ಮಂಗಳವಾರ, ಸೆಪ್ಟೆಂಬರ್ 21, 2021
27 °C
ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ಹೇಳಿಕೆ

‘3 ತಿಂಗಳಲ್ಲಿ ವಿಮಾನ ತರಬೇತಿ ಸಂಸ್ಥೆ ಕಾರ್ಯಾಚರಣೆ’; ಪ್ರದೀಪ್ ಸಿಂಗ್ ಖರೋಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ನೀಡಲು ಆಯ್ಕೆಯಾದ ಎರಡು ಸಂಸ್ಥೆಗಳ ಹ್ಯಾಂಗರ್ ಮತ್ತು ಅಪ್ರೊನ್ ಕಟ್ಟಡಗಳ ನಿರ್ಮಾಣಕ್ಕೆ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ಅವರು ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಚಿವಾಲಯವು ಇಂತಹ ತರಬೇತಿ ಕೇಂದ್ರಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸಂಸ್ಥೆಗಳು ತರಬೇತಿ ನೀಡುವಂತಾಗಬೇಕಿದೆ. ಈಗಾಗಲೇ ವಿದೇಶಗಳಿಂದಲೂ ಇಲ್ಲಿಗೆ ಪೈಲಟ್ ತರಬೇತಿ ಪಡೆಯಲು ಬರುತ್ತಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 800ರಿಂದ 1000 ಪೈಲಟ್‌ಗಳು ಹೆಚ್ಚುವರಿಯಾಗಿ ಬೇಕಾಗುತ್ತಿದ್ದು, ಸದ್ಯಕ್ಕೆ ವಿವಿಧ ತರಬೇತಿ ಸಂಸ್ಥೆಗಳಿಂದ 400 ಪೈಲಟ್‌ಗಳು ಮಾತ್ರ ತರಬೇತಿ ಪೂರೈಸಿ ವಿಮಾನ ಚಾಲನೆ ಮಾಡುತ್ತಿದ್ದಾರೆ’ ಎಂದರು.

‘ಎರಡೂ ತರಬೇತಿ ಸಂಸ್ಥೆಗಳು ಮುಂದಿನ ಮೂರು ತಿಂಗಳಲ್ಲಿ ತರಬೇತಿ ನೀಡುವ ವಿಶ್ವಾಸವಿದೆ. ದೇಶದಾದ್ಯಂತ ಇಂತಹ ಎಂಟು ತರಬೇತಿ ಸಂಸ್ಥೆಗಳಿಗೆ ವಿಮಾನ ನಿಲ್ದಾಣಗಳಲ್ಲಿ ಹಾರಾಟ ನಡೆಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿ, ‘ಹಿಂದುಳಿದ ಪ್ರದೇಶ ಎಂದು ಗುರುತಿಸಿಕೊಂಡ ಕಲಬುರ್ಗಿಯಲ್ಲಿ ಎರಡು ವಿಮಾನಯಾನ ತರಬೇತಿ ಸಂಸ್ಥೆಗಳು ಕಾರ್ಯಾಚರಣೆ ನಡೆಸಲು ಮುಂದಾಗಿರುವುದು ಶ್ಲಾಘನೀಯ. ನಾವು ಚಿಕ್ಕವರಿದ್ದಾಗ ರೈಲು ಗಾಡಿ ಹೋಗುವುದನ್ನೇ ಕುತೂಹಲದಿಂದ ನೋಡುತ್ತಿದ್ದೆವು. ಇದೀಗ ಕಲಬುರ್ಗಿ ಆಕಾಶದಲ್ಲಿ ವಿಮಾನಗಳು ಹಾರಾಡುತ್ತಿವೆ’ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಜಿ.ಪಂ. ಸಿಇಓ ಡಾ. ದಿಲೀಷ್ ಶಶಿ, ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್, ಏಷ್ಯಾ ಫೆಸಿಪಿಕ್ ಹಾಗೂ ರೆಡ್‌ಬರ್ಡ್‌ ವಿಮಾನ ತರಬೇತಿ ಸಂಸ್ಥೆಯ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು