ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬಸವೇಶ್ವರ ಆಸ್ಪತ್ರೆಯ 48 ವಾರ್ಡ್‌ ಭರ್ತಿ

ಪೂರ್ಣ ಪ್ರಮಾಣದ ಕೋವಿಡ್‌ ಆಸ್ಪತ್ರೆ ಆಗಿ ಘೋಷಣೆ, ಸಾಮಾನ್ಯ ರೋಗಿಗಳಿಗೂ ವ್ಯವಸ್ಥೆ
Last Updated 23 ಜುಲೈ 2020, 15:37 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಬಸವೇಶ್ವರ ಆಸ್ಪತ್ರೆ ಹಾಗೂ ಧನ್ವಂತರಿ ಆಸ್ಪತ್ರೆಗಳನ್ನು ಪೂರ್ಣ ಪ್ರಮಾಣದ ಕೋವಿಡ್‌ ಆಸ್ಪತ್ರೆಗಳಾಗಿ ಪರಿಗಣಿಸಲಾಗಿದ್ದು, ಒಂದೇ ವಾರದಲ್ಲಿ ಎರಡೂ ಆಸ್ಪತ್ರೆಗಳ ಎಲ್ಲ ಕೋವಿಡ್‌ ಬೆಡ್‌ಗಳೂ ಭರ್ತಿಯಾಗಿವೆ.

ಜುಲೈ 13ರಿಂದಲೇ ಬಸವೇಶ್ವರ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆ ಆಗಿ ಪರಿವರ್ತಿಸಲಾಗಿದೆ. 24 ಸ್ಪೆಷಲ್‌ ಐಸೋಲೇಷನ್‌ ವಾರ್ಡ್‌ ತೆರೆಲಾಗಿದ್ದು, ಇದರಲ್ಲಿ ಐಸಿಯು ವ್ಯವಸ್ಥೆ ಇದೆ. ಇನ್ನೂ 24 ಆಕ್ಸಿಜನ್‌ ವ್ಯವಸ್ಥೆ ಸಹಿತಿ ವಿಶೇಷ ವಾರ್ಡ್‌ಗಳನ್ನು ಸೋಂಕಿತರಿಗಾಗಿ ಮೀಸಲಿಸಲಾಗಿದೆ. ಈಗಾಗಲೇ ಐಸಿಯು ಹಾಗೂ ಸ್ಪೆಷಲ್‌ ವಾರ್ಡ್ ಎರಡೂ ಕಡೆ ಸೋಂಕಿತರು ಭರ್ತಿಯಾಗಿದ್ದಾರೆ.

ಈ 24 ವಾರ್ಡ್‌ಳು ಮಾತ್ರವಲ್ಲದೇ, 130 ‘ಕೋವಿಡ್ ರಿಕವರಿ ಬೆಡ್‌’ ಸಿದ್ಧಪಡಿಸಲಾಗಿದೆ. ತೀವ್ರತರ ಲಕ್ಷಣಗಳಿಂದ ಬಳಲಿತ್ತಿರುವ, ಕೃತಕ ಉಸಿರಾಟ ಅಗತ್ಯವಿರುವ ಹಾಗೂ ತುರ್ತುಚಿಕಿತ್ಸೆ ಅಗತ್ಯವಿದ್ದವರಿಗೆ ಮಾತ್ರ ಈ 24 ವಿಶೇಷ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಇಲ್ಲಿಂದ ಸುಧಾರಿಸಿಕೊಂಡು ಹೊರಬಂದ ನಂತರ ಮತ್ತಷಷ್ಟು ದಿನ ವಿಶ್ರಾಂತಿ ಹಾಗೂ ಪರಿಶೀಲನೆಗಾಗಿ ಈ ರಿಕವರಿ ಬೆಡ್‌ನಲ್ಲಿ ಇರಿಸಲಾಗುವುದು. ಯಾರಿಗಾದರೂ ಹೋಂ ಕ್ವಾರಂಟೈನ್‌ ಸಾಧ್ಯವಾಗದಿದ್ದವರು ಇಲ್ಲಿ ಇರಬಹುದು. ಕೋವಿಡ್‌ ಪಾಸಿಟಿವ್ ಬಂದಿದ್ದರೂ ಲಕ್ಷಣಗಳು ಇಲ್ಲದವರು ಇಲ್ಲಿ ಚಿಕಿತ್ಸೆ ಪಡೆಯಬುಹುದು. ಈಗಾಗಲೇ ಇಂಥ ಆರು ರೋಗಿಗಳು ದಾಖಲಾಗಿದ್ದಾರೆ ಎಂದು ಎಂಆರ್‌ಎಂಸಿ ಡೀನ್‌ ಡಾ.ಉಮೇಶಚಂದ್ರ ಮಾಹಿತಿ ನೀಡಿದ್ದಾರೆ.

4 ವೆಂಟಿಲೇಟರ್‌, 10 ಆಕ್ಸಿಜನ್‌ ಮಷಿನ್‌: ಕೋವಿಡ್‌ ರೋಂಕಿತರಿಗಾಗಿಯೇ ಆಸ್ಪತ್ರೆಯಲ್ಲಿ 4 ವೆಂಟಿಲೇಟರ್‌ ಸಿದ್ಧಗೊಳಿಸಲಾಗಿದೆ. ಇದಲ್ಲದೇ ‘ಹೈ ಫ್ಲೋ ನೇಜಲ್‌ ಆಕ್ಸಿಜನ್ ಥೆರಪಿ (ಎಚ್‌ಎಫ್‌ಎನ್‌ಒಟಿ)‌’ ಮಷಿನ್‌ ಈಗಾಗಲೇ 4 ಇವೆ. ಇನ್ನೂ 6 ತರಿಸಿಕೊಳ್ಳಲಾಗುತ್ತಿದೆ.

ಸದ್ಯ ಕಂಡುಬರುತ್ತಿರುವ ಸೋಂಕಿತರಲ್ಲಿ ಆಮ್ಲಜನಕದ ಕೊರತೆಯಿಂದ ಬಳಲುವವರೇ ಹೆಚ್ಚಾಗಿದ್ದಾರೆ. ಹಾಗಾಗಿ, ಅದೇ ರೀತಿಯ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಶಿಫ್ಟ್‌ನಲ್ಲಿ ಕರ್ತವ್ಯ: ತಜ್ಞ ವೈದ್ಯ, ಅರಿವಳಕೆ ತಜ್ಞ, ಮಕ್ಕಳ ತಜ್ಞ ಹೀಗೆ ಆಯಾ ವಿಭಾಗದಲ್ಲಿ ಒಬ್ಬ ತಜ್ಞ ವೈದ್ಯರನ್ನು ಒಳಗೊಂಡ ಮೂವರ ತಂಡ ರಚಿಸಲಾಗಿದೆ. ಈ ಎಲ್ಲ ತಂಡಗಳೂ ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡಲಿವೆ. 24X7 ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಿದೆ. ಆಂಬುಲೆನ್ಸ್‌ ಸೌಲಭ್ಯ, ಮಾದರಿ ಸಂಗ್ರಹ ಸೌಕರ್ಯ ಮೊದಲಿನಿಂದಲೂ ಇದೆ.

ಲ್ಯಾಬ್‌ ಕೆಲಸ ಅಂತಿಕ ಹಂತಕ್ಕೆ: ಬಸವೇಶ್ವರ ಆಸ್ಪತ್ರೆಯಲ್ಲಿ ಕೊರೊನಾ ವೈರಾಣು ಪತ್ತೆ ಪ್ರಯೋಗಾಲಯ ಪೂರ್ಣ ಸಿದ್ಧಗೊಂಡಿದೆ. ಸ್ಯಾಂಪಲ್‌ ಟೆಸ್ಟ್‌ಗಳನ್ನು ಐಸಿಎಂಆರ್‌ ಮತ್ತು ಎನ್‌ಎಬಿಎಲ್‌ಗೆ ಕಳುಹಿಸಿ ಅಲ್ಲಿಂದ ದೃಢಪಡಿಸುವುದು ಮಾತ್ರ ಬಾಕಿ ಇದೆ. ಶೀಘ್ರವೇ ಲ್ಯಾಬ್‌ ಕರ್ತವ್ಯ ಆರಂಭವಾಗಲಿದೆ ಎಂದೂ ಅವರು ವಿವರಿಸಿದರು.

ಸಾಮಾನ್ಯ ರೋಗಿಗಳಿಗೂ 30 ಬೆಡ್‌
ಕೋವಿಡ್‌ ಹೊರತಾಗಿ ಹೃದ್ರೋಗ, ಅಪಘಾತ, ಮಿದುಳು ಸಮಸ್ಯೆ, ಕಾಮಾಲೆ, ಡೆಂಗಿ ಮುಂತಾದ ರೋಗಗಳಿಂದ ಬಳಲುವವರಿಗಾಗಿಯೇ 30 ಬೆಡ್‌ಗಳನ್ನು ಮೀಸಲು ಇಡಲಾಗಿದೆ. ಇದಕ್ಕೂ ಕೋವಿಡ್‌ ವಾರ್ಡ್‌ಗಳಿಗೂ ಸಂಪರ್ಕವೇ ಇಲ್ಲದಂತೆ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎನ್ನುತ್ತವೆ ಆಸ್ಪತ್ರೆ ಮೂಲಗಳು.

ನೇರವಾಗಿಯೂ ಬರಬಹುದು
ಈಗಾಗಲೇ ಜಿಮ್ಸ್‌ನಲ್ಲಿ ಪಾಸಿಟಿವ್‌ ದೃಢಪಟ್ಟ ಮೇಲೆ ಹಲವು ರೋಗಿಗಳು ಬಂದು ದಾಖಲಾಗಿದ್ದಾರೆ. ಆದರೆ, ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಲು ಜಿಮ್ಸ್‌ ಮೂಲಕವೇ ಬರಬೇಕು ಎಂದೇನಿಲ್ಲ. ರೋಗಿಗಳು ನೇರವಾಗಿ ಬಂದರೂ ಅವರನ್ನು ದಾಖಲು ಮಾಡಿಕೊಂಡು ಚಿಕಿತ್ಸಡ ನೀಡಲು ಅವಕಾಶವಿದೆ.

ಇದಕ್ಕೆ ಅಗತ್ಯ ಔಷಧಗಳನ್ನೂ ಈಗಾಗಲೇ ತರಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT