ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯ: ಮೋದಿ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಬಡಜನರು ಆರೋಗ್ಯ ಸೇವೆಗಾಗಿ ಮಾಡುತ್ತಿರುವ ವೆಚ್ಚದ ಹೊರೆ ತಗ್ಗಿಸಲು ಮತ್ತು ದೇಶದ ಎಲ್ಲ ಜನರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ಬಹುದೊಡ್ಡ ಕಾಳಜಿ ವಹಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಮತ್ತು ವಿವಿಧ ಆರೋಗ್ಯ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಗುರುವಾರ ಸಂವಾದ ನಡೆಸಿದರು.

ಹೆಚ್ಚು ಆಸ್ಪತ್ರೆಗಳನ್ನು ತೆರೆಯಲು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಹಾಗೂ ಹೆಚ್ಚು ವೈದ್ಯರನ್ನು ನೇಮಿಸಿಕೊಳ್ಳಲು ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿರುವುದರಿಂದ ಬಡಜನರು ಚಿಕಿತ್ಸೆಗಾಗಿ ಮಾಡುತ್ತಿದ್ದ ವೆಚ್ಚದ ಹೊರೆಯೂ ತಗ್ಗುತ್ತಿದೆ ಎಂದು ಹೇಳಿದರು.

ಬಡಜನರು ಮತ್ತು ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು 90ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಇದರಿಂದ 15,000 ವೈದ್ಯಕೀಯ ಸೀಟುಗಳು ಹೆಚ್ಚಾಗಿವೆ ಎಂದರು.

ಗ್ರಾಮೀಣ ಜನರು ಅನಾರೋಗ್ಯಕ್ಕೀಡಾದಾಗ ಹತ್ತಿರದಲ್ಲಿ ಆರೋಗ್ಯ ಕೇಂದ್ರಗಳಿಲ್ಲದೆ ಚಿಕಿತ್ಸೆ ಪಡೆಯುವುದು ದುಸ್ತರವಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸುಮಾರು 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ದೇಶದಾದ್ಯಂತ ತೆರೆಯಲು ನಿರ್ಧರಿಸಿದೆ. ಈ ಕೇಂದ್ರಗಳಲ್ಲಿ ರೋಗ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ಇರಲಿದೆ ಎಂದರು.

ಮಂಡಿ ಚಿಪ್ಪು ಬದಲಾವಣೆಗೆ ತಗಲುತ್ತಿದ್ದ ದುಬಾರಿ ವೆಚ್ಚವನ್ನು ತಗ್ಗಿಸಿದ ಪರಿಣಾಮ ಇಂದು ಮಧ್ಯಮ ವರ್ಗಕ್ಕೆ ವರ್ಷಕ್ಕೆ ಒಟ್ಟು ₹1,500 ಕೋಟಿ ಉಳಿತಾಯವಾಗುತ್ತಿದೆ. ಅಲ್ಲದೆ, ಆಯ್ದ ನಗರಗಳಿಗೆ ಸೀಮಿತವಾಗಿದ್ದ ಡಯಾಲಿಸಿಸ್ ಸೌಲಭ್ಯ ಮತ್ತು ಇದರ ದುಬಾರಿ ವೆಚ್ಚ ಗಮನದಲ್ಲಿಟ್ಟುಕೊಂಡು, ವೆಚ್ಚ ತಗ್ಗಿಸುವ ಸಲುವಾಗಿಯೇ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್‌ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ದೇಶದ ಶೇ 80ರಷ್ಟು ಜಿಲ್ಲೆಗಳಲ್ಲಿ ಚಾಲ್ತಿಗೆ ಬಂದಿದೆ. ಈಗ 2.25 ಲಕ್ಷ ರೋಗಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಸುಮಾರು 22 ಲಕ್ಷ ಬಾರಿ ಡಯಾಲಿಸಿಸ್‌ ನಡೆಸಲಾಗಿದೆ ಎಂದರು.

2025ಕ್ಕೆ ಕ್ಷಯ ನಿರ್ಮೂಲನೆ ಗುರಿ
‘2025ರೊಳಗೆ ದೇಶವನ್ನು ಕ್ಷಯ ಮುಕ್ತಗೊಳಿಸಲು ಸರ್ಕಾರ ಗುರಿ ಇಟ್ಟುಕೊಂಡಿದೆ’ ಎಂದು ಮೋದಿ ತಿಳಿಸಿದರು.

‘2030ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿ ವಿಶ್ವದ ಎಲ್ಲ ರಾಷ್ಟ್ರಗಳ ಮುಂದಿದೆ. ಆದರೆ, ನಾವೇಕೆ ಜಾಗತಿಕ ಗಡುವಿನವರೆಗೆ ಕಾಯಬೇಕೆಂದು, ಭಾರತವನ್ನು ಅದಕ್ಕೂ ಐದು ವರ್ಷ ಮುಂಚಿತವಾಗಿ ಕ್ಷಯ ಮುಕ್ತಗೊಳಿಸಲು ನಿರ್ಧರಿಸಿದ್ದೇವೆ’ ಎಂದರು.

ಈಗಾಗಲೇ ಈ ನಿಟ್ಟಿನಲ್ಲಿ ಲಸಿಕೆ ಹಾಕಲು ಬೃಹತ್‌ ಶಿಬಿರಗಳನ್ನು ನಡೆಸಲು ಸರ್ಕಾರ ಶುರು ಮಾಡಿದೆ. ದೇಶದಾದ್ಯಂತ 528 ಜಿಲ್ಲೆಗಳಲ್ಲಿ ‘ಇಂದ್ರಧನುಷ್‌’ ಅಭಿಯಾನ ನಾಲ್ಕು ಹಂತಗಳಲ್ಲಿ ನಡೆಯುತ್ತಿದೆ. ಈಗಾಗಲೇ 3.15 ಕೋಟಿ ಮಕ್ಕಳು ಮತ್ತು 80 ಲಕ್ಷ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ ಎಂದರು.

ಜೂನ್‌ 9ರಂದು ಮೋದಿ–ಷಿ ಭೇಟಿ
ಚೀನಾದ ಕ್ವಿಂಗ್‌ಡಾವೊದಲ್ಲಿ ಜೂನ್ 9ರಿಂದ ಎರಡು ದಿನಗಳ ಕಾಲ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಭೇಟಿಯಾಗಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸುವರು.

ಏಪ್ರಿಲ್‌ನಲ್ಲಿ ಚೀನಾದ ವುಹಾನ್‌ ನಗರದಲ್ಲಿ ನಡೆದ ಉಭಯ ನಾಯಕರ ಔಪಚಾರಿಕ ಸಭೆಯ ಮುಂದುವರಿದ ಭಾಗವಾಗಿ ಜೂನ್ 9ರಂದು ಪ್ರಧಾನಿ ಮೋದಿ ಹಾಗೂ ಷಿ ಭೇಟಿಯಾಗುವರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

**

ಅಂಕಿ ಅಂಶ

* 3,600 – ದೇಶದಾದ್ಯಂತ ತೆರೆಯಲಾಗಿರುವ ಜನೌಷಧಿ ಕೇಂದ್ರಗಳು

* 700ಕ್ಕೂ ಹೆಚ್ಚು – ವಿಧದ ಜನರಿಕ್‌ ಔಷಧಿಗಳನ್ನು ಕಡಿಮೆ ದರಕ್ಕೆ ನೀಡಲಾಗುತ್ತಿದೆ

* ₹50 ಸಾವಿರ – ಮಂಡಿ ಚಿಪ್ಪು ಬದಲಾವಣೆ ಚಿಕಿತ್ಸಾ ವೆಚ್ಚ

* 1.5 ಲಕ್ಷ – ದೇಶದಲ್ಲಿ ಪ್ರತಿ ವರ್ಷ ಮಂಡಿ ಚಿಪ್ಪು ಚಿಕಿತ್ಸೆಗೆ ಒಳಗಾಗುತ್ತಿರುವವರು

* 400 – ಡಯಾಲಿಸಿಸ್‌ಗಾಗಿ ತೆರೆದಿರುವ ‘ಜನಸ್ವಾಸ್ಥ್ಯ’ ಕೇಂದ್ರಗಳು

* 3,3000 – ಚಿಕಿತ್ಸೆಗೆ ಲಭ್ಯವಿರುವ ಡಯಾಲಿಸಿಸ್‌ ಯಂತ್ರಗಳು

**

ಜೂನ್‌ 21ರಂದು ನಡೆಯುವ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಜನರು ಯೋಗ ಅಭ್ಯಾಸ ಮಾಡಬೇಕು. ಜತೆಗೆ ಯೋಗವನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕು – –––  –ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT