ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಫುಟ್‌ಪಾತ್‌ ಒತ್ತುವರಿ ತೆರವು: ಪಾಲಿಕೆಯಿಂದ ಜಂಟಿ ಕಾರ್ಯಾಚರಣೆ

ನಗರ ಪೊಲೀಸ್‌ ಆಯುಕ್ತಾಲಯ
Last Updated 8 ಆಗಸ್ಟ್ 2020, 15:56 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ವಿವಿಧೆಡೆ ಫುಟ್‌ಪಾತ್‌ಗಳ ಮೇಲೆ ಅನಧಿಕೃತವಾಗಿ ಇಟ್ಟುಕೊಂಡಿದ್ದ ಸುಮಾರು 90ಕ್ಕೂ ಹೆಚ್ಚು ಗೂಡಂಗಡಿಗಳನ್ನು ಶನಿವಾರ ತೆರವುಗೊಳಿಸಲಾಯಿತು.

ಇಲ್ಲಿನ ಸೂಪರ್‌ ಮಾರ್ಕೆಟ್‌ ಪ್ರದೇಶದ ಚೌಕ್‌ ಪೊಲೀಸ್‌ ಠಾಣೆ ಸರ್ಕಲ್‌, ಕಪಡಾ ಬಜಾರ್‌, ಚಪ್ಪಲ್‌ ಬಜಾರ್‌, ಜನತಾ ಬಜಾರ್‌ ಹಾಗೂ ಬೈಪಾಸ್‌ ರಸ್ತೆಗೆ ಹೊಂದಿಕೊಂಡ ಮಹಾರಾಜ ಲೈನ್‌ನ ಅಕ್ಕಪಕ್ಕದಲ್ಲಿ ನೂರಾರು ಗೂಡಂಗಡಿಗಳು ಇವೆ. ಈ ಪ್ರದೇಶಗಳು ತೀರ ಜನಸಂದಣಿಯಿಂದ ಕೂಡಿದ್ದವು.ಗೂಡಂಗಡಿಗಳನ್ನು ಫುಟ್‌ಪಾತ್‌ ಮೇಲೆಯೇ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಕಾರಣ, ಮತ್ತಷ್ಟು ಸಂದಣಿ ಉಂಟಾಗುತ್ತಿತ್ತು. ಮಾರುಕಟ್ಟೆಯಲ್ಲಿ ಮಹಿಳೆಯರು, ಹಿರಿಯರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಬಗ್ಗೆ ಸಾರ್ವಜನಿಕರಿಂದ ಹಲವು ಬಾರಿ ಪಾಲಿಕೆಗೆ ದೂರುಗಳು ಕೂಡ ಸಲ್ಲಿಕೆಯಾಗಿದ್ದವು. ಇದನ್ನು ಪರಿಗಣಿಸಿ, ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಒತ್ತುವರಿಯನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿ, ಪಾಲಿಕೆ ಜಾಗಗಳನ್ನು ಬಿಟ್ಟುಕೊಡಬೇಕು, ಜನ– ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕಳೆದ ಮೂರು ದಿನಗಳಿಂದ ಸೂಚನೆ ನೀಡಲಾಗಿತ್ತು. ಹಲವರಿಗೆ ತಮ್ಮ ಅಂಗಡಿಗಳ ಮುಂದಿನ ಕಾಂಪೌಂಡ್‌, ಕಟ್ಟೆ, ಗೋಡೆಗಳನ್ನು ತೆರವು ಮಾಡುವಂತೆ ನೋಟಿಸ್‌ ಕೂಡ ನೀಡಲಾಗಿತ್ತು. ಒತ್ತುವರಿ ತೆರವು ಮಾಡುವಂತೆ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದರಿಂದ ಶನಿವಾರ ಬೆಳಿಗ್ಗೆಯೇ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು.

ಏನೇನು ತೆರವು: ಚಪ್ಪಲ್‌ ಬಜಾರ್‌, ಕ‍ಪಡಾ ಬಜಾರ್‌ ಮತ್ತು ಜನತಾ ಬಜಾರ್‌ನ ಫುಟ್‌ಪಾತ್‌ ಹಾಗೂ ರಸ್ತೆ ಕಾಣದಂತೆ ಇಟ್ಟುಕೊಂಡಿದ್ದ ಎಲ್ಲ ಮಳಿಗೆಗಳನ್ನೂ ತೆರವು ಮಾಡಲಾಯಿತು.

ಅಲ್ಲದೇ, ರಸ್ತೆ ಮಧ್ಯದಲ್ಲೇ ತಳ್ಳುವ ಗಾಡಿಗಳಲ್ಲಿ ಖರ್ಜೂರ, ಹಣ್ಣು, ತರಕಾರಿ, ಎಲೆ–ಅಡಿಕೆ, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರ ಗಾಡಿಗಳನ್ನೂ ವಶಕ್ಕೆ ಪಡೆಯಲಾಯಿತು.

‘ಬೇಕರಿ, ಕಿರಾಣಿ ಅಂಗಡಿ, ಹೋಟೆಲ್‌, ಬಟ್ಟೆ– ಪಾತ್ರೆ ಮಳಿಗೆಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ತಗಡಿನ ಶೆಡ್‌ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಮತ್ತೆ ಕೆಲವರು ಅಂತರ ಕಾಪಾಡಿಕೊಳ್ಳುವ ಕಾರಣಕ್ಕೆ, ರಸ್ತೆಯನ್ನೂ ಅತಿಕ್ರಮಣ ಮಾಡಿ ಬಿದಿರಿನ ಗಳಗಳನ್ನು ಹುಗಿದಿದ್ದರು. ಜನರ ಓಡಾಟಕ್ಕೆ ಇವು ಅಡತಡೆ ಮಾಡಿದ್ದರಿಂದ ಎಲ್ಲವನ್ನೂ ಕಿತ್ತೆಸೆಯಲಾಯಿತು’ ಎಂದು ಪಾಲಿಕೆಯವರು ತಿಳಿಸಿದರು.

ಕ್ರೇನ್‌ ಹಾಗೂ ಪಾಲಿಕೆ ವಾಹನಗಳ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಸಂಜೆಯವರೆಗೂ ಮುಂದುವರಿಸಿದರು. ಗೂಡಂಗಡಿ, ಶೆಡ್‌ಗೆ ಹಾಕಿದ್ದ ತಗಡು, ಬಿದಿರಿನ ಗಳ ಮುಂತಾದ ಅವಶೇಷಗಳನ್ನು ಪಾಲಿಕೆ ವಾಹನದಲ್ಲಿ ಹಾಕಿ ಸಾಗಿಸಿದರು.

ಕೊರೊನಾ ನಿಯಂತ್ರಣಕ್ಕೆ ಕ್ರಮ
‘ಮಾರುಕಟ್ಟೆಯ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಎಲ್ಲೆಂದರಲ್ಲಿ ಗೂಡಂಗಡಿ ಹಾಗೂ ತಳ್ಳುವ ಗಾಡಿಗಳನ್ನು ಇಟ್ಟುಕೊಂಡ ಕಾರಣ ವ್ಯಾಪಾರಿಗಳು ಹಾಗೂ ಗ್ರಾಹಕರು ಭುಜಕ್ಕೆ ಭುಜ ಅಂಟಿಸಿಕೊಂಡು ನಡೆದಾಡುವ ಸ್ಥಿತಿ ಇದೆ. ಇದರಿಂದ ಕೊರೊನಾ ವೈರಾಣು ಹೆಚ್ಚು ವ್ಯಾ‍ಪಿಸುವ ಸಾಧ್ಯತೆ ಇದೆ. ಕನಿಷ್ಠ ಅಂತರ ಕೂಡ ಕಾಪಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ತೆರವು ಕಾರ್ಯಾಚರಣೆ ಅನಿವಾರ್ಯವಾಗಿದೆ’ ಎಂದು ಪಾಲಿಕೆಯ ಹಿರಿಯ ಆರೋಗ್ಯ ಸಹಾಯಕ ಕಲ್ಲಯ್ಯಸ್ವಾಮಿ ಹಾಗೂ ಕಿರಿಯ ಆರೋಗ್ಯ ಸಹಾಯಕ ಸುಕ್ಕಾರೆಡ್ಡಿ ಹೇಳಿದರು.

‘ಕೇವಲ ಅತಿಕ್ರಮ ಮಾಡಿದವರು ಮಾತ್ರವಲ್ಲ; ಮಾಸ್ಕ್ ಧರಿಸದ ವ್ಯಾಪಾರಿಗಳು, ಪಾಲಿಕೆಯಿಂದ ಅನುಮತಿ ಪತ್ರ ಪಡೆಯದವರು, ತೆರಿಗೆ ಕಟ್ಟದವರು, ವ್ಯರ್ಥ ಪದಾರ್ಥಗಳನ್ನು ಸ್ಥಳದಲ್ಲೇ ಎಸೆದು ಹೋಗುವವರನ್ನೂ ಜಾಗ ಖಾಲಿ ಮಾಡಿಸಲು ಆದೇಶ ಬಂದಿದೆ’ ಎಂದೂ ಅವರು ಹೇಳಿದರು.

ವ್ಯಾಪಾರಿಗಳ ವಾಗ್ವಾದ
ತೆರವು ಕಾರ್ಯಾಚರಣೆ ಆರಂಭವಾದ ಮೇಲೆ ಹಲವು ವ್ಯಾಪಾರಿಗಳು ಸಿಬ್ಬಂದಿ ಜತೆಗೆ ಮಾತಿನ ಚಕಮಕಿ ನಡೆಸಿದರು.

‘ಹಲವು ವರ್ಷಗಳಿಂದ ಇಲ್ಲೇ ವ್ಯಾಪಾರ ನಡೆಸುತ್ತಿದ್ದೇವೆ. ಜನರಿಗೆ ತೊಂದರೆ ಆಗದಂತೆ ರಸ್ತೆ ಪಕ್ಕದಲ್ಲಿ ಮಾಡುತ್ತಿದ್ದೇವೆ. ಅದರಲ್ಲೂ ಇಲ್ಲಿ ವ್ಯಾಪಾರ ಮಾಡುವುದು ಹಳ್ಳಿಗಳಿಂದ ಬಂದ ಜನರು ಮಾತ್ರ. ಸಣ್ಣಪುಟ್ಟ ವ್ಯಾಪಾರಿಗಳನ್ನು ಮಾತ್ರ ತೆರವು ಮಾಡುತ್ತೀರಿ. ದೊಡ್ಡ ಉದ್ಯಮಿಗಳನ್ನು ಕೇಳುವವರೇ ಇಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಪೊಲೀಸರು, ವ್ಯಾಪಾರಿಗಳನ್ನು ಚೆದುರಿಸಿ ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.

‘ತೆರವುಕಾರ್ಯ ಮುಂದುವರಿಕೆ’
‘ನಗರದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಪಾಲಿಕೆಯು ಇನ್ನಷ್ಟು ಕಠಿಣ ನಿರ್ಧಾರ ಕೈಗೊಳ್ಳಲಿದೆ. ಇದರ ಮೊದಲ ಹೆಜ್ಜೆಯಾಗಿ ಅಂತರ ಕಾಪಾಡುವ ಉದ್ದೇಶದಿಂದ ಅತಿಕ್ರಮಣ ತೆರವು ಮಾಡಲಾಗುತ್ತಿದೆ. ಇದು ನಗರ ಪೊಲೀಸ್‌ ಆಯುಕ್ತರ ಕಚೇರಿ ಹಾಗೂ ಪಾಲಿಕೆಯ ಜಂಟಿ ಕಾರ್ಯಾಚರಣೆ. ಒಂದು ದಿನಕ್ಕೆ ಸೀಮಿತವಾಗದೇ, ನಿರಂತರ ಮುಂದುವರಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಪ್ರತಿಕ್ರಿಯಿಸಿದರು.

‘ಫುಟ್‌ಪಾತ್, ರಸ್ತೆ ಮುಂತಾದ ಪಾಲಿಕೆ ಜಾಗಗಳನ್ನು ಒತ್ತುವರಿ ಮಾಡಿಕೊಂಡ ದೊಡ್ಡ ಮಳಿಗೆ, ಅಂಗಡಿ, ಮನೆಗಳ ಮೇಲೂ ಕಣ್ಣಿಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳನ್ನೂ ತೆರವು ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT