ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್ ಮುಖಕ್ಕೆ ಮಸಿ ಹಚ್ಚಿದ ಕೃತ್ಯಕ್ಕೆ ಖಂಡನೆ

ಸಂಯುಕ್ತ ಹೋರಾಟ ಕಲಬುರಗಿ ವತಿಯಿಂದ ರೈತರ ಪ್ರತಿಭಟನೆ
Last Updated 31 ಮೇ 2022, 13:10 IST
ಅಕ್ಷರ ಗಾತ್ರ

ಕಲಬುರಗಿ: ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮುಖಕ್ಕೆ ಮಸಿ ಹಚ್ಚಿ, ಹಲ್ಲೆ ನಡೆಸಲು ಮುಂದಾದ ಘಟನೆಯನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ’ಸಂಯುಕ್ತ ಹೋರಾಟ ಕಲಬುರಗಿ‘ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ರೈತ ನಾಯಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶವ್ಯಾಪಿಯಾಗಿ ಮತ್ತು 13 ತಿಂಗಳುಗಳ ಕಾಲ ದೆಹಲಿ ಸುತ್ತಮುತ್ತ ಸುದೀರ್ಘವಾಗಿ ನಡೆದ ಲಕ್ಷಾಂತರ ರೈತ ಕುಟುಂಬಗಳ ಸಮರಶೀಲ ಐತಿಹಾಸಿಕ ಚಳವಳಿಯು, ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಮತ್ತು ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ಜಗತ್ತಿನ ಮುಂದೆ ಪ್ರಧಾನಮಂತ್ರಿ ಮಂಡಿಯೂರಿ ಕ್ಷಮೆ ಕೇಳುವಂತೆ ಮಾಡಿತ್ತು. ಇದರಿಂದ ಹತಾಶರಾದ ಕಾರ್ಪೊರೇಟ್ ಕಂಪನಿಗಳು ಮತ್ತು ಅವರ ಗುಲಾಮರಾದ ಬಿಜೆಪಿ ಮತ್ತು ಸಂಘ ಪರಿವಾರದವರು ಹತಾಶೆಯಿಂದ ಇಂತಹ ದುಷ್ಕೃತ್ಯಕ್ಕೆ ಇಳಿಯುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

‘ಇಂತಹ ದಾಳಿಗಳನ್ನು ರೈತ ಚಳವಳಿಗಳು ಸಹಿಸುವುದಿಲ್ಲ. ಪ್ರಧಾನಮಂತ್ರಿಗಳೇ ವಾಪಸ್ ಪಡೆದ ಲೂಟಿಕೋರ ಕಾಯ್ದೆಗಳನ್ನು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಭಂಡತನದಿಂದ ಮುಂದುವರಿಸುತ್ತಿದೆ. ಆದ್ದರಿಂದ ಈ ಸರ್ಕಾರಕ್ಕೂ ರೈತ ಸಂಘಗಳು ಮತ್ತು ನಾಯಕರು ರಾಜ್ಯದಲ್ಲಿ ಚಳವಳಿಯಲ್ಲಿ ತೊಡಗುವುದು ಸಹಿಸಲಾಗುತ್ತಿಲ್ಲ’ ಎಂದರು.

ರಾಜ್ಯ ಸರ್ಕಾರ ದಾಳಿಕೋರ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು ಮತ್ತು ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ಜೊತೆಗೆ ಕಾರ್ಪೊರೇಟ್ ಪರವಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ–2020, ಎಪಿಎಂಸಿ ತಿದ್ದುಪಡಿ ಕಾಯ್ದೆ–2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ–2020, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಸುಗ್ರೀವಾಜ್ಞೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ಎಐಕೆಕೆಎಂಎಸ್ ರೈತ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿ. ದಿವಾಕರ, ಸಂಯುಕ್ತ ಹೋರಾಟ ಕಲಬುರಗಿ ಜಿಲ್ಲಾ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾ ಮುಲ್ಲಾ, ಎಐಕೆಕೆಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಮಾನೆ, ಕಾರ್ಯದರ್ಶಿ ಮಹೇಶ ಎಸ್‌.ಬಿ, ಎಂ.ಬಿ. ಸಜ್ಜನ, ಜಾವೇದ್ ಹುಸೇನ್, ನಾಗಯ್ಯಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ನಾಗಿಂದ್ರಪ್ಪ ಥಂಬೆ, ಪಾಂಡುರಂಗ ಮಾವಿನಕರ, ಅಶ್ವಿನಿ ಮದನಕರ್, ರೇವಣಸಿದ್ದ ಕಲಬುರಗಿ, ಸಾಯಬಣ್ಣ ಗುಡುಬಾ, ರಾಯಪ್ಪ ಹುರಮುಂಜಿ ಇತರರು ನೇತೃತ್ವ ವಹಿಸಿದ್ದರು.

ಟಿಕಾಯತ್ ಅವರ ಮೇಲಿನ ದಾಳಿ ಬಿಜೆಪಿಯ ಫ್ಯಾಸಿಸ್ಟ್ ನೀತಿಯನ್ನು ಬಹಿರಂಗಪಡಿಸಿದೆ. ಬಿಜೆಪಿ ಸರ್ಕಾರಕ್ಕೆ ಕೃಷಿ ನೀತಿ ವಾಪಸ್ ಪಡೆಯುವ ಅನಿವಾರ್ಯತೆಯನ್ನು ರೈತರು ತಂದರು. ಹೀಗಾಗಿ ಹತಾಶೆಯಿಂದ ದಾಳಿ ಮಾಡಿದ್ದಾರೆ
- ಎಚ್‌.ವಿ. ದಿವಾಕರ
ಎಐಕೆಕೆಎಂಎಸ್ ರಾಜ್ಯ ಅಧ್ಯಕ್ಷ

ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ರಾಕೇಶ್ ಟಿಕಾಯತ್ ಅವರ ಮೇಲೆ ಹಲ್ಲೆ ನಡೆದ ದುಷ್ಕರ್ಮಿಗಳನ್ನು ತಕ್ಷಣವೇ ಬಸವರಾಜ ಬೊಮ್ಮಾಯಿ ಸರ್ಕಾರ ಗಡೀಪಾರು ಮಾಡಬೇಕು
-ಶರಣಬಸಪ್ಪ ಮಮಶೆಟ್ಟಿ
ಸಂಯುಕ್ತ ಹೋರಾಟ ಜಿಲ್ಲಾ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT