ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಭೀತಿಯಲ್ಲೇ ಕಲಬುರ್ಗಿ ಜಿಲ್ಲೆಯ ಜನ

ಶುಕ್ರವಾರ ಸಂಜೆಯಿಂದ ಭೀಮಾ ಬ್ಯಾರೇಜ್‌ನಿಂದ 6.30 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
Last Updated 17 ಅಕ್ಟೋಬರ್ 2020, 5:58 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾರಾಷ್ಟ್ರದ ಎರಡು ಅಣೆಕಟ್ಟುಗಳಿಂದ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಮಳೆ ನಿಂತರೂ ಜನರಲ್ಲಿ ಪ್ರವಾಹದ ಭೀತಿ ಇನ್ನೂ ಕಡಿಮೆಯಾಗಿಲ್ಲ.

ವಿದ್ಯುತ್‌ ಕಂಬಗಳು ಕುಸಿದಿದ್ದರಿಂದ ಚಿತ್ತಾಪುರ, ವಾಡಿ ಪಟ್ಟಣ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳು ಮೂರು ದಿನಗಳಿಂದ ಕತ್ತಲಲ್ಲಿ ಮುಳುಗಿವೆ. ಕಾಗಿಣಾ ನದಿಯಂಚಿನ ಶಹಾಬಾದ್‌ ಬಳಿಯ ಮುತ್ತಗಾ ಗ್ರಾಮದಲ್ಲಿ ಆವರಿಸಿದ್ದ ನೀರು ಕಡಿಮೆಯಾಗಿದ್ದರೂ ಭಂಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಕೆಸರು ತುಂಬಿಕೊಂಡಿದ್ದರಿಂದ ಅನಿವಾರ್ಯವಾಗಿ ಸಾವಿರಾರು ಜನರು ಗ್ರಾಮದಲ್ಲಿಯೇ ಉಳಿದಿದ್ದಾರೆ.

ಬಾರದ ಅಧಿಕಾರಿಗಳು, ಜನತೆಯ ಆಕ್ರೋಶ: ಭೀಮಾ ಹಾಗೂ ಕಾಗಿಣಾ ನದಿಗಳು ಉಕ್ಕಿ ಮನೆಗಳಿಗೆ ನುಗ್ಗಿದರೂ ಪರಿಹಾರ ಕಾರ್ಯಕ್ಕಾಗಿ ಅಧಿಕಾರಿಗಳು ಸಕಾಲಕ್ಕೆ ಬರಲಿಲ್ಲ ಎಂದು ಆಕ್ರೋಶಗೊಂಡ ಶಹಾಬಾದ್‌ ತಾಲ್ಲೂಕಿನ ಹೊನಗುಂಟಾ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಸುರೇಶ ವರ್ಮಾ ಅವರೊಂದಿಗೆ ಶುಕ್ರವಾರ ತೀವ್ರ ವಾಗ್ವಾದ ನಡೆಸಿದರು.

ಪರಿಸ್ಥಿತಿಯ ಗಂಭೀರತೆ ಅರಿತ ವರ್ಮಾ ಪೊಲೀಸರನ್ನು ಕರೆಸಿಕೊಂಡರು. ಅದರ ಬೆನ್ನಲ್ಲೇ ಕುಡಿಯುವ ನೀರಿನ ಟ್ಯಾಂಕರ್‌ ತರಿಸಲಾಯಿತು. ಪರಿಹಾರ ಕಾರ್ಯ ಕೈಗೊಳ್ಳಲು ಗ್ರಾಮಕ್ಕೆ ಬಂದ ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ‘ಎಲ್ಲಾ ಮುಗಿದ ಮೇಲೆ ಬಂದು ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರು.

ಶುಕ್ರವಾರ ಸಂಜೆಯಿಂದ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ 6.30 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ್ ಹಾಗೂ ಚಿತ್ತಾಪುರ ತಾಲ್ಲೂಕಿನ 148 ಗ್ರಾಮಗಳಲ್ಲು ಮುಳುಗಡೆ ಭೀತಿ ಎದುರಾಗಿದೆ. ಈ ಗ್ರಾಮಗಳ ಜನತೆಯನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸೂಚನೆ ನೀಡಿದ್ದು, ಸ್ವತಃ ಜಿಲ್ಲಾಧಿಕಾರಿ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಮನವಿ ಮಾಡಿದರು.

ವಾಯುನೆಲೆಗೆ ಬಂದಿಳಿದ ಹೆಲಿಕಾಪ್ಟರ್: ಬೀದರ್, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿನ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಎರಡು ಹೆಲಿಕಾಪ್ಟರ್‌ಗಳನ್ನು ಕಳಿಸಿಕೊಟ್ಟಿದ್ದು, ಬೀದರ್ ವಾಯುನೆಲೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಕಲಬುರ್ಗಿ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ತಿಳಿಸಿದರು.

ಕಲಬುರ್ಗಿ–ಸೇಡಂ, ಚಿಂಚೋಳಿ–ಬೀದರ್‌, ಸೇಡಂ–ಚಿತ್ತಾಪುರ ಮಧ್ಯದ ಸಂಪರ್ಕ ಕಡಿತಗೊಂಡಿದೆ.

ಬುದ್ಧ ಹಾಗೂ ಸಾಮ್ರಾಟ್ ಅಶೋಕನ ಶಾಸನಗಳು, ಸ್ತೂಪಗಳಿರುವ ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಹಾಗೂ ಸನ್ನತಿ ಗ್ರಾಮಗಳಲ್ಲಿ ಪ್ರವಾಹದ ನೀರು ನುಗ್ಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT