ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು ಚೆಲುವೆಲ್ಲಾ ನಂದೆಂದಿತು..!

ಶರಣಬಸವೇಶ್ವರ ಕೆರೆಯ ಉದ್ಯಾನದಲ್ಲಿ ಮನಸೆಳೆಯುವ ಫಲಪುಷ್ಪ ಪ್ರದರ್ಶನ, ಬುಧವಾರವೂ ವೀಕ್ಷಣೆಗೆ ಅವಕಾಶ
Last Updated 17 ಸೆಪ್ಟೆಂಬರ್ 2019, 20:03 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಶರಣಬಸವೇಶ್ವರ ಕೆರೆಯ ಉದ್ಯಾನದಲ್ಲಿ ಮಂಗಳವಾರ ಆರಂಭವಾದ ಫಲ– ಪುಷ್ಪ ಪ್ರದರ್ಶನ ಬಿಸಿಲೂರಿನ ಮಂದಿಗೆ ಆಹ್ಲಾದತೆ ನೀಡಿತು. ಆವರಣದ ಸುತ್ತ ಎಲ್ಲಿ ನೋಡಿದರೂ ಹೂಗಳ ಸೌಂದರ್ಯ, ಪರಿಮಳ ಹಣ್ಣುಗಳ ಘಮಲು ಹರಿದಾಡಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಅಪಾರ ಜನ ಸುತ್ತಾಡಿ ಈ ಪ್ರದರ್ಶನವನ್ನು ಆಸ್ವಾದಿಸಿದರು. ಪ್ರತಿಯೊಬ್ಬರಿಂದಲೂಆಹಾ! ಓಹೋ! ಎನ್ನುವ ಉದ್ಘಾರ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯ ‘ಆತ್ಮಾ’ ಯೋಜನೆ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಈ ಫಲ– ಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಬುಧವಾರ (ಸೆ. 18) ಕೂಡ ಇರಲಿದೆ.

ಉದ್ಯಾನದ ಗೇಟ್‌ ಹತ್ತಿರ ಹೋಗುತ್ತಿದ್ದಂತೆ ಮುದ್ದಾದ ಹರಿಸು ಸಸ್ಯಗಳು ನಿಮ್ಮನ್ನು ಬರಮಾಡಿಕೊಳ್ಳುತ್ತವೆ. ಒಳಗೆ ಕಾಲಿಟ್ಟರೆ ಸಾಕು ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ, ಮಧ್ಯದಲ್ಲಿ ಉದ್ಯಾನದ ಮೂಲೆಮೂಲೆಗೂ ಬಣ್ಣದ ಲೋಕ ಅನಾವರಣಗೊಂಡಿದೆ.

ಮಕ್ಕಳು, ಮಹಿಳೆಯರು, ಹಿರಿಯರು, ಪುರಷರು, ವಿದ್ಯಾರ್ಥಿಗಳು... ಹೀಗೆ ಯಾರೆಲ್ಲರೂ ಹೂಗಳ ಲೋಕದಲ್ಲಿ ಮನಸೋ ಇಚ್ಚೆ ಹರಿದಾಡಿದರು. ಒಂದೊಂದು ಬಣ್ಣದ, ವೈವಿಧ್ಯ ಮೈಮಾಟ, ವಯ್ಯಾರದ ಹೂಗಳನ್ನು ಕಂಡು ಮನಸೋತರು. ಬಳಕುವ ಬಳ್ಳಿಗಳು, ನಗುವ ಹೂಗಳ ಮುಂದೆ ನಿಂತು ನಗೆಬೀರಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅವುಗಳನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸ್ಟೇಟರ್‌ಗಳಿಗೆ ಹಾಕಿಕೊಂಡು ಸಂಭ್ರಮಿಸಿದರು.

ವಾರೇ ವಾಹ್‌! ಕಲ್ಯಾಣ ಕರ್ನಾಟಕ:

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಫಲಪ್ರದರ್ಶನ ಒಂದೇ ದಿನ ನಡೆದಿದ್ದರಿಂದ ಇದರ ಸೊಬಗು ಇಮ್ಮಡಿಸಿತು. ಅದರಲ್ಲೂ ಪ್ರದರ್ಶನದಲ್ಲಿ ಹೂ– ಎಲೆ– ಕಾಯಿಗಳನ್ನು ಬಳಸಿ ನಿರ್ಮಿಸಿದ ‘ಕಲ್ಯಾಣ ಕರ್ನಾಟಕದ ಜಿಲ್ಲೆಗಳು’ ಮಾದರಿ ಎಲ್ಲರನ್ನೂ ಚುಂಬಕದಂತೆ ಸೆಳೆಯಿತು. ಬಳಿಸಾರಿದವರೆಲ್ಲ ವಾರೇ ವಾಹ್‌! ಎಂದು ಹುಬ್ಬೇರಿಸಿ ನೋಡಿದರು.

ಈ ಜಿಲ್ಲೆಗಳ ನಕಾಶೆಯ ಮುಂದೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆ ಇನ್ನೂ ಸೊಗಸಾಗಿತ್ತು. ಸಿರಿಧಾನ್ಯಗಳಿಂದಲೇ ಮಾಡಿದ ಈ ಪ್ರತಿಮೆ ದೂರದಿಂದ ಉಕ್ಕಿನಿಂದ ಮಾಡಿದಂತೆ ತೋರುತ್ತದೆ. ಹತ್ತಿರ ಹೋಗಿ ನೋಡಿದರೆ ಸಾಕು ನಿಮ್ಮನ್ನು ಅಚ್ಚರಿಯಿಂದ ಆಲಿಂಗಿಸುವಂತಿದೆ!

ಕಲ್ಲಂಗಡಿಯಲ್ಲಿ ಮೂಡಿದ ಮಹಾನ್‌ ನಾಯಕರು:

ದೇಶದ ಮಹಾನ್‌ ನಾಯಕರ ಮುಖಭಾವಗಳನ್ನು ಕಲ್ಲಂಗಡಿ ಹಣ್ಣಿನಲ್ಲಿ ಮೂಡಿದಿದ್ದು ಇನ್ನೂ ಸುಂದರವಾಗಿದೆ. ಕಣ್ಣು, ಮೂರು, ಕೂದಲು, ಚೆಸ್ಮಾ ಸಮೇತ ನಾಯಕರ ಪೇಂಟಿಂಗ್ ಎನ್ನುವಷ್ಟರ ಮಟ್ಟಿಗೆ ಈ ಕಲಾಕೃತಿ ಸೊಗಸಾಗಿವೆ. ಸ್ವಾಮಿ ವಿವೇಕಾನಂದ, ಚಿತ್ರ ನಟ ರಾಜ್‌ಕುಮಾರ್, ಗಾಂಧೀಜಿ, ಇಂದಿರಾ ಗಾಂಧಿ, ಜವಾಹರಲಾಲ್‌ ನೆಹರೂ, ಬುದ್ಧ, ಬಸವಣ್ಣ, ಅಕ್ಕಮಹಾದೇವಿ, ಅಂಬೇಡ್ಕರ್, ಕುವೆಂಪು ಎಲ್ಲರೂ ಹಣ್ಣುಗಳಲ್ಲಿ ನಗೆಬೀರಿದ್ದಾರೆ.

ಪ್ರದರ್ಶನ ನೋಡಲು ಬಿಟ್ಟ ಪಾದಚಾರಿ ಮಾರ್ಗವೂ ಸೇರಿದಂತೆ ಇಡೀ ಉದ್ಯಾನದ ಇಂಚಿಂಚೂ ಬಿಡದಂತೆ ಸಸ್ಯಕುಂಡಗಳನ್ನು ಇಟ್ಟು ಅಲಂಕಾರ ಮಾಡಲಾಗಿದೆ. ಗರಿಬಿಚ್ಚಿದನವಿಲು, ಬಾಯ್ದೆರೆದ ಮೊಸಳೆ ಆಕೃತಿಗಳೂ ಆಕರ್ಷಣೆಯ ಕೇಂದ್ರವಾದವು.

ಯಾರೇ ನೀನು ಸುಂದರ ಚೆಲುವೆ:

ಉದ್ಯಾನದ ಮಧ್ಯದಲ್ಲಿ ವಯ್ಯಾರ ತೋರುತ್ತ ನಿಂತಿದ್ದ ಸುಂದರಿಯೊಬ್ಬಳು ಕಣ್ಣು ಕುಕ್ಕುತ್ತಾಳೆ. ದುಂಡುಮುಖ, ಬಿಳಿ ಬಣ್ಣ, ತಲೆಮೇಲೊಂದು ಕೆಂಪು ಟೊಪ್ಪಿಗೆ, ಬಣ್ಣಬಣ್ಣದ ಹೂಗಳಿಂದ ಮಾಡಿದ ಲಂಗ, ಗುಲಾಬಿಗಳಿಂದಲೇ ತಯಾರಿಸಿದ ದಾವಣಿ, ದಾಸವಾಳ ಎಲೆಯಿಂದ ತೀಡಿದ ಕೆಂದುಟಿ... ಸೌಂದರ್ಯವನ್ನೇ ಆಕೆ ಚೆಲ್ಲಾಡುತ್ತ ನಿಂತಿದ್ದಾಳೆ.

ಅಂದಹಾಗೆ, ಪ್ರದರ್ಶನದಲ್ಲಿ ಪುಷ್ಪಗಳಿಂದಲೇ ಮಾಡಿದ ಬಾರ್ಬಿಡಾಲ್‌ನ ನೋಟವಿದು. ಈ ಚೆಲಯವೆ ಮುಂದೆ ನಿಂತು ಪೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳದವರೇ ಇಲ್ಲ. ಅದರಲ್ಲೂ ಯುವತಿಯರು ಕೂಡ ಆಕೆಯ ಚೆಲುವನ್ನು ಕಂಡು ಮೂಗುಮುರಿದರು.

ಆಲಂಕಾರಿಕ ಹೂಗಳು, ಹೂ ಕುಂಡಗಳು, ಹೈಡ್ರೋಫೊನಿಕ್ಸ್, ಅಣಬೆ ಬೇಸಾಯ, ಜೇನುಸಾಕಾಣೆ, ಡ್ರೈ ಪ್ಲವರ್‌, ವಿವಿಧ ಜಾತಿಯ ಬಳ್ಳಿ, ಗಿಡಮೂಲಿಕೆ ಸಸ್ಯಗಳು ಇಲ್ಲಿ ನೋಡಲು ಮತ್ತು ಕೊಳ್ಳಲು ಸಿಗುತ್ತವೆ.

ಸೇಬು, ವೀಲ್ಯದೆಲೆ, ಮೋಸಂಬಿ, ಪಪ್ಪಾಯಿ, ಸೀತಾಫಲ, ದಾಳಿಂಬೆ, ಕೇಂಪು ಬಾಳೆ, ನಿಂಬೆ ಹಣ್ಣುಗಳು, ಬೋನ್ಸಾಯ್ ಗಿಡಗಳು, ಕುಂದಾಳೆ ಗಿಡಗಳು ಸುಂದರ ನೋಟ ಬೀರಿದವು.

ಉದ್ಘಾಟನೆ:

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಂಗಿ, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಚಂದ್ರಶೇಖರ ಪಾಟೀಲ, ಶಂಕರ ಪಟವಾರಿ, ರಾಹುಲ್‌ ಬಾವಿದೊಡ್ಡಿ ಇದ್ದರು.

ಜನರಿಗೆ ಫಲಪುಷ್ಪ ಬೆಳೆ ಹಾಗೂ ಪರಿಸರ ಅರಿವು ಮೂಡಿಸುವ ಸಲುವಾಗಿ, ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೈತೋಟ, ತಾರಸಿ ತೋಟದ ಸಸಿಗಳ ವಿತರಣೆ ಜತೆಗೆ ತರಬೇತಿಯನ್ನೂ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT