ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಘರ್ಷಣೆ; 32 ಮಂದಿ ವಿರುದ್ಧ ಎಫ್‌ಐಆರ್‌

19 ಮಂದಿ ಮೇಲೆ ಜಾತಿ ನಿಂದನೆ– ಹಲ್ಲೆ ಆರೋಪ, 13 ಮಂದಿ ವಿರುದ್ಧ ಮಹಿಳೆಯರ ಮೇಲಿನ ಹಲ್ಲೆ ದೂರು
Last Updated 10 ಏಪ್ರಿಲ್ 2021, 3:01 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಮರಗೋಳ ಗ್ರಾಮದಲ್ಲಿ ಈಚೆಗೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದು, ಗುರುವಾರ ಪರಸ್ಪರ ದೂರು ದಾಖಲಿಸಲಾಗಿದೆ.

ಒಂದು ಗುಂಪಿನ ವ್ಯಕ್ತಿ 19 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರೆ; ಇನ್ನೊಂದು ಗುಂಪಿನವರು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾಗಿ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ಇದರಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಸೇರಿದ್ದಾರೆ.

ಎರಡೂ ಪ್ರಕರಣಗಳ ವಿವರ: ‘ಏ.6ರಂದು ರಾತ್ರಿ 9.30ಕ್ಕೆ ಗೆಳೆಯರೊಂದಿಗೆ ಗ್ರಾಮದ ಬಸವಣ್ಣ ಕಟ್ಟೆಯ ಮೇಲೆ ಕುಳಿತ್ತಿರುವಾಗ ವಿರುಪಾಕ್ಷಿಗೌಡ ರುದ್ರಗೌಡ ಅವರು ಇತರ ಜನರೊಂದಿಗೆ ಬಂದು ಹಲ್ಲೆ ಮಾಡಿದ್ದಾರೆ. ನಮ್ಮ ಮಾಲಿಗೌಡರ ಕಟ್ಟೆಯ ಮೇಲೆ ಏಕೆ ಕುಳಿತಿರುವೆ ಎಂದು ಜಗಳ ತೆಗೆದು, ಲಂಬಾಣಿ ಜಾತಿ ಹೆಸರಿನಿಂದ ನಿಂದಿಸಿ, ಅವಾಚ್ಯ ಪದಗಳಿಂದ ಬೈದಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದುಸಂತೋಷ ವಸಂತ ಚವಾಣ್ ಎನ್ನುವವರು 19 ಮಂದಿಯ ಮೇಲೆ ಪೊಲೀಸ್‌ ಠಾಣೆಗೆ ಜಾತಿ ನಿಂದನೆ, ಹಲ್ಲೆ ಹಾಗೂ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ.

‘ಬಸವರಾಜ ಮತ್ತು ಮುರುಗೇಶ ಎಂಬುವರು ಮಚ್ಚು ಹಿಡಿದುಕೊಂಡು ಬಂದು, ಕುಡಿದ ಅಮಲಿನಲ್ಲಿ ನನ್ನ ಸ್ನೇಹಿತರಾದ ಸುನೀಲಕುಮಾರ ಹಾಗೂ ಅನಿಲಕುಮಾರ, ಮತಿವಂತ ಅವರ ತಲೆಗೆ ಮತ್ತು ಬೆನ್ನಿಗೆ ಹೊಡೆದಿದ್ದಾರೆ. ನನ್ನ ಹೊಟ್ಟೆ, ಬೆನ್ನಿಗೆ ಹೊಡೆದಿದ್ದಾರೆ. ಜಗಳ ಬಿಡಿಸಲು ಬಂದವರಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ವಿರುಪಾಕ್ಷಗೌಡ, ಚಂದ್ರಕಾಂತ ಪಾಟೀಲ, ಚಂದ್ರು ದಂಡೆ ಅವರು ಕೊಡಲಿ ಬಡಿಗೆ ಹಿಡಿದುಕೊಂಡು ಬಂದು ಕಣ್ಣಿಗೆ ಖಾರದ ಪುಡಿ ಹಾಕಿ ಹೊಡೆದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಂತೋಷ ಅವರು ನೀಡಿರುವ ದೂರು ಆಧರಿಸಿ ವಿರುಪಾಕ್ಷಗೌಡ ರುದ್ರಗೌಡ, ಮುರುಗೇಶ ಗುರುಪಾದಪ್ಪ, ಬಸವರಾಜ ಕುಬೇರಗೌಡ, ಬಸಲಿಂಗ ಸೋಮನಗೌಡ, ಸೋಮನಗೌಡ ಶಾಂತಗೌಡ, ಗುಂಡಪ್ಪಗೌಡ ವಿಶ್ವನಾಥ, ರಾಜು ಸೋಮನಗೌಡ, ರಾಕೇಶ ವಿಶ್ವನಾಥಗೌಡ, ಚಂದ್ರು ಗುರುಪಾದಪ್ಪ, ಚಂದ್ರಕಾಂತ ಸುಬ್ಬಣ್ಣ ಪಾಟೀಲ, ವೀರಣಗೌಡ ಜಗದೇವಪ್ಪ, ಅಶೋಕ ಶಾಮರಾಯ ಪಾಟೀಲ, ಸಂಜೀವಕುಮಾರ ಮಹಾಂತಗೌಡ, ಶ್ರೀಧರ ಶಿವಕುಮಾರ, ಸಂತೋಷ ಪಾಟೀಲ, ಸುರೇಖಾ ವಿರುಪಾಕ್ಷಿ, ಈಶ್ವರಮ್ಮ ಕುಬೇರಗೌಡ, ಸಂಗೀತಾ ಚಂದ್ರಕಾಂತ, ಸೋಮನಗೌಡ ಶಾಂತಗೌಡ ಅವರ ವಿರುದ್ಧ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯರಿಗೆ ಜೀವ ಬೆದರಿಕೆ: ಇದೇ ಪ್ರಕರಣದ ಇನ್ನೊಂದು ಗುಂಪಿನವರು ಪ್ರತಿ ದೂರು ದಾಖಲಿಸಿದ್ದು, ‘ಮರಗೋಳ ಗ್ರಾಮದಲ್ಲಿ ಏ.6ರಂದು ರಾತ್ರಿ 9 ಗಂಟೆಗೆ ಬಸವಣ್ಣ ದೇವಸ್ಥಾನದಲ್ಲಿ ಚಂದ್ರಕಾಂತ, ವಿರುಪಾಕ್ಷಪ್ಪ, ಚಂದ್ರಕಾಂತ ಸುಭಾಶ್ಚಂದ್ರ ಕುಳಿತಿದ್ದಾಗ ಸುನೀಲ ಶಂಕ್ರಪ್ಪ ಬಿರಾದಾರ ಎಂಬುವವರು ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನಂತರ ಅನಿಲ ಗೋಣಿ, ಮಹಾಂತಗೌಡ, ಮುನಿಯಪ್ಪ, ಬಸಪ್ಪ ಎಂಬುವವರು ನಮ್ಮ ಮಾವನವರಿಗೆ ಹೊಡೆದಿದ್ದಾರೆ. ಮತ್ತೆ 15 ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ’ ಎಂದು ಮರಗೋಳ ಗ್ರಾಮದ ಮುರುಗೇಶ ಗುರುಪಾದಪ್ಪ ದಂಡೆ ದೂರು ನೀಡಿದ್ದಾರೆ.

‘ಮನೆಯೊಳಗೆ ನುಗ್ಗಿ ಕುಟುಂಬದ ಮಹಿಳೆಯರಾದ ಸಂಗೀತಾ, ಈಶ್ವರಮ್ಮ ಮತ್ತು ಅವರ ಎರಡು ಮಕ್ಕಳಿಗೂ ಹೊಡೆದು ಅವಾಚ್ಯವಾಗಿ ಬೈದಿದ್ದಾರೆ. ನನ್ನ ಎಡಗೈ ಮುರಿದಿದ್ದಾರೆ. ಸೊಂಟ, ಬೆನ್ನಲ್ಲಿ ಗಾಯ ಮಾಡಿದ್ದಾರೆ. ಆರು ಜನರು ನನ್ನ ಮೇಲೆ ಕುಳಿತು ಹೊಡೆದಿದ್ದಾರೆ. ನಮಗೆ, ನಮ್ಮ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಅವರಿಂದ ಜೀವ ಬೆದರಿಕೆ ಇದೆ’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.

ಮುರುಗೇಶ ನೀಡಿರುವ ದೂರಿನ ಪ್ರಕಾರ ಅನೀಲ ಅಮೃತ ಗೋಣಿ, ರಾಜು ಅಮೃತ ಗೋಣಿ, ಸಂತೋಷ ವಸಂತ, ಮಲ್ಲಿಕಾರ್ಜುನ ಶಂಕ್ರಪ್ಪ, ಮತಿವಂತ ಶಂಕ್ರಪ್ಪ, ರಮೇಶ ಮರಗೋಳ, ಅಂಬರೀಷ್ ಭೀಮರಾಯ, ನಾಗು ಸಾಬಯ್ಯ, ಸಿದ್ದು ನಾಗೇಶ, ಸಂತೋಷ ವಿಜಪ್ಪ, ಮುನಿಯಪ್ಪ ಮಹಾಂತಗೌಡ, ಬಸಪ್ಪ ಮಹಾಂತಗೌಡ, ಸುನೀಲ ಶಂಕ್ರಪ್ಪ ಹೀಗೆ ಒಟ್ಟು 13 ಜನರ ವಿರುದ್ಧ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT