ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ನಗರದಲ್ಲಿ ಸಿದ್ಧವಾಗಲಿದೆ ಹೈಟೆಕ್‌ ಫ್ಲೈಓವರ್‌

ಕೆಕೆಆರ್‌ಡಿಬಿಯಿಂದ ₹ 49 ಕೋಟಿ ಅನುದಾನ, ಹುಮನಾಬಾದ್‌– ರಾಮಮಂದಿರ ಮಾರ್ಗ ನಿರ್ಮಾಣ
Last Updated 21 ಫೆಬ್ರುವರಿ 2022, 16:44 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಮೊಟ್ಟ ಮೊದಲ ಫ್ಲೈಓವರ್‌ ಕಲಬುರಗಿ ನಗರದಲ್ಲಿ ಸಿದ್ಧಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ–50ಕ್ಕೆ ಇದನ್ನು ನಿರ್ಮಿಸುತ್ತಿರುವ ಕಾರಣ, ಫ್ಲೈಓವರ್‌ ಕೂಡ ನಾಲ್ಕು ಪಥಗಳನ್ನು ಹೊಂದಲಿರುವುದು ವಿಶೇಷ.

ಯೋಜನೆ ಬಗ್ಗೆ ಸ್ವತಃ ಆಸಕ್ತಿ ವಹಿಸಿರುವಕಲ್ಯಾಣ ಕರ್ನಾಟಕ ಪ‍್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು, ಒಂದೇ ವರ್ಷದೊಳಗೇ ಯೋಜನೆಯ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡಳಿಯ ಪ್ರಾದೇಶಿಕ ನಿಧಿಯಿಂದಲೇ ಇದಕ್ಕೆ ಹಣಕಾಸು ನೀಡಲಾಗುತ್ತಿದೆ.

ನಗರದ ಅತ್ಯಂತ ಜನನಿಬಿಡ ಹಾಗೂ ವಾಹನ ದಟ್ಟಣೆಯ ಪ್ರದೇಶವಾದ ಚಂದ್ರಶೇಖರ ಬಿಲಗುಂದಿ (ಖರ್ಗೆ ಸರ್ಕಲ್‌) ವೃತ್ತವನ್ನು ಕೇಂದ್ರವಾಗಿಸಿಕೊಂಡು ಇದು ತಲೆ ಎತ್ತಲಿದೆ. ಹುಮನಾಬಾದ್‌ ಬೇಸ್– ರಾಮಮಂದಿರ ಮಾರ್ಗಕ್ಕೆ ಅನುಸಾರವಾಗಿ ಇರಲಿದೆ.

ದೈತ್ಯವಾಗಿ ಬೆಳೆಯುತ್ತಿರುವ ನಗರದಲ್ಲಿ ದಿನೇದಿನೇ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರ ನಿಯಂತ್ರಣ ಹಾಗೂ ಅಪಘಾತಗಳನ್ನು ತಪ್ಪಿಸಲು ಅತ್ಯಂತ ಅನಿವಾರ್ಯ ಎನ್ನುವ ಕಾರಣಕ್ಕೆ ಈ ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಕೆಕೆಆರ್‌ಡಿಬಿಯಿಂದ ₹ 49 ಕೋಟಿ ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ. ಈಗಾಗಲೇ ಮಂಡಳಿಯಿಂದ ₹ 25 ಕೋಟಿ ಮಂಜೂರಾತಿ ನೀಡಲಾಗಿದೆ. 2021ರ ಮೇ 27ರಂದುಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಕೆಕೆಆರ್‌ಡಿಬಿ ಕಾರ್ಯದರ್ಶಿ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. 2022ರ ಜನವರಿಯಲ್ಲಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಈಗಾಗಲೇ ಯೋಜನಾ ವರದಿ ತಯಾರಿಸಲಾಗಿದ್ದು, ವಿಶ್ವ ದರ್ಜೆಯ ತಂತ್ರಜ್ಞಾನ ಬಳಸಿಕೊಂಡು ಈ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಲೋಕೋಪಯೋಗಿ ಇಲಾಖೆ ಇದರ ಕಾಮಗಾರಿ ಜವಾಬ್ದಾರಿ ಹೊತ್ತುಕೊಳ್ಳಲಿದೆ.

ದೂರದೃಷ್ಟಿಯ ಯೋಜನೆ:ಮುಂದಿನ ನೂರು ವರ್ಷಗಳಲ್ಲಿ ಕಲಬುರಗಿ ನಗರ ಹೇಗೆಲ್ಲ ಅಭಿವೃದ್ಧಿ ಹೊಂದಬಹುದು, ಏನೇನು ಅವಶ್ಯಕತೆಗಳು ಬೀಳಬಹುದು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಫ್ಲೈಓವರ್‌ ನಿರ್ಮಿಸಲಾಗುತ್ತಿದೆ ಎನ್ನುವುದು ಅಧಿಕಾರಿಗಳ ಮಾಹಿತಿ.

ಹೀಗಿರಲಿದೆ ನಮ್ಮೂರಿನ ಫ್ಲೈಓವರ್‌

ಸೇಡಂ ರಸ್ತೆಗೆ ಅಡ್ಡಲಾಗಿ, ಹುಮನಾಬಾದ್‌– ರಾಮಮಂದಿರ ವೃತ್ತದ ಮಾರ್ಗದಲ್ಲಿ ಇದನ್ನು ನಿರ್ಮಿಸಲಾಗುವುದು. ಒಂದು ಅಪ್ರೋಚ್‌ ರಸ್ತೆ ಒಳಗೊಂಡಂತೆ ಒಟ್ಟು 1700 ಮೀಟರ್‌ ಉದ್ದ ಇರಲಿದೆ. ರಿಂಗ್‌ ರಸ್ತೆಗೆ ಇದನ್ನು ನಿರ್ಮಿಸುತ್ತಿರುವ ಕಾರಣ ಚತುಷ್ಪಥ ಹೊಂದಲಿದೆ. ಇಕ್ಕೆಲಗಳಲ್ಲೂ ಜೋಡಿ ಮಾರ್ಗ, ಅದರ ಪಕ್ಕ ಪಾದಚಾರಿ ಮಾರ್ಗ, ಸುರಕ್ಷತಾ ಗೋಡೆ ಇರಲಿದೆ.

ಸೇತುವೆ ಕೆಳಗಿನ ಸಂಚಾರಕ್ಕಾಗಿ ಒಂದು VUP (ವೆಹಿಕುಲರ್‌ ಅಂಡರ್‌ ಪಾಸ್‌– ದೊಡ್ಡ ವಾಹನಗಳ ಸಂಚಾರ ಮಾರ್ಗ) ಹಾಗೂ ಒಂದು LVUP (ಲೈಟ್‌ ವೆಹಿಕುಲರ್‌ ಅಂಡರ್‌ ಪಾಸ್‌– ಸಣ್ಣ ವಾಹನಗಳ ಸಂಚಾರ ಮಾರ್ಗ) ಕೂಡ ಇರಲಿದೆ. ಬಸವೇಶ್ವರ ಆಸ್ಪತ್ರೆಯಿಂದ ಇಎಸ್‌ಐ ಕಡೆಗೆ ಹೋಗುವ ಎಲ್ಲ ವಾಹನಗಳೂ ಈಗಿರುವ ಮಾರ್ಗದಲ್ಲೇ ಸೇತುವೆ ಕೆಳಗಿನಿಂದ ಸಂಚರಿಸಲಿವೆ. ಈ ದ್ವಿಮುಖ ಮಾರ್ಗದ ಜೊತೆಗೆ ಮತ್ತೆ ಎರಡು ಅಂಡರ್‌ಪಾಸ್‌ಗಳನ್ನು ಇದಕ್ಕೆ ನಿರ್ಮಿಸಲಾಗುತ್ತಿದೆ.

ಒಂದೇ ವರ್ಷದಲ್ಲಿ ಜನರಿಗೆ ಅರ್ಪಿಸುತ್ತೇನೆ

ಸೇಡಂ ಮಾರ್ಗದ ರಸ್ತೆಯಲ್ಲಿ ಒಂದು ಕಡೆ ವಿಮಾನ ನಿಲ್ದಾಣ, ಬುದ್ಧವಿಹಾರ, ಇಎಸ್‌ಐ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ, ಐತಿಹಾಸಿಕ ವಸ್ತು ಸಂಗ್ರಹಾಲಯ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿವೆ. ಇನ್ನೊಂದು ಕಡೆ ರಾಮ ಮಂದಿರದಿಂದ ಹುಮನಾಬಾದ್‌ ಬೇಸ್‌ವರೆಗೂ ಇಕ್ಕೆಲಗಳಲ್ಲಿ ವಾಣಿಜ್ಯ ಚಟುವಟಿಕೆಗಳೇ ಹೆಚ್ಚಾಗಿವೆ. ಈ ಎಲ್ಲ ಸ್ಥಳಗಳಿಗೂ ಸುಲಭವಾದ ಹಾಗೂ ನಿರಾತಂಕ ಸಂಪರ್ಕ ಕಲ್ಪಿಸುವುದೇ ನಮ್ಮ ಉದ್ದೇಶ.

ಕಲಬುರಗಿ ಮಾತ್ರವಲ್ಲದೇ, ಕಲ್ಯಾಣ ಕರ್ನಾಟಕದಲ್ಲೇ ಇದು ಆಕರ್ಷಣೆಯ ಕೇಂದ್ರವಾಗಲಿದೆ. ಸಂಚಾರದ ಜತೆಗೆ ಪ್ರವಾಸೋದ್ಯಮ, ಕೈಗಾರಿಕೆ... ಹೀಗೆ ವಿವಿಧ ಆಯಾಮಗಳಲ್ಲಿ ಇದು ಪ್ರಯೋಜನ ನೀಡಲಿದೆ. ಇದಕ್ಕಾಗಿ ಹಲವು ಕಡೆ ಸೇತುವೆಗಳನ್ನು ಗಮನಿಸಿ, ನೀಲಿನಕಾಶೆ ಸಿದ್ಧಪಡಿಸಲಾಗಿದೆ. ರಿಂಗ್‌ ರಸ್ತೆ ಮಾರ್ಗ ವಿಶಾಲವಾದ್ದರಿಂದ ಸ್ಥಳಾವಕಾಶವೂ ಸಾಕಷ್ಟಿದೆ. ಈಗ ಯಾವುದೇ ಅಡೆತಡೆ ಇಲ್ಲ. ಹೀಗಾಗಿ, ಅಂದುಕೊಂಡ ಸಮಯದಲ್ಲೇ ಇದರ ಮೇಲೆ ಜನ ಓಡಾಡುವಂತೆ ಮಾಡುವುದು ನಮ್ಮ ಗುರಿ.

–ದತ್ತಾತ್ರೇಯ ಪಾಟೀಲ ರೇವೂರ, ಅಧ್ಯಕ್ಷ, ಕೆಕೆಆರ್‌ಡಿಬಿ

ಹುಮನಾಬಾದ್‌ ಸರ್ಕಲ್‌ಗೂ ಫ್ಲೈಓವರ್‌

‘ಸದ್ಯ ಖರ್ಗೆ ವೃತ್ತದಲ್ಲಿ ರಸ್ತೆ ಮೇಲ್ಸೇತುವೆ ಸಿದ್ಧಗೊಳಿಸಲಾಗುತ್ತಿದ್ದು, ಮುಂದಿನ ವರ್ಷವೇ ಹುಮನಾಬಾದ್‌ ರಿಂಗ್‌ ರಸ್ತೆಗೂ ಇನ್ನೊಂದು ಫ್ಲೈಓವರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಎರಡನ್ನೂ ಏಕಕಾಲಕ್ಕೆ ಕೈಗೆತ್ತಿಕೊಂಡರೆ ಸಂಚಾರ ಸಮಸ್ಯೆ ಆಗುತ್ತದೆ. ಹೀಗಾಗಿ, ಹುಮನಾಬಾದ್‌ ಬೇಸ್‌ ಕೆಲಸವನ್ನು ಮುಂದಕ್ಕೆ ಹಾಕಿದ್ದೇನೆ’ ಎಂದೂ ಶಾಸಕ ದತ್ತಾತ್ರೇಯ ಪ್ರತಿಕ್ರಿಯೆ ನೀಡಿದರು.

ಇದರೊಂದಿಗೆ, ಅಪಘಾತ ವಲಯ ಎಂದು ಗುರುತಿಸಲಾದ ರಾಮಮಂದಿರ ಸರ್ಕಲ್‌ನಲ್ಲೂ ಫ್ಲೈಓವರ್‌ ಅವಶ್ಯಕತೆ ಹೆಚ್ಚಾಗಿದೆ. ಅದನ್ನೂ ಆದ್ಯತೆ ಮೇಲೆ ಪರಿಗಣಿಸಬೇಕು ಎಂದು ಎಂಜಿನಿಯರ್‌ ಸುನೀಲ ಕುಲಕರ್ಣಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT