ಸೋಮವಾರ, ಅಕ್ಟೋಬರ್ 26, 2020
20 °C
ಜನರ ಲೆಕ್ಕಾಚಾರ ತಲೆಕೆಳಗೆ ಮಾಡಿದ ‘ಮಹಾ’ನೀರು; ಎಲ್ಲಿಯೋ ಮಳೆಯಾದರೆ ಇನ್ನೆಲ್ಲಿಯೋ ಶಿಕ್ಷೆ!

ಕಲಬುರ್ಗಿ: ‘ವರ್ಷದ ಗಂಜಿ ನೀರಾಗ್‌ ಹೋತು...’

ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಇಷ್ಟೊತ್ತಿಗೆ ಮೊಣಕಾಲೆತ್ತರಕ್ಕೆ ಹಿಂಗಾರಿ ಬೆಳೆ ಬೆಳೆದಿರುತ್ತಿತ್ತು. ಹಸಿರು ಹೊಲದಲ್ಲಿ ಹೋಗಿ ನಿಂತರೆ ಮನಸ್ಸಿನಲ್ಲಿ ಹುಮ್ಮಸ್ಸು ತುಂಬುತ್ತಿತ್ತು. ಆದರೆ, ‘ಭೀಮಾ’ ತಾಯಿಗೆ ಭೂಮಿತಾಯಿ ಮೇಲೆ‌ ಯಾಕ್‌ ಇಷ್ಟು ಸಿಟ್ಟೋ; ಎಲ್ಲರ ಲೆಕ್ಕಾಚಾರ ತಲೆ ಕೆಳಗೆ ಮಾಡಿದ್ದಾಳೆ. ವರ್ಷದ ಗಂಜಿ ನೀರಿನಲ್ಲಿ ತೇಲಿಹೋಗಿದೆ...’ ಎಂದು ಅಲವತ್ತುಕೊಂಡರು ಸಂತ್ರಸ್ತ ಜನ.

ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಭಾನುವಾರ ಇನ್ನಷ್ಟು ರೌದ್ರಾವತಾರ ತಾಳಿದೆ. ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋಬಾಳ, ರಾಸಣಗಿ, ಹಂದನೂರು ಗ್ರಾಮಗಳನ್ನು ಆವರಿಸಿಕೊಂಡಿದೆ. ಬಹುಪಾಲು ಜನ ಊರು ತೊರೆದಿದ್ದಾರೆ. ದನ–ಕರುಗಳನ್ನು ನೋಡಿಕೊಳ್ಳಲೆಂದು ಕೆಲವರು ಮಾತ್ರ ಇನ್ನೂ ಈ ನಡುಗಡ್ಡೆಗಳಲ್ಲೇ ಉಳಿದಿದ್ದಾರೆ.

‘ಹತ್ತು ವರ್ಷದ ಹಿಂದೆ ಪ್ರವಾಹ ಬಂದಾಗಲೇ ಊರು ಸ್ಥಳಾಂತರಕ್ಕೆ ನಿರ್ಧಾರ ಮಾಡಿದ್ದಾರೆ. ಪೇಜಾವರ ಸ್ವಾಮೀಜಿ ಅವರು ಎತ್ತರದಲ್ಲಿ ಸುಮಾರು 100 ಚಿಕ್ಕ ಮನೆಗಳನ್ನು ಕಟ್ಟಿಸಿದ್ದಾರೆ. ಅದರಲ್ಲಿ ಅರ್ಧದಷ್ಟು ಮಾತ್ರ ಗಟ್ಟಿಯಾಗಿ ಉಳಿದಿವೆ. ಸರ್ಕಾರ ನೀರು, ವಿದ್ಯುತ್‌ ಕಲ್ಪಿಸಿಲ್ಲ. ಅಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮತ್ತೆ ಹಳೆಯ ಕಾಲೊನಿಗೆ ಬಂದಿದ್ದೇವೆ. ಈಗ ಇಲ್ಲಿಯೂ ಬದುಕು ಮುಳುಗಿದೆ. ಅತ್ತ ಹೋಗುವುದೋ, ಇಲ್ಲೇ ಇರುವುದೋ ಒಂದೂ ತಿಳಿಯದು. ಈ ಸಂಕಟ ಯಾರ ಮುಂದೆ ಹೇಳುವುದು’ ಎಂದು ಕಣ್ಣೀರಾದರು ಮಂದರವಾಡದ ಪರಿಶಿಷ್ಟರ ಕಾಲೊನಿಯ ಯಲ್ಲಮ್ಮ.

‘ಈ ಕಾಲೊನಿಯಲ್ಲಿ ದುಡಿಮೆಯನ್ನೇ ನಂಬಿ ಬದುಕಿದ 60ಕ್ಕೂ ಹೆಚ್ಚು ಕುಟುಂಬಗಳಿವೆ. ಊರು ಸೇರಿ 250 ಮನೆಗಳು. ಬಹುಪಾಲು ಜನ ಕೃಷಿಕರು. ಆದರೆ, ಈಗ ಯಾರೊಬ್ಬರ ಕೈಯಲ್ಲೂ ಹಿಡಿಹಿಟ್ಟು, ಬಿಡಿಗಾಸು ಇಲ್ಲ. ಈಗೇನೋ ಕಾಳಜಿ ಕೇಂದ್ರದಲ್ಲಿ ಕೊಟ್ಟಿದ್ದನ್ನು ತಿಂದು ಬದುಕುತ್ತೇವೆ. ಮುಂದಿನ ಗತಿ ಏನು?’ ಎಂದು ಚಿಂತೆಗೀಡಾದರು ಯುವಕ ವೀರೇಶ ಬಡಿಗೇರ.

‘ಪ್ರತಿ ಮಳೆಗಾಲದಲ್ಲೂ ಇಷ್ಟು ನೀರು ಬರುವುದು ಸಹಜ ಎಂದು ನಿರುಮ್ಮಳಾಗಿದ್ದೇವು. ಆದರೆ, ತಡರಾತ್ರಿ 12ರ ಸುಮಾರಿಗೆ ಏಕಾಏಕಿ ಹರಿದ ನೀರು ಊರಿನೊಳಗೇ ನುಗ್ಗಿತು. ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿಗೆ ಪುಣ್ಯ ಬರಲಿ; ಬೋಟ್‌ ಮೂಲಕ ಮಕ್ಕಳು, ಮಹಿಳೆಯರನ್ನು ಹೊರಗೆ ಸಾಗಿಸುವಲ್ಲಿ ಹರಸಾಹಸ ಪಟ್ಟರು’ ಎಂದರು ಇನ್ನೊಬ್ಬ ಮಹಿಳೆ.

‘ಪ್ರಜಾವಾಣಿ’ ಪ್ರತಿನಿಧಿ ಭಾನುವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದಾಗಲೂ ರಕ್ಷಣಾ ಕಾರ್ಯ ಮುಂದುವರಿದಿತ್ತು. ಕಾಳಜಿ ಕೇಂದ್ರಗಳತ್ತ ಯಾರಾದರೂ ಹೋದರೆ ಸಾಕು; ಏನನ್ನಾದರೂ ‘ಸಹಾಯ’ ಮಾಡುತ್ತಾರೇನೋ ಎಂಬ ಆಸೆಯಿಂದ ಕೈಗಳನ್ನೇ ನೋಡುತ್ತಿದ್ದಾರೆ ಜನ. ಬಿತ್ತಿ– ಬೆಳದು ಸ್ವಾಭಿಮಾನದಿಂದ ಬದುಕಿದವರು ಅವರು. ಅವರ ಹೊಟ್ಟೆಯ ಮೇಲೆಯೇ ಈಗ ಬರೆ ಬಿದ್ದಿದೆ ಎಂದು ಪರಿಸ್ಥಿತಿ ಬಿಚ್ಚಿಟ್ಟರು ಜಾಣಮ್ಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು