ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದುಕೇ ಮೂರಾಬಟ್ಟೆ ಆಗೈತ್ರೀ’

ಕಡಬೂರು: ನಿಟ್ಟುಸಿರು ಬಿಡುವಲ್ಲಿ ಮತ್ತೊಂದು ನೆರೆ ಸವಾಲು
Last Updated 19 ಅಕ್ಟೋಬರ್ 2020, 3:19 IST
ಅಕ್ಷರ ಗಾತ್ರ

ವಾಡಿ: ಭೀಮಾ ಪ್ರವಾಹದ ರಭಸಕ್ಕೆ ಕಡಬೂರು ಗ್ರಾಮಸ್ಥರ ಬದುಕು ಅಕ್ಷರಶಃ ನಲುಗಿ ಹೋಗಿದೆ.

ಭೀಮಾ ನದಿಗೆ ಹೊಂದಿಕೊಂಡಿರುವ ಕಡಬೂರ ಗ್ರಾಮದ 300 ಮನೆಗಳ ಪೈಕಿ 140 ಮನೆಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದ ಭೀತಿಯಿಂದ 4 ದಿನಗಳಿಂದ ಗ್ರಾಮಸ್ಥರು ಜಾಗರಣೆಗೆ ಜಾರಿದ್ದಾರೆ.ಅಳಿದುಳಿದ ಮನೆಯಲ್ಲಿಯೇ ಜೀವನ ದೂಡುತ್ತಾ ಕಣ್ಣೆದುರು ಕಾಡುತ್ತಿರುವ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗದೆ ಹತಾಶೆ ಅನುಭವಿಸುತ್ತಿದ್ದಾರೆ.

ಪ್ರವಾಹದಿಂದಾಗಿ ಜೀವ ಕೈಯಲ್ಲಿಟ್ಟುಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳದ್ದು ಒಂದೊಂದು ಕಥೆಯಾಗಿದೆ. ಬದುಕಿಗೆ ಆಸರೆಯಾಗಿದ್ದ ದವಸ ಧಾನ್ಯಗಳು, ಬಟ್ಟೆಬರೆಗಳನ್ನು ಕಳೆದುಕೊಂಡು ಅತಂತ್ರಕ್ಕ ಸಿಲುಕಿದ್ದಾರೆ. ಸಂಗ್ರಹಿಸಿಟ್ಟ ಕಾಳುಕಡ್ಡಿಗಳು ಮೊಳಕೆ ಬಂದು ಅಲ್ಲಲ್ಲಿ ಗಬ್ಬುವಾಸನೆ ಸೂಸುತ್ತಿವೆ.

ಕೆಲವರ ಚಿನ್ನ, ಬೆಳ್ಳಿಯ ವಸ್ತುಗಳು ಕೊಚ್ಚಿಹೋದ ಘಟನೆಗಳು ವರದಿಯಾಗಿವೆ. ಅಳಿದುಳಿದ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಿರುವ ದೃಶ್ಯಗಳು ಕಂಡುಬಂದವು. ಹಲವರ ದಾಖಲೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಪ್ರವಾಹದ ನಷ್ಟದಿಂದ ಹೊರಬರುವ ಮೊದಲೇ ಮತ್ತೊಂದು ಪ್ರವಾಹ ಅಪ್ಪಳಿಸಲಿದೆ ಎಂಬ ಸುದ್ದಿ ಗ್ರಾಮಸ್ಥರನ್ನು ಅಕ್ಷರಶಃ ಕಂಗಲಾಗುವಂತೆ ಮಾಡಿದೆ.

‘ನೀರಲ್ಲಿ ನಿಂತ ಮನೆಗಳು ಬಿರುಕು ಬಿಟ್ಟು ಗಟ್ಟಿತನ ಕಳೆದುಕೊಂಡಿವೆ. ಹೊಸ ಬಟ್ಟೆ, ಸೀರೆಗಳು ಎಲ್ಲವೂ ನೀರಿನಲ್ಲಿ ತೇಲಿ ಹೋಗಿದ್ದು, ಮುಂದಿನ ಬದುಕು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಮಹಾದೇವಿ ಎಂಬುವವರು ಅಳಲು ತೋಡಿಕೊಂಡರು.

‘ಮನೆಗೆ ಬೀಗ ಹಾಕಿ ದುಡಿಯಾಕ ಬೆಂಗಳೂರಿಗೆ ಹೋಗಿದ್ದೆವು. ಮನೆಯಲ್ಲಿದ್ದ ದವಸ ಧಾನ್ಯ ಹಾಳಾಗಿ ಹೋಗಿವೆ. ಮನೆಯ ಸುತ್ತ ಆಳುದ್ದ ನಿಂತ ಪ್ರವಾಹದ ನೀರು ಮನೆಯನ್ನೇ ಸಡಿಲಗೊಳಿಸಿದೆ. ಬದುಕು ದುಸ್ತರಗೊಂಡಿದೆ ಎಂದು ಬಸಲಿಂಗಮ್ಮ ಅರಕೆರಾ, ಭಾಗಮ್ಮ ನರಿಬೋಳ ಕಣ್ಣೀರಾದರು.

ಪರಿಹಾರ ಕೇಂದ್ರದಲ್ಲಿ 400 ಜನ: ಗ್ರಾಮದ ಹೊರವಲಯದ ಪರಿಹಾರ ಕೇಂದ್ರದಲ್ಲಿ ಸುಮಾರು 400 ಜನರು ಆಶ್ರಯ ಪಡೆದಿದ್ದಾರೆ. ಸ್ಥಳೀಯ ಆಡಳಿತದ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT