ಕಲಬುರಗಿ: ‘ಕಾಲೇಜು ಕ್ಯಾಂಪಸ್‍ನಲ್ಲಿ ರ್‍ಯಾಗಿಂಗ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರ್‍ಯಾಗಿಂಗ್ ವಿರೋಧಿ ಸಮಿತಿ ರಚಿಸಬೇಕು ಮತ್ತು ಈ ಸಂಬಂಧ ಸಹಾಯವಾಣಿ ಸ್ಥಾಪಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ತಿಳಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ರ್‍ಯಾಗಿಂಗ್ ಮತ್ತು ಮಾದಕ ದ್ರವ್ಯ ಸೇವನೆ ತಡೆ ಕುರಿತು ನಗರದ ವಿವಿಧ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು ಮತ್ತು ವಸತಿ ನಿಲಯಗಳ ವಾರ್ಡನ್‌ಗಳ ಸಭೆ ನಡೆಸಿದ ಅವರು, ಕಾಲೇಜಿನಲ್ಲಿ ಶಿಕ್ಷಣ ಸ್ನೇಹಿ ವಾತಾವರಣ ನಿರ್ಮಿಸುವುದು ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.
‘ಕಾಲೇಜಿನಲ್ಲಿ ಯಾವುದೇ ರೀತಿಯ ಮಾದಕ ವಸ್ತು ಬಳಕೆಯಾಗದಂತೆ ಕಟ್ಟೆಚ್ಚರ ವಹಿಸಬೇಕು. ಯಾವುದೇ ವಿದ್ಯಾರ್ಥಿ ಅಸಹಜ ನಡವಳಿಕೆ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಪ್ರಾಂಶುಪಾಲರು ಮತ್ತು ಡೀನ್ ಅವರಿಗೆ ನಿರ್ದೇಶನ ನೀಡಿದ ಚೇತನ್ ಆರ್. ಅವರು, ವಸತಿ ನಿಲಯಗಳಲ್ಲಿ ವಾರ್ಡನ್‌ಗಳು ಇದರ ಬಗ್ಗೆ ನಿಗಾ ವಹಿಸಬೇಕು’ ಎಂದರು.
‘ಪ್ರತಿ ಕಾಲೇಜಿನಲ್ಲಿ ರ್‍ಯಾಗಿಂಗ್ ಬ್ಯಾನ್ ಫಲಕ ಅಳವಡಿಸುವಂತೆಯೂ ಪೊಲೀಸ್ ಆಯುಕ್ತ ಚೇತನ ಆರ್. ಅವರು ಕಾಲೇಜುಗಳ ಮುಖ್ಯಸ್ಥರಿಗೆ’ ಸೂಚಿಸಿದರು.
ಸಭೆಯಲ್ಲಿ ಕಲಬುರಗಿ ಡಿಸಿಪಿ ಕನಿಕಾ ಸಿಕ್ರಿವಾಲ್, ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು, ಕೆಬಿಎನ್ ಮೆಡಿಕಲ್ ಕಾಲೇಜು, ಇಎಸ್ಐಸಿ ಮೆಡಿಕಲ್ ಕಾಲೇಜ್, ಅಲ್-ಬದರ್, ನಿಜಲಿಂಗಪ್ಪ, ಇಎಸ್ಐಸಿ ಡೆಂಟಲ್ ಕಾಲೇಜ್, ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರ್ ಕಾಲೇಜು, ಕೆಸಿಟಿ ಎಂಜಿನಿಯರಿಂಗ್ ಕಾಲೇಜು, ಶೆಟ್ಟಿ, ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲು, ಡೀನ್ಸ್, ಹಾಸ್ಟೆಲ್ ವಾರ್ಡನ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.