ಕಲಬುರಗಿ: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ತಾವು ಬಾಡಿಗೆಗಿದ್ದ ಮನೆಯ ಮಾಲೀಕರಿಂದಲೇ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಹಾಗೂ ನಗರದಲ್ಲಿ ಸೋಮವಾರ ಸಂಜೆ ನಡೆದ ಅಪಹರಣ ಪ‍್ರಕರಣದ ಪ್ರಮುಖ ಆರೋಪಿ, ಶ್ರೀನಿವಾಸ ಸರಡಗಿ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕಿ (ಎಫ್‌ಡಿಎ) ಮಂಗಲಾ ಬಿರಾದಾರ ಸೇರಿದಂತೆ ನಾಲ್ವರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾನು ಹೇಗೆ ಮಂಗಲಾ ಅವರಿಂದ ಮೋಸ ಹೋದೆ ಎಂಬುದನ್ನು ಶಹಾಬಜಾರ್‌ನ ಗಂಧಿಗುಡಿ ಲೇಔಟ್‌ನ ಸಾವಿತ್ರಿ ಕಲಶೆಟ್ಟಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರವಾಗಿ ಬಿಚ್ಚಿಟ್ಟಿದ್ದಾರೆ.
ಅಫಜಲಪುರ ತಾಲ್ಲೂಕಿನ ಗೌಡಗಾಂವ ಗ್ರಾಮದ ಮಹೇಶ ಬಿರಾದಾರ, ಮಂಗಲಾ ಬಿರಾದಾರ, ಕಮಲಾಬಾಯಿ ಬಿರಾದಾರ ಅವರು ಸಾವಿತ್ರಿ ಅವರ ಮನೆಗೆ ಬಾಡಿಗೆಗೆ ಬಂದಿದ್ದರು. ಕೆಲ ದಿನಗಳು ಕಳೆದ ಬಳಿಕ ಹಣವನ್ನು ದುಪ್ಪಟ್ಟು ಮಾಡುವ ಕಂಪನಿ ನಡೆಸುತ್ತಿದ್ದು, ₹ 10 ಸಾವಿರ ಕೊಟ್ಟರೆ 10 ದಿನಗಳಲ್ಲಿ ₹ 20 ಸಾವಿರ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿ ಹಣ ಕೊಟ್ಟಾಗ ₹ 20 ಸಾವಿರ ಕೊಟ್ಟಿದ್ದಾರೆ. ₹ 10 ಲಕ್ಷ ನೀಡಿದರೆ ಮೂರು ತಿಂಗಳ ಬಳಿಕ ₹ 20 ಲಕ್ಷ ನೀಡುವುದಾಗಿ ಮಂಗಲಾ ಹೇಳಿದ್ದಾರೆ. ಕೊಟ್ಟ ಹಣ ದುಪ್ಪಟ್ಟಾಗಿದ್ದರಿಂದ ನಂಬಿದ ಕವಿತಾ ಅವರು ಹಣವನ್ನು ಹೊಂದಿಸಿ ಕೊಟ್ಟಿದ್ದಾರೆ. ಎರಡು ವಾರದ ನಂತರ ಮತ್ತೆ ₹ 5 ಲಕ್ಷ ಹಣವನ್ನು ಆರ್‌ಟಿಜಿಎಸ್ ಮೂಲಕ ಮಹೇಶ ಬಿರಾದಾರ ಖಾತೆಗೆ ಪಾವತಿಸಿದ್ದಾರೆ.
ಮೂರು ತಿಂಗಳಾಗುತ್ತಿದ್ದಂತೆ ₹ 20 ಲಕ್ಷ ಕೇಳಿದ್ದಾರೆ. ಆಗ ಮಹೇಶ ಮತ್ತು ಮಂಗಲಾ 90 ದಿನಗಳ ನಂತರ ನಮಗೆ ₹ 20 ಲಕ್ಷ ಬರುತ್ತದೆ. ಅದೇ ಹಣವನ್ನು ಮತ್ತೆ ತೊಡಗಿಸಿದರೆ 40 ದಿನಗಳಲ್ಲಿ ಹೆಚ್ಚುವರಿಯಾಗಿ ₹ 15 ಲಕ್ಷದ ಜೊತೆಗೆ ಎರಡೂವರೆ ತೊಲೆ ಬಂಗಾರ ಹಾಗೂ ₹ 1 ಲಕ್ಷ ಕಮಿಷನ್ ಬರುತ್ತದೆ ಎಂದು ಪುಸಲಾಯಿಸಿದ್ದಾರೆ. ಇದಕ್ಕೆ ಒಪ್ಪದ ಸಾವಿತ್ರಿ ಕಲಶೆಟ್ಟಿ ಅವರು ನಮಗೆ ಭರವಸೆ ನೀಡಿದಂತೆ ₹ 20 ಲಕ್ಷ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೂ, 40 ದಿನಗಳಲ್ಲಿ ಇಷ್ಟು ಹಣ ಬರುತ್ತದೆ ಎಂದಾಗ ಒಪ್ಪಿದ್ದಾರೆ. ಏತನ್ಮಧ್ಯೆ ಇವರನ್ನು ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ. ಏಕೆ ಬರುತ್ತಿದ್ದಾರೆ ಎಂದು ವಿಚಾರಿಸಿದಾಗ ಹಣ ದುಪ್ಪಟ್ಟು ಮಾಡುವುದಾಗಿ ಮಹೇಶ ಮತ್ತು ಮಂಗಲಾ ಹೇಳಿರುವುದಾಗಿ ಜನರು ಹೇಳಿದರು ಎಂದು ಸಾವಿತ್ರಿ ದೂರಿನಲ್ಲಿ ತಿಳಿಸಿದ್ದಾರೆ.
ತಾವು ಮೋಸ ಹೋದೆವು ಎಂಬುದು ಗೊತ್ತಾಗುತ್ತಿದ್ದಂತೆಯೇ ಸಾವಿತ್ರಿ ಅವರು ಮಗ ಮಾಣಿಕಪ್ಪನೊಂದಿಗೆ ಮಂಗಲಾ ಕೆಲಸ ಮಾಡುವ ಶ್ರೀನಿವಾಸ ಸರಡಗಿ ಪ್ರೌಢಶಾಲೆಗೆ ಹೋಗಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ಮಂಗಲಾ ಫೋನ್ ಮಾಡಿದಾಗ ದಯಾನಂದ ಸೋಮಲಿಂಗ ಹಿರೊಳ್ಳಿ, ರಾಜಕುಮಾರ ರೇವಣಸಿದ್ದಪ್ಪ ಪಾಟೀಲ, ಮೀಸಲು ಪೊಲೀಸ್ ಪಡೆಯಲ್ಲಿ ಎಆರ್‌ಎಸ್‌ಐ ಆಗಿರುವ ರಮೇಶ ಮಾನೆ, ನಬಿಸಾಬ್ ದಸ್ತಗಿರಸಾಬ್ ಶೇಖ್ ಎಂಬುವವರು ಬಂದಿದ್ದಾರೆ.
ಮಂಗಲಾ ವಿರುದ್ಧ ಬೇರೆ ಜಿಲ್ಲೆಗಳಲ್ಲಿ ಪೊಲೀಸ್ ವಾರೆಂಟ್ ಇದೆ ಎಂದು ಅವರನ್ನು ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಆಕೆ ಹಣ ಕೊಡುವ ತನಕ ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ದಯಾನಂದ ಹಿರೊಳ್ಳಿ ತಮ್ಮನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಿಸ್ತೂಲ್ ತೋರಿಸಿ ಮಂಗಲಾ ಕಡೆಯಿಂದ ದುಡ್ಡು ಮುಟ್ಟಿರುತ್ತದೆ ಎಂದು ಬರೆದುಕೊಡುವಂತೆ ಒತ್ತಾಯಿಸಿದ್ದಾರೆ.
ಕಾರು ಕುಸನೂರ ರಸ್ತೆ, ರಾಮಮಂದಿರ ಮೂಲಕ ಹೈಕೋರ್ಟ್ ಬಳಿ ಬಂದಾಗ ಮಕ್ಕಳಾದ ಮಾಣಿಕಪ್ಪ, ರೇವಣಸಿದ್ದಪ್ಪ ಕಾರನ್ನು ಅಡ್ಡಗಟ್ಟಿದಾಗ ಕೆಳಗೆ ಇಳಿದೆ. ಆಗ ಜನರು, ಪೊಲೀಸರು ಸೇರಿದರು ಎಂದು ಸಾವಿತ್ರಿ ದೂರಿನಲ್ಲಿ ತಿಳಿಸಿದ್ದಾರೆ.
ಹಣ ದುಪ್ಪಟ್ಟು ಮಾಡುವ ಜಾಲ ಸಕ್ರಿಯ ಮಹಿಳೆಯ ಅಪಹರಣದಂತಹ ಸಿನಿಮೀಯ ಘಟನೆ ನಡೆದ ಬಳಿಕ ಜಿಲ್ಲೆಯಲ್ಲಿ ಹಣ ದುಪ್ಪಟ್ಟು ಮಾಡುವ ಜಾಲ ಸಕ್ರಿಯವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೊದಲು ಸಣ್ಣ ಪ್ರಮಾಣದ ಹಣವನ್ನು ದುಪ್ಪಟ್ಟು ಮಾಡಿಕೊಡುವುದು ನಂಬಿಕೆ ಬಂದ ನಂತರ ಲಕ್ಷಾಂತರ ರೂಪಾಯಿ ಹಣವನ್ನು ತೊಡಗಿಸಿಕೊಳ್ಳುವಂತೆ ಪುಸಲಾಯಿಸುತ್ತಿರುವ ಘಟನೆಗಳು ನಡೆದಿವೆ ಎನ್ನಲಾಗುತ್ತದೆ. ಒಂದೊಮ್ಮೆ ಹಣ ವಾಪಸ್ ಕೇಳಲು ಹೋದಾಗ ಗೂಂಡಾಗಳನ್ನು ಬಳಸಿ ಬೆದರಿಕೆ ಹಾಕುವ ಘಟನೆಗಳು ಅಲ್ಲಲ್ಲಿ ನಡೆದಿವೆ ಎಂದು ಪೊಲೀಸರು ಶಂಕಿಸಿದ್ದು ಅಂತಹ ತಂಡಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.