ಗುರುವಾರ , ಆಗಸ್ಟ್ 5, 2021
21 °C
ನಾಗರಾಳ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಕ್ಕೆ

ಪ್ರವಾಹ: ವಿವಿಧೆಡೆ ಸಿಲುಕಿದ್ದ ಐವರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಜನರನ್ನು ಹೈರಾಣಾಗಿಸಿದೆ. ಸಾವಿರಾರು ಹೆಕ್ಟೇರ್ ಬೆಳೆ
ಜಲಾವೃತವಾಗಿದೆ.

ಜಲಾಶಯದ 3 ಗೇಟುಗಳನ್ನು 2 ಮೀಟರ್ ಮತ್ತು 2 ಗೇಟುಗಳನ್ನು1 ಮೀಟರ್ ಎತ್ತಿ ಸರಾಸರಿ 8151 ಕ್ಯುಸೆಕ್ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಒಳ ಹರಿವು ಹೆಚ್ಚಾದಾಗ ಗರಿಷ್ಠ 20 ಸಾವಿರ ಕ್ಯುಸೆಕ್‌ವರೆಗೂ ನೀರು ಬಿಡಲಾಗಿದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಪ್ರವಾಹದ ನೀರಿನಲ್ಲಿ ಮುಳುಗಿದೆ. ಕಬ್ಬು, ಬಾಳೆ, ಉದ್ದು, ಹೆಸರು, ತೊಗರಿ ಮೊದಲಾದ ಬೆಳೆ ಪ್ರವಾಹಕ್ಕೆ ತುತ್ತಾಗಿದೆ. ಅಲ್ಲಲ್ಲಿ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದು ರೈತರ ಹೊಲಗಳು ಗುರುತು ಸಿಗದಂತಾಗಿವೆ.

ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನೀಮಾ ಹೊಸಳ್ಳಿ, ದೇಗಲಮಡಿ, ಚಿಂಚೋಳಿ, ಚಂದಾಪುರ, ಪೋಲಕಪಳ್ಳಿ, ಅಣವಾರ, ಇರಗಪಳ್ಳಿ, ಬುರುಗಪಳ್ಳಿ, ಚತ್ರಸಾಲ್, ಕರ್ಚಖೇಡ್, ಗಣಾಪುರ, ಭಕ್ತಂಪಳ್ಳಿ, ಗರಕಪಳ್ಳಿ, ಬೊಮ್ಮನಳ್ಳಿ, ಜಟ್ಟೂರು, ಪೋತಂಗಲ್, ಹಲಕೋಡಾ ಮೊದಲಾದ ಕಡೆಗಳಲ್ಲಿ ರೈತರ ಜಮೀನಿಗೆ ನೀರು ನುಗ್ಗಿ ಹಾನಿ ಉಂಟು ಮಾಡಿದೆ.

ಮನೆಗಳಿಗೆ ನುಗ್ಗಿದ ನೀರು: ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಚಿಮ್ಮನಚೋಡ, ಕನಕಪುರ, ದೇಗಲಮಡಿ, ಚಿಂಚೋಳಿ ಮತ್ತು ಚಂದಾಪುರದಲ್ಲಿ ಜನರನ್ನು ಕಂಗಾಲಾಗಿಸಿದೆ. ಮಳೆ ನೀರಿನಲ್ಲಿ ದವಸ ಧಾನ್ಯಗಳು ಕೊಚ್ಚಿಕೊಂಡು ಹೋಗಿದ್ದಲ್ಲದೆ ಬಟ್ಟೆಬರೆ ನೆಂದು ಹೋಗಿವೆ, ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್, ರಾಶಿಯಂತ್ರ, ಎತ್ತಿನ ಬಂಡಿ, ಮೋಟರ್ ಸೈಕಲ್‌ಗಳು ಮತ್ತು ರೈತರ ಪಂಪಸೆಟ್‌ಗಳು ಹಾಳಾಗಿವೆ.

ಐವರ ರಕ್ಷಣೆ: ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯದಲ್ಲಿ ಸಿಲುಕಿದ್ದ ಮಾರುತಿ ಹಡಪದ ಹಾಗೂ ಚಂದ್ರಪ್ಪ ಭಕ್ತಂಪಳ್ಳಿ ಅವರನ್ನು ಗ್ರಾಮಸ್ಥರು ಬೆಳಿಗ್ಗೆ ರಕ್ಷಿಸಿದ್ದಾರೆ.

ಇವರು ರಾತ್ರಿ ದೇವಾಲಯದಲ್ಲಿ ಮಲಗಲು ತೆರಳಿದ್ದರು. ನದಿಗೆ ನೀರು ಬಿಟ್ಟಿದ್ದರಿಂದ ಪ್ರವಾಹ ದೇವಾಲಯಕ್ಕೆ ನುಗ್ಗಿದೆ. ಆಗ ದೇವಾಲಯದ ಹಿಂದಿನ ಸಮುದಾಯ ಭವನಕ್ಕೆ ತೆರಳಿದ್ದಾರೆ. ಅಲ್ಲಿಗೂ ನೀರು ನುಗ್ಗಿದಾಗ ಇಡೀ ರಾತ್ರಿ ನೀರಿನಲ್ಲಿಯೇ ನಿಂತು ಜಾಗರಣೆ ಮಾಡಿದ್ದಾರೆ. ಬೆಳಿಗ್ಗೆ ಮನೆಯವರಿಂದ ಸುದ್ದಿ ತಿಳಿದಾಗ ಜಲಾಶಯಕ್ಕೆ ತೆರಳಿ ಗೇಟ್ ಬಂದ್ ಮಾಡಿಸಿ ನದಿಯಲ್ಲಿ ಪ್ರವಾಹ ಕಡಿಮೆಯಾದ ಮೇಲೆ ಇಬ್ಬರನ್ನು ಹಗ್ಗ ಕಟ್ಟಿ ರಕ್ಷಿಸಲಾಗಿದೆ ಎಂದು ನಿವೃತ್ತ ಪಿಡಿಒ ಸಂಗಾರೆಡ್ಡಿ ನರಸನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕೆ ರಾಮರೆಡ್ಡಿ ಪಾಟೀಲ, ಗೋಪಾಲ ಬಾಜೆಪಳ್ಳಿ, ಹಣಮಂತರೆಡ್ಡಿ, ಝರಣಪ್ಪ ಭಕ್ತಂಪಳ್ಳಿ ಮತ್ತು ದೇವಾಲಯದಲ್ಲಿ ಸಿಲುಕಿದವರ ಕುಟುಂಬದ ಸದಸ್ಯರು ನೆರವಾಗಿದ್ದಾರೆ ಎಂದರು.

ಮೂವರ ರಕ್ಷಣೆ: ಪುರಸಭೆ ವ್ಯಾಪ್ತಿಯ ಚಂದಾಪುರದ ಹನುಮಾನ ಮಂದಿರದಲ್ಲಿ ಸಿಲುಕಿದ್ದ ಮೂವರನ್ನು ಸಬ್ ಇನ್‌ಸ್ಪೆಕ್ಟರ್ ರಾಜಶೇಖರ ರಾಠೋಡ್ ಮತ್ತು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಸೂರ್ಯಕಾಂತ ಬಿರಾದಾರ ನೇತೃತ್ವದಲ್ಲಿ ರಕ್ಷಿಸಲಾಯಿತು.

ಬೆಳಿಗ್ಗೆ ಪೂಜೆ ಹೋಗಿದ್ದ ಅರ್ಚಕ ಶಿವನಾಗಯ್ಯ ಸ್ವಾಮಿ, ಅಭಿಷೇಕ ಮಾಡಿಸಲು ಹೋದ ಕಾಶಪ್ಪ ಹೂಗಾರ ಕುಟುಂಬದ ಸದಸ್ಯರು ಪೂಜೆ, ಅಭಿಷೇಕ ಪೂರ್ಣಗೊಳಿಸುವಷ್ಟರಲ್ಲಿ ಮುಲ್ಲಾಮಾರಿ ನದಿಯಲ್ಲಿ ಪ್ರವಾಹದ ನೀರಿನ ಮಟ್ಟ ಏರಿಕೆಯಾಗಿ ನೀರು ದೇವಾಲಯ ಸುತ್ತುವರಿದು ದೇವಾಲಯ ಸಂಪರ್ಕಿಸುವ ಸೇತುವೆ ಮೇಲೆ ಒಂದೂವರೆ ಮೀಟರ್ ನೀರು ನಿಂತಿದೆ. ಆಗ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಅವರನ್ನು
ರಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು