪ, ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಭಾಸ್ಕರ್ ಅಲ್ಲಿಪುರ ಇದ್ದರು.

*ರೈತರ ಜಮೀನು ಮತ್ತು ಬೆಳೆ ಹಾನಿ ಮಾಡುತ್ತಿರುವ ಗಣಿಗಾರಿಕೆಯ ಪರವಾನಿಗೆ ರದ್ದು ಮಾಡುವವರೆಗೆ ಹೋರಾಟ ನಡೆಸುತ್ತೇವೆ. ಇದಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ
ಮಹಾದೇವ ಮುಗಟಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT