ಮಂಗಳವಾರ, ನವೆಂಬರ್ 12, 2019
27 °C

ಗಾಣಗಾಪುರ ಅಭಿವೃದ್ಧಿಗೆ ₹ 10 ಕೋಟಿ ಬಿಡುಗಡೆ

Published:
Updated:

ಕಲಬುರ್ಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 10 ಕೋಟಿ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರ ಚುನಾವಣಾ ಪ್ರಚಾರ ಮುಗಿಸಿ ನಗರಕ್ಕೆ ಭೇಟಿ ನೀಡಿದ್ದ ವೇಳೆ ಅ 17ರಂದು ದತ್ತಾತ್ರೇಯ ದರ್ಶನ ಪಡೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಅಭಿವೃದ್ಧಿ ₹ 10 ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಅ 18ರಂದೇ ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದ್ದರು. ಅದರಂತೆ ಆರ್ಥಿಕ ಇಲಾಖೆ ಹಣ ಬಿಡುಗಡೆಗೊಳಿಸಿ ಸೋಮವಾರ ಆದೇಶ ಹೊರಡಿಸಿದೆ.

ಈ ಹಣದಲ್ಲಿ ಗಾಣಗಾಪುರದ ಒಳಚರಂಡಿ ನಿರ್ಮಾಣ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಇತರ ಕಾರ್ಯಗಳಿಗೆ ವಿನಿಯೋಗಿಸಲು ಉದ್ದೇಶಿಸಲಾಗಿದೆ. ದೇವಲ ಗಾಣಗಾಪುರಕ್ಕೆ ದೇಶ ಅದರಲ್ಲೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ‘ದತ್ತಾತ್ರೇಯ ಕ್ಷೇತ್ರದ ಅಭಿವೃದ್ಧಿಗೆಂದು ಕೇಳಲಾದ ಒಂದೇ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಣ ಬಿಡುಗಡೆ ಮಾಡಿದ್ದಾರೆ. ಈ ಅನುದಾನದಲ್ಲಿ ಒಳಚರಂಡಿ ಸುಧಾರಣೆ ಜತೆಗೆ ಚರಂಡಿ ನೀರು ನೇರವಾಗಿ ನದಿಗೆ ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು. ಪ್ರವಾಹ ಬಂದಾಗ ನದಿ ನೀರು ದತ್ತಾತ್ರೇಯ ದೇವಾಲಯಕ್ಕೆ ಬರದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)