ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜಲಮಂಡಳಿ, ಪಾಲಿಕೆಗೆ ₹ 11 ಸಾವಿರ ದಂಡ

Last Updated 23 ಸೆಪ್ಟೆಂಬರ್ 2022, 13:20 IST
ಅಕ್ಷರ ಗಾತ್ರ

ಕಲಬುರಗಿ: ಸಕಾಲಕ್ಕೆ ನೀರು ಪೂರೈಸದ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದ್ದರ ಕುರಿತು ಗ್ರಾಹಕರೊಬ್ಬರ ದೂರಿನ ವಿಚಾರಣೆ ನಡೆಸಿದ ಇಲ್ಲಿನ ಜಿಲ್ಲಾ ಗ್ರಾಹಕ ವೇದಿಕೆಯು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನೀರು ಪೂರೈಕೆ ಮಾಡುತ್ತಿರುವ ಎಲ್‌ ಅಂಡ್ ಟಿ ಕಂಪನಿಗೆ ಒಟ್ಟು ₹ 11 ಸಾವಿರ ದಂಡ ವಿಧಿಸಿದೆ.

ತಮ್ಮ ಮನೆಗೆ ಸಮರ್ಪಕವಾಗಿ ಮಂಡಳಿಯು ನೀರು ಪೂರೈಕೆ ಮಾಡುತ್ತಿಲ್ಲ. ಅಲ್ಲದೇ, ಕಲುಷಿತ ನೀರು ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ನಗರದ ಎಸ್‌.ಬಿ. ರಸ್ತೆಯ ರಾಮನಗರ ನವಾಸಿ ಶಂಕರ ಕಟ್ಟಿಮನಿ ಅವರು ಗ್ರಾಹಕ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು.

2004ರಿಂದ 2011ರವರೆಗೆ ₹ 60ರಂತೆ ಮಂಡಳಿಯವರು ಮಾಸಿಕ ನಳದ ಬಿಲ್ ಪಡೆದಿದ್ದಾರೆ. 2011ರಿಂದ 2021ರವರೆಗೆ ₹ 175ರಂತೆ ಬಿಲ್ ಕಟ್ಟಿಸಿಕೊಂಡಿದ್ದಾರೆ. ಆದರೂ, ಸಕಾಲಕ್ಕೆ ನೀರು ಪೂರೈಕೆ ಮಾಡಿಲ್ಲ. ಹೀಗಾಗಿ, ಒಟ್ಟು ₹ 90 ಸಾವಿರ ಪರಿಹಾರ ನೀಡಬೇಕು ಎಂದು ಕೋರಿದ್ದರು.

ದೂರುದಾರರ ವಾದವನ್ನು ಭಾಗಶಃ ಪುರಸ್ಕರಿಸಿರುವ ವೇದಿಕೆಯು ಗ್ರಾಹಕನಿಗೆ ಪರಿಹಾರ ರೂಪದಲ್ಲಿ ₹ 5 ಸಾವಿರ, ಮಾನಸಿಕ ಹಿಂಸೆಗಾಗಿ ₹ 3 ಸಾವಿರ ಹಾಗೂ ಪ್ರಕರಣದ ಖರ್ಚಿಗಾಗಿ ₹ 3 ಸಾವಿರ ನೀಡಬೇಕು ಎಂದು ವೇದಿಕೆಯ ಅಧ್ಯಕ್ಷ ಎ.ಎಸ್. ಸದಲಗೆ ಅವರು ಆದೇಶ ಹೊರಡಿಸಿದ್ದಾರೆ.

ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮಂಡಳಿಯ ನೀರು ಬಿಡುವ ವ್ಯಕ್ತಿ ಅಬ್ದುಲ್ ಘನಿ, ಕಾರ್ಯನಿರ್ವಾಹಕ ಎಂಜಿನಿಯರ್, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎಲ್ ಅಂಡ್ ಟಿ ಕಂಪನಿಯ ಜನರಲ್ ಮ್ಯಾನೇಜರ್ ಅವರು ಜಂಟಿಯಾಗಿ ಈ ಪರಿಹಾರದ ಮೊತ್ತವನ್ನು ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT