ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪದ ಗೋಳು, ಕೇಳೋರಿಲ್ಲ ಯಾರೂ...

ತೆಂಗಳಿ: ಒಂದೇ ವಾರದಲ್ಲಿ 3 ಬಾರಿ ನುಗ್ಗಿದ ಬೆಣ್ಣೆತೊರಾ ಪ್ರವಾಹ
Last Updated 29 ಸೆಪ್ಟೆಂಬರ್ 2020, 6:49 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಹೇರೂರ ಬೆಣ್ಣೆತೊರಾ ಜಲಾಶಯದ ನೀರು ಒಂದೇ ವಾರದಲ್ಲಿ ಮೂರು ಸಲ ತೆಂಗಳಿ ಗ್ರಾಮಕ್ಕೆ ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಜಿಲ್ಲಾ ಪಂಚಾಯಿತಿ ಮತಕ್ಷೇತ್ರ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾದ ತೆಂಗಳಿ ಊರಲ್ಲಿ ನಾಲ್ಕು ವಾರ್ಡ್ ಮತ್ತು ಏಳು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಊರ ಮಗ್ಗುಲಲ್ಲೇ ಬೆಣ್ಣೆತೊರಾ ಮತ್ತು ಹಳ್ಳದ ನೀರು ಹರಿಯುತ್ತಿದ್ದರೂ ಸ್ಥಳೀಯರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಲೇ ಇದೆ.

ಬೆಣ್ಣೆತೊರಾ ಜಲಾಶಯ ತುಂಬಿದಾಗಲೆಲ್ಲ ಇಲ್ಲಿನ ಹಳ್ಳಕ್ಕೆ ಹರಿದು ಬರುವ ಅಪಾರ ಪ್ರಮಾಣದ ನೀರು ಊರಿನ 250-300 ಮನೆಗಳಿಗೆ ಧಕ್ಕೆ ಉಂಟುಮಾಡದೆ ಮುಂದಕ್ಕೆ ಹೋಗದು. ಈ ಸಂಕಷ್ಟಕ್ಕೆ ಪ್ರತಿ ಬಾರಿ ಸಿಲುಕುವ ಜನರ ಗೋಳು ಹೇಳತೀರದು.

ಬಹುತೇಕ ಗಲ್ಲಿಗಳಲ್ಲಿ ಸಿಸಿ ರಸ್ತೆ ಇದ್ದೂ ಇಲ್ಲದಂತಾಗಿ ಕೆಸರು ಗದ್ದೆಯಾಗಿ ಜನ-ಜಾನುವಾರು ನಡೆದಾಡಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕಾಟಾಚಾರದ್ದಾಗಿದ್ದು ಜಿಲ್ಲಾ ಪಂಚಾಯಿತಿ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ದೂರುತ್ತಾರೆ ಇಲ್ಲಿನ ನಿವಾಸಿಗಳು.

ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಯ ರಸ್ತೆ ಜನತೆಗೆ ಓಡಾಡಲು ಬಾರದಂತಾಗಿದೆ. ಹೊಸ ತಾಂಡಾದ ಜನರಿಗೆ ಸರಿಯಾದ ರಸ್ತೆ ಇಲ್ಲದೆ ನಿವಾಸಿಗಳು ಕೆಸರಿನಲ್ಲಿ ಒದ್ದಾಡುತ್ತಿದ್ದಾರೆ.

ಕಾಗದದಲ್ಲಿ ಶೌಚಾಲಯ ಬಿಲ್ ಎತ್ತಲಾಗಿದೆ. ಆದರೆ ಊರೊಳಗೆ ಶೌಚಾಲಯಗಳ ಬರವಿದೆ. ಕಲಬುರ್ಗಿಗೆ ಸಂಚರಿಸಲು ಇರುವ ತೆಂಗಳಿ ಕ್ರಾಸ್, ಮತ್ತಿಮೂಡ ಮತ್ತು ಬೆಣ್ಣೆತೊರಾ ಕಾಲುವೆ ರಸ್ತೆ ಒಂದೂ ಸರಿಯಿಲ್ಲದೆ ಪ್ರಯಾಣಿಕರ ಗೋಳು ಕೇಳೋರು ಯಾರು ಎನ್ನುವಂತಾಗಿದೆ.

ಬೀದಿ ಸ್ವಚ್ಛಗೊಳಿಸುವ ಸಿಬ್ಬಂದಿ ಕೇವಲ ಹೋಟೆಲ್, ಅಂಗಡಿಗಳಿಗೆ ಸೀಮಿತವಾಗಿದ್ದು, ಊರಿನ ಬೀದಿಗಳು ಗಲೀಜಾಗಿವೆ. ಹೀಗೆ ಊರಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿ ಜನರು ತೊಂದರೆಗೆ ಸಿಲುಕಿದರೂ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಸ್ಪಂದಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರು ಅಳಲು.

ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾ ಹಡಪದ ಪ್ರತಿಕ್ರಿಯಿಸಿ, ‘ನನ್ನ ಅಧಿಕಾರವಧಿಯಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಕ್ಕಮಟ್ಟಿಗೆ ಸ್ಪಂದಿಸುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT