ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚುಕಟ್ಟಾದ ಊಟೋಪಚಾರ ವ್ಯವಸ್ಥೆಗೆ ಸಿದ್ಧತೆ

ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆಯಲ್ಲಿ ಆಹಾರ ಸಮಿತಿ ಸಭೆ
Last Updated 31 ಡಿಸೆಂಬರ್ 2019, 15:34 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಫೆಬ್ರುವರಿ 5, 6, 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು, ವಿಶೇಷ ಆಹ್ವಾನಿತರು, ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆಯಾಗಬೇಕು ಎಂದು ಸಮ್ಮೇಳನದ ಆಹಾರ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಬಸವರಾಜ ಮತ್ತಿಮೂಡ ಸೂಚಿಸಿದರು.

ನಗರದಲ್ಲಿಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಉಪಾಹಾರ ಮತ್ತು ಊಟಕ್ಕಾಗಿ 4 ಕೌಂಟರ್‌ಗಳನ್ನು ತೆರೆಯಬೇಕು. ಸ್ಥಳೀಯ ಶೈಲಿಯ ಆಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದ್ದು, ಆಹಾರ ಮತ್ತು ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಸಮಿತಿಯ ಸದಸ್ಯರಿಗೆ ಸೂಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಸಾಹಿತ್ಯ ಸಮ್ಮೆಳನಕ್ಕೆ ಬರುವ ಜನರಿಗೆ ಊಟದ ಮಾಹಿತಿ ನೀಡುವ ಸಲುವಾಗಿ ಧ್ವನಿವರ್ಧಕಗಳನ್ನು ಅಳವಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಊಟಕ್ಕೆ ನೂಕುನುಗ್ಗಲು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಟೋಕನ್ ನಂಬರ್ ನೀಡಬೇಕು. ಪಾಸ್‍ಗಳನ್ನು ಮೊದಲೇ ವಿತರಿಸಬೇಕು ಎಂದರು.

ಕುಡಿಯಲು ಮತ್ತು ಕೈತೊಳೆದುಕೊಳ್ಳಲು ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಬೇಕು. ಈ ಸಮ್ಮೇಳನಕ್ಕೆ ಕೇಂದ್ರ ಸಮಿತಿಯಿಂದ 50 ಜನ, ಎಲ್ಲಾ ಜಿಲ್ಲೆಗಳ ಕಾರ್ಯಕಾರಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರು 40 ಜನ ಮತ್ತು ಸಮಿತಿಯ 50 ಜನರು ಬರಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ್ ಕೆ.ಎಚ್. ಮಾತನಾಡಿ, ಊಟದ ವ್ಯವಸ್ಥೆಗೆ 4 ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಿದ್ದು, ಕುಡಿಯುವ ಮತ್ತು ಕೈತೊಳೆಯುವ ನೀರಿಗಾಗಿ ಪ್ರತ್ಯೇಕವಾಗಿ 70 ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಸಮ್ಮೇಳನದ ಎಲ್ಲಾ ಸಮಿತಿಗಳಿಂದ ಅತಿಥಿಗಳ ಹಾಗೂ ಸದಸ್ಯರ ಮಾಹಿತಿ ನೀಡಿದರೆ ಆಹಾರ ವ್ಯವಸ್ಥೆ ಮಾಡಲು ಸುಲಭವಾಗುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ದೇವೇಂದ್ರಪ್ಪ ಪಾಣಿ, ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಡಾ. ದೀಪಕ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಜಿಲ್ಲಾ ಪಂಚಾಯತಿ ಸದಸ್ಯ ಸಂತೋಷಕುಮಾರ ಮಾಲೀಪಾಟೀಲ, ದಾಲ್ ಮಿಲ್ಲರ್ಸ್‌ ಅಸೋಶಿಯೇಷನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ, ವೈನ್ ಮರ್ಚಂಟ್ ಅಸೋಶಿಯೇಷನ್ ಅಧ್ಯಕ್ಷ ಅಶೋಕ ಗುತ್ತೇದಾರ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಂಕರರಾವ ಪವಾರ, ಆಹಾರ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂರು ದಿನಗಳ ಊಟದ ಮೆನು

ಫೆಬ್ರವರಿ 5: ಬೆಳಿಗ್ಗೆ 8ರಿಂದ 9.30ರವರೆಗೆ ಉಪಾಹಾರ ಶಿರಾ, ಉಪ್ಪಿಟ್ಟು, ಚಹಾ. ಮಧ್ಯಾಹ್ನ 12ರಿಂದ 3ರವರೆಗೆ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಣ್ಣೆಗಾಯಿ, ಮಡಿಕೆ ಕಾಳು, ಚಟ್ನಿಪುಡಿ, ಅನ್ನ–ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಮೋತಿಚೂರು. ರಾತ್ರಿ 7.30ರಿಂದ 10ರವರೆಗೆ ವಾಂಗಿಬಾತ್, ಅನ್ನ–ರಸಂ, ಉಪ್ಪಿನಕಾಯಿ, ಶಾವಿಗೆ ಪಾಯಸ.

ಫೆಬ್ರವರಿ 6: ಬೆಳಿಗ್ಗೆ ಚುರುಮುರಿ ಸೂಸಲಾ, ಮಿರ್ಚಿ ಭಜಿ, ಮೈಸೂರು ಪಾಕ್, ಚಹಾ, ಮಧ್ಯಾಹ್ನ ಊಟಕ್ಕೆ ಸಜ್ಜೆರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಪುಂಡಿ ಪಲ್ಯ, ಡೊಣ್ಣಗಾಯಿ ಪಲ್ಯ, ಚಟ್ನಿಪುಡಿ, ಅನ್ನ–ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಶೇಂಗಾ ಹೋಳಿಗೆ. ರಾತ್ರಿ ಊಟಕ್ಕೆ ಬಿಸಿಬೇಳೆಬಾತ್, ಮೊಸರನ್ನ, ಉಪ್ಪಿನಕಾಯಿ, ರವಾ ಪಾಯಸ.

ಫೆಬ್ರವರಿ 7: ಬೆಳಗ್ಗಿನ ಉಪಾಹಾರ ಜವಿಗೋಧಿ ಉಪ್ಪಿಟ್ಟು, ಶೇಂಗಾಚಟ್ನಿ, ಮೊಸರು ಭಜ್ಜಿ, ಚಹಾ, ಬೇಸನ್ ಉಂಡಿ. ಮಧ್ಯಾಹ್ನದ ಊಟಕ್ಕೆ ಸಜ್ಜೆರೊಟ್ಟಿ, ಜೋಳದರೊಟ್ಟಿ, ಚಪಾತಿ, ಹೆಸರುಕಾಳು ಪಲ್ಯ, ಮಿಕ್ಸ್ ತರಕಾರಿ ಪಲ್ಯ, ಚಟ್ನಿಪುಡಿ, ಅನ್ನ–ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಗೋಧಿ ಹುಗ್ಗಿ. ರಾತ್ರಿ ಊಟಕ್ಕೆ ಅನ್ನ-ಸಾಂಬಾರ್, ಪಕೋಡ, ಚಟ್ನಿ ಪುಡಿ, ಜಿಲೇಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT