ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಲೋಕೋಪಯೋಗಿ ಇಲಾಖೆ ಎಡವಟ್ಟು, ಹೊಲಕ್ಕೆ ನುಗ್ಗುತ್ತಿದೆ ನೀರು

ಪ್ರತಿವರ್ಷ ಬೆಳೆಹಾನಿ
Last Updated 19 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಮರಗೋಳ ಕ್ರಾಸ್‌ನಿಂದ ದಂಡೋತಿ ಮಾರ್ಗವಾಗಿ ತೆಂಗಳಿ ಕ್ರಾಸ್‌ವರೆಗೆ ರಾಜ್ಯ ಹೆದ್ದಾರಿ-126 ರ ರಸ್ತೆ ನಿರ್ಮಿಸುವಾಗ ಲೋಕೋಪಯೋಗಿ ಇಲಾಖೆಯು ಮಾಡಿರುವ ಎಡವಟ್ಟಿನಿಂದ ದಂಡೋತಿ ಗ್ರಾಮದ ರೈತ ಮಹಿಳೆ ದಶಕಗಳಿಂದ ಬೆಳೆ ಹಾನಿಯ ನಷ್ಟ ಅನುಭವಿಸುತ್ತಿದ್ದಾರೆ. ಅವರ ಕೂಗು ಅಧಿಕಾರಿಗಳ ಕಿವಿಗೆ ತಲುಪುತ್ತಿಲ್ಲ!

ಸರ್ವೆ ನಂ.46 ರಲ್ಲಿ 4 ಎಕರೆ 5 ಗುಂಟೆ ಜಮೀನು ಹೊಂದಿರುವ ಶಿವಕಾಂತಮ್ಮ ಅಡಿವೆಪ್ಪ ಕೊಂಕನಳ್ಳಿ ಎಂಬ ರೈತ ಮಹಿಳೆಯ ಹೊಲದ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕಿಂತ ಮೊದಲು ಮಳೆ ನೀರು ನೈಸರ್ಗಿಕ ರೀತಿಯಲ್ಲಿ ಇಳಿಜಾರು ಪ್ರದೇಶದಿಂದ ಹರಿದು ಹೋಗುತ್ತಿತ್ತು. ರಸ್ತೆ ನಿರ್ಮಿಸುವಾಗ ನೀರು ಹರಿದು ಹೋಗುತ್ತಿದ್ದ ದಾರಿ ಸಂಪೂರ್ಣ ಬಂದ್ ಆಗಿದ್ದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ನಿಂತು ಎರಡು ಎಕರೆಯಷ್ಟು ಬೆಳೆ ಹಾನಿಯಾಗುತ್ತಿದೆ.

2017 ರಿಂದ 2020 ರವರೆಗೆ ನಿರಂತರ ನಾಲ್ಕ ವರ್ಷಗಳಿಂದ ಚಿತ್ತಾಪುರ ಮತ್ತು ಕಾಳಗಿ ಲೋಕೋಪಯೋಗಿ ಇಲಾಖೆ ಎಇಇ ಮತ್ತು ಸೇಡಂ ವಿಭಾಗದ ಇಇ ಹಾಗೂ ತಹಶೀಲ್ದಾರ್, ಸೇಡಂ ಉಪ ವಿಭಾಗಾಧಿಕಾರಿ, ಕಲಬುರ್ಗಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲು ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಯಾವ ಅಧಿಕಾರಿಯೂ ಇವರ ಸಮಸ್ಯೆಯತ್ತ ಕಣ್ಣೆತ್ತಿಯೂ ನೋಡಿಲ್ಲ.

‘ಬೇರೆ ಹೊಲಗಳಿಂದ ಮಳೆ ನೀರು ನಮ್ಮ ಹೊಲಕ್ಕೆ ಬಂದು ಹರಿದು ಹೋಗಲು ದಾರಿಯಿಲ್ಲದೆ ಜಮಾವಣೆಯಾಗುತ್ತಿದೆ. ರಸ್ತೆ ಅಗಲೀಕರಣ ಕಾಮಗಾರಿ ಮಾಡುವುದಕ್ಕಿಂತ ಮುಂಚೆ ನೀರು ಹೋಗಲು ರಸ್ತೆಯಲ್ಲಿ ಸಣ್ಣ ಕೊಳವೆ (ಸಿಮೆಂಟ್ ಪೈಪು) ಇತ್ತು. ಅದನ್ನು ರಸ್ತೆಯೊಳಗೆ ಮುಚ್ಚಿದ್ದರಿಂದ ಹೊಲದಲ್ಲಿನ ನೀರು ನಿಂತು ಮುಂಗಾರು ಬೆಳೆ ಹಾನಿಯಾಗುತ್ತಿದೆ. ಹಿಂಗಾರು ಬಿತ್ತನೆ ಮುಗಿಯುವವರೆಗೆ ನೀರು ಇರುತ್ತದೆ. ಬಿತ್ತನೆ ಮಾಡಲು ಆಗುತ್ತಿಲ್ಲ’ ಎಂದು ರೈತ ಮಹಿಳೆ ಶಿವಕಾಂತಮ್ಮ ಸೋಮವಾರ ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡರು.

ನಾಲ್ಕು ವರ್ಷಗಳಿಂದ ಮನವಿಪತ್ರ ಸಲ್ಲಿಸಿದರೂ ಯಾವ ಅಧಿಕಾರಿ ಗಮನವೇ ಹರಿಸುತ್ತಿಲ್ಲ. ಜೆಸಿಬಿ ಅಥವಾ ಹಿಟಾಚಿ ಯಂತ್ರದಿಂದ ರಸ್ತೆ ಪಕ್ಕದಲ್ಲಿ ನಾಲೆ ತೋಡಿ ನೀರು ಹರಿದು ಹೋಗಲು ದಾರಿ ಮಾಡಬೇಕು. ಅಥವಾ ಮೊದಲಿದ್ದಂತೆ ರಸ್ತೆಯಲ್ಲಿ ಸಿಮೆಂಟ್ ಪೈಪು ಹಾಕಿ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಬೆಳೆ ಹಾನಿ ನಷ್ಟ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲು ಅಕ್ಕಪಕ್ಕದ ಜಮೀನು ರೈತರ ಸಹಕಾರ ಬೇಕು. ಮಹಿಳೆಯ ಹೊಲದಲ್ಲಿನ ಬೆಳೆ ಹಾನಿ ಆಗದಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಅಣ್ಣಪ್ಪ ಎನ್. ಕುದರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT