ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ, ವಾಹನ ಕೊರತೆ: ಅಗ್ನಿ ಅವಘಡ ಸ್ಥಳಕ್ಕೆ ತಲುಪುವ ಸವಾಲು!

ಜಿಲ್ಲೆಯ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ, ವಾಹನ ಕೊರತೆ, 50, 60 ಕಿ.ಮೀ.ಗೆ ಒಂದು ಠಾಣೆ
Last Updated 9 ಮೇ 2022, 2:36 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಅಫಜಲಪುರ, ಜೇವರ್ಗಿ ಹಾಗೂ ಆಳಂದ ತಾಲ್ಲೂಕಿನಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದು, ಬೇಸಿಗೆ ಸಮಯದಲ್ಲಿ ಬೆಂಕಿ ಹೊತ್ತಿಕೊಳ್ಳುವುದು ಮಾಮೂಲು. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದರೆ ಒಂದಷ್ಟು ಬೆಳೆಯನ್ನು ಉಳಿಸಬಹುದು. ಆದರೆ, ಅಗ್ನಿಶಾಮಕ ಇಲಾಖೆಯ ವಾಹನ ಅಲ್ಲಿಗೆ ಹೋಗುವಷ್ಟರಲ್ಲಿ ಇಡೀ ಬೆಳೆ ಭಸ್ಮವಾಗಿ ಹೋಗಿರುತ್ತದೆ.

2019ರಲ್ಲಿ ಜಿಲ್ಲೆಯು ತೀವ್ರ ಸ್ವರೂಪದ ಅತಿವೃಷ್ಟಿಗೆ ಒಳಗಾಗಿತ್ತು. ಭೀಮೆ, ಕಾಗಿಣಾ ರೌದ್ರಾವತಾರ ತಾಳಿ ಮನೆಗಳನ್ನು ಹೊಕ್ಕ ಪರಿಣಾಮ ಅನೇಕ ಗ್ರಾಮಸ್ಥರು ಮನೆಯ ಮಾಳಿಗೆ ಏರಿ ಕುಳಿತುಕೊಳ್ಳಬೇಕಿತ್ತು. ಕಲಬುರಗಿ, ಶಹಾಬಾದ್, ಸೇಡಂ, ಚಿತ್ತಾಪುರ, ಜೇವರ್ಗಿ, ಅಫಜಲಪುರ ತಾಲ್ಲೂಕಿನ ಕೆಲವು ಗ್ರಾಮಗಳೇ ಜಲಾವೃತವಾಗಿದ್ದವು. ಈ ಸಂದರ್ಭದಲ್ಲಿ ತಕ್ಷಣಕ್ಕೆ ರಕ್ಷಣೆಗೆ ತೆರಳಬೇಕಿದ್ದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವಿಭಾಗದಲ್ಲಿ ಸಿಬ್ಬಂದಿ, ವಾಹನ, ಸಾಕಷ್ಟು ಬೋಟ್‌ಗಳ ಕೊರತೆ ಕಾಡಿತ್ತು.

ಕಲಬುರಗಿಯ ಸೂಪರ್ ಮಾರ್ಕೆಟ್‌ನಲ್ಲಿ ಖಾಸಗಿಯವರಿಗೆ ಸೇರಿದ ಜನರೇಟರ್ ಕೊಠಡಿಗೆ ಕಳೆದ ಡಿಸೆಂಬರ್ 26ರಂದು ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ನಂದಿಸಲು ಹೋಗಿದ್ದ ಸಿಬ್ಬಂದಿಯೊಬ್ಬರು ಜನರೇಟರ್ ಸ್ಫೋಟದ ಆಘಾತಕ್ಕೆ ಹೃದಯಾಘಾತದಿಂದ ತೀರಿಕೊಂಡರು. ಇಂತಹ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿದ್ದವು.‌

ಜನವರಿ 13ರಂದು ಕಲಬುರಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮದಲ್ಲಿ ಕಬ್ಬಿನ ಹೊಲದ ಮಧ್ಯದಲ್ಲಿರುವ ವಿದ್ಯುತ್ ಟಿ.ಸಿ.ಯಿಂದ ಬೆಂಕಿಯ ಜ್ವಾಲೆ ಸಿಡಿದು 12 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿತ್ತು. ನಗರದಿಂದ 40 ಕಿ.ಮೀ. ದೂರದಲ್ಲಿರುವ ಹೇರೂರ ತಲುಪುವಷ್ಟರಲ್ಲಿ ಸಾಕಷ್ಟು ಹಾನಿಯಾಗಿತ್ತು.

ಮಂಜೂರಾದ ಸಿಬ್ಬಂದಿಯ ಅರ್ಧಕ್ಕಿಂತ ಕಡಿಮೆ ಸಿಬ್ಬಂದಿ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿದ್ದಾರೆ. ಒಂದಷ್ಟು ಸಿಬ್ಬಂದಿಯ ನೇಮಕಾತಿಗಾಗಿ ಪ್ರಕ್ರಿಯೆ ನಡೆದಿದ್ದರೂ ಇನ್ನೂ ಪೂರ್ಣಗೊಂಡು ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ, ಇದ್ದ ಸಿಬ್ಬಂದಿಯನ್ನೇ ಬಳಸಿಕೊಂಡು ಅಗ್ನಿಶಮನ ಹಾಗೂ ಜನರನ್ನು ರಕ್ಷಿಸುವ ಹೊಣೆಗಾರಿಕೆ ಅಗ್ನಿಶಾಮಕ ದಳದ ಮೇಲಿದೆ.

ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಮಾತ್ರ ವಿಭಾಗೀಯ ಮಟ್ಟದ ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ಹುದ್ದೆಗಳಿವೆ. ಕಲಬುರಗಿಯಲ್ಲಿ ಕಪನೂರ ಕೈಗಾರಿಕಾ ಪ್ರದೇಶ, ನಂದೂರ–ಕೆಸರಟಗಿ ಕೈಗಾರಿಕಾ ಪ್ರದೇಶಗಳಿವೆ. ಹುಮನಾಬಾದ್ ರಸ್ತೆಯಲ್ಲಿ ಪ್ರಮುಖ ವಾಹನ ಕಂಪನಿಗಳ ಶೋರೂಮ್‌ಗಳಿವೆ. ಫರಹಬಾತಾದ್, ಕಟ್ಟಿಸಂಗಾವಿ ಬಳಿ ಹತ್ತಿ ಸಂಸ್ಕರಣ ಘಟಕಗಳಿವೆ. ಕಲಬುರಗಿಯ ಗಂಜ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿತ್ಯ ಲಕ್ಷಾಂತರ ಟನ್ ಆಹಾರ ಧಾನ್ಯಗಳ ಸಂಗ್ರಹವಾಗುತ್ತದೆ. ಒಂದು ಕಡೆ ಅಗ್ನಿ ಆಕಸ್ಮಿಕ ಸಂಭವಿಸಿದರೂ ಭಾರಿ ದೊಡ್ಡ ಮೊತ್ತದ ಹಾನಿಯಾಗುತ್ತದೆ. ಹೀಗಾಗಿ, ನಗರದಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಅಗತ್ಯವಿದೆ. ಹೊಸ ಅಗ್ನಿಶಾಮಕ ಠಾಣೆ ಮಂಜೂರಾತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೂ ಇನ್ನೂ ಪೂರಕ ಸ್ಪಂದನೆ ಸಿಕಿಲ್ಲ. ಹೀಗಾಗಿ, ಇದ್ದುದರಲ್ಲಿಯೇ ನಿರ್ವಹಣೆ ಮಾಡಿಕೊಂಡು ಹೋಗಬೇಕಿದೆ ಎನ್ನುತ್ತಾರೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯೊಬ್ಬರು.

ಅಫಜಲಪುರದ ಅಗ್ನಿಶಾಮಕ ಠಾಣೆಯಲ್ಲಿ 27 ಮಂಜೂರಾದ ಹುದ್ದೆಗಳ ಪೈಕಿ 9 ಖಾಲಿ ಇವೆ. 2 ಅಗ್ನಿಶಾಮಕ ವಾಹನಗಳಿದ್ದು ಅದರಲ್ಲೊಂದು ವಾಹನ ತುಂಬಾ ಹಳೆಯದಾಗಿದೆ. ಅದರ ಬದಲು ಹೊಸ ವಾಹನ ಬೇಕಾಗಿದೆ . ತಾಲ್ಲೂಕಿನಲ್ಲಿ ಕಬ್ಬು ಬೆಳೆಯುವ ಕ್ಷೇತ್ರ ಹೆಚ್ಚಾಗುತ್ತಿದ್ದು ಪ್ರತಿವರ್ಷ ಸುಮಾರು 100 ಕಬ್ಬಿನ ಗದ್ದೆಗಳು ಬೆಂಕಿ ಹೊತ್ತಿ ನಾಶವಾಗುತ್ತದೆ. ಅದಕ್ಕಾಗಿ ವಾಹನಗಳ ದುರಸ್ತಿ ಇಲ್ಲವೇ ಹೊಸ ವಾಹನ ಅವಶ್ಯಕತೆ ಇದೆ ಎನ್ನುತ್ತಾರೆ ಅಗ್ನಿಶಾಮಕ ಕೇಂದ್ರದ ಅಧಿಕಾರಿ ವಿಶ್ವನಾಥ ಕಾಮರೆಡ್ಡಿ.

ಹೊಸ ತಾಲ್ಲೂಕುಗಳಲ್ಲಿಲ್ಲ ಅಗ್ನಿಶಾಮಕ ಠಾಣೆ!

ಹೊಸ ತಾಲ್ಲೂಕುಗಳು ರಚನೆಯಾಗಿ 3 ವರ್ಷ ಕಳೆದರೂ ಇನ್ನೂ ಅಲ್ಲಿ ಅಗ್ನಿಶಾಮಕ ಠಾಣೆಗಳು ಮಂಜೂರಾಗಿಲ್ಲ. ಇದರಿಂದಾಗಿ ಮನೆ, ವಾಣಿಜ್ಯ ಸಂಕೀರ್ಣ, ಅಗ್ನಿ ಆಕಸ್ಮಿಕ ಮತ್ತಿತರ ಕಡೆಗಳಲ್ಲಿ ಅವಘಡಗಳು ಸಂಭವಿಸಿದಾಗ ಹಳೆ ತಾಲ್ಲೂಕು ಕೇಂದ್ರಗಳಿಂದಲೇ ಅಗ್ನಿಶಾಮಕ ಸಿಬ್ಬಂದಿ ಬರಬೇಕು.

ಜೇವರ್ಗಿ ತಾಲ್ಲೂಕಿನಿಂದ ಯಡ್ರಾಮಿ ತಾಲ್ಲೂಕಿನ ಕೊನೆಯ ಹಳ್ಳಿ 60 ಕಿ.ಮೀ. ದೂರದಲ್ಲಿದೆ. ಕಲಬುರಗಿ ಅಥವಾ ಆಳಂದದಿಂದ ಕಮಲಾಪುರದ ಗಡಿ ಗ್ರಾಮಗಳಿಗೆ ತೆರಳಬೇಕೆಂದರೆ 50 ಕಿ.ಮೀ. ದೂರ ಆಗುತ್ತದೆ. ಆದ್ದರಿಂದ ಹೊಸ ತಾಲ್ಲೂಕು ಕೇಂದ್ರಗಳಲ್ಲಿಯೂ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇಕು ಎಂಬ ಬೇಡಿಕೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇನ್ನೂ ಸ್ಪಂದಿಸಿಲ್ಲ. ಕಮಲಾಪುರದಲ್ಲಿ ಜಾಗವನ್ನು ಮಂಜೂರು ಮಾಡಿದ್ದರೂ ಪಟ್ಟಣದಿಂದ ದೂರ ಇದೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಕೊಡಬೇಕು ಎಂಬ ಕಾರಣಕ್ಕೆ ಇಲಾಖೆ ಆ ಜಾಗವನ್ನು ಒಪ್ಪಿಕೊಂಡಿಲ್ಲ.

ಬೇಕೆಂದಲ್ಲಿ ಜಾಗ ಕೊಡಿಸುವೆ

ಹೊಸ ತಾಲ್ಲೂಕು ಕೇಂದ್ರ ಕಮಲಾಪುರದಲ್ಲಿ ಅಗ್ನಿಶಾಮಕ ಠಾಣೆ ಅಗತ್ಯವಿದೆ. ಅಲ್ಲಿ ಇಲಾಖೆಯವರು ಬೇರೆ ಕಡೆ ಜಾಗ ಕೇಳಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಅವರು ಕೇಳಿದ ಕಡೆ ಜಾಗವನ್ನು ಒದಗಿಸಲು ಸಿದ್ಧನಿದ್ದೇನೆ.

ಬಸವರಾಜ ಮತ್ತಿಮೂಡ, ಶಾಸಕ, ಕಲಬುರಗಿ ಗ್ರಾಮೀಣ

ಎಪಿಎಂಸಿಯಲ್ಲಿ ಠಾಣೆ ಬೇಕು

ಕಲಬುರಗಿಯ ಗಂಜ್‌ನಲ್ಲಿರುವ ಎಪಿಎಂಸಿಯಲ್ಲಿ ಹತ್ತಿ ಹಾಗೂ ಇತರ ಆಹಾರ ಧಾನ್ಯಗಳನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡರೆ ಶಹಾ ಬಜಾರ್‌ ನಾಕಾದಲ್ಲಿರುವ ಅಗ್ನಿಶಾಮಕ ಠಾಣೆಯಿಂದ ವಾಹನಗಳು ಬರಬೇಕು. ಅದರ ಬದಲು ಎಪಿಎಂಸಿ ಆವರಣದಲ್ಲೇ ಒಂದು ಠಾಣೆ ಇದ್ದರೆ ನಷ್ಟದ ಪ್ರಮಾಣವನ್ನು ತಪ್ಪಿಸಬಹುದು.

ಪ್ರಶಾಂತ ಮಾನಕರ, ಎಚ್‌ಕೆಸಿಸಿಐ ಅಧ್ಯಕ್ಷ


‘ಅಗತ್ಯ ಸಿಬ್ಬಂದಿ ನೇಮಕ’

ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಅಗ್ನಿಶಾಮಕ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದ್ದು, ಜೂನ್, ಜುಲೈನಲ್ಲಿ ಹೊಸ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹೊಸ ತಾಲ್ಲೂಕುಗಳಾದ ಯಡ್ರಾಮಿ, ಕಮಲಾಪುರ, ಕಾಳಗಿ ಹಾಗೂ ಶಹಾಬಾದ್‌ನಲ್ಲಿ ಹೊಸ ಠಾಣೆಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಕಲಬುರಗಿಯಲ್ಲಿ ಇನ್ನೊಂದು ಠಾಣೆಗಾಗಿ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ.

ಅಂಕೋಶ ಎ. ಆಳಂದೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ


ಪ್ರತಿ 20 ಕಿ.ಮೀ.ಗೆ ಠಾಣೆ ಬರಲಿ

ನನ್ನ ಹೊಲದಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ಬಿದ್ದಿತ್ತು. ಚಿಂಚೋಳಿಯಿಂದ ಅಗ್ನಿಶಾಮಕ ಸಿಬ್ಬಂದಿ ಕಾಳಗಿ ತಾಲ್ಲೂಕಿನ ನನ್ನೂರು ರಾಜಾಪುರಕ್ಕೆ ಬರುವಷ್ಟರಲ್ಲಿ ಬಹುತೇಕ ಅಗ್ನಿಗೆ ಆಹುತಿಯಾಗಿತ್ತು. ಏಕೆಂದರೆ 50 ಕಿ.ಮೀ. ದೂರವನ್ನು ಕ್ರಮಿಸಿ ಬರಬೇಕಿತ್ತು. ಇದನ್ನು ತಪ್ಪಿಸಲು ಪ್ರತಿ 15ರಿಂದ 20 ಕಿ.ಮೀ.ಗೆ ಒಂದರಂತೆ ಅಗ್ನಿಶಾಮಕ ಠಾಣೆ ಆರಂಭಿಸಬೇಕು.

ಜಗದೀಶ ಪಾಟೀಲ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ


ಚೌಡಾಪುರದಲ್ಲಿ ಠಾಣೆ ಅಗತ್ಯ

ಅಫಜಲಪುರದಿಂದ ಆತನೂರ ಹೋಬಳಿಯ ಗ್ರಾಮಗಳು ಸುಮಾರು 50 ಕಿಲೋಮೀಟರ್ ದೂರವಾಗುತ್ತದೆ. ಯಾವುದೇ ಸಂಪತ್ತು ಬೆಂಕಿಯಿಂದ ಅನಾಹುತವಾದರೆ ವಾಹನ ಬರುವುದರೊಳಗಾಗಿ ಎಲ್ಲವೂ ನಾಶವಾಗುತ್ತದೆ. ಅದಕ್ಕಾಗಿ ಚೌಡಾಪುರದಲ್ಲಿ ಇನ್ನೊಂದು ಅಗ್ನಿಶಾಮಕ ಕೇಂದ್ರವನ್ನು ಸರ್ಕಾರ ಮಂಜೂರು ಮಾಡಬೇಕು. ಈ ಭಾಗದಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ನಲ್ಲಿ ರೈತರ ಕಬ್ಬು ಬೆಳೆಯುತ್ತಾರೆ. ಅದಕ್ಕಾಗಿ ಸರ್ಕಾರ ಅಗ್ನಿಶಾಮಕ ಕೇಂದ್ರ ಮಂಜೂರು ಮಾಡಬೇಕು.

ಲಕ್ಷ್ಮಣ ಕಟ್ಟಿಮನಿ, ರೈತ ಮುಖಂಡ, ಅಫಜಲಪುರ

***

ಅಗ್ನಿಶಾಮಕ ಠಾಣೆಗಳ ಸಂಪರ್ಕ ಸಂಖ್ಯೆಗಳು

ಕಲಬುರಗಿ–08472 220101

ಚಿಂಚೋಳಿ–08475 273001

ಸೇಡಂ–08441 276333

ಆಳಂದ–08477 202151

ಚಿತ್ತಾಪುರ–08474 236101

ಅಫಜಲಪುರ–08470 28301

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT