ಶನಿವಾರ, ಸೆಪ್ಟೆಂಬರ್ 26, 2020
26 °C
ಕೊರೊನಾ ಪ್ರಯುಕ್ತ ಸರಳವಾಗಿ ಆಚರಿಸಲು ಜಿಲ್ಲಾಡಳಿತದ ಸೂಚನೆ

ಕಲಬುರ್ಗಿ: ಸಾರ್ವಜನಿಕ ಗಣಪತಿಗಳತ್ತ ಕಾಣದ ಜನಸಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವುದರಿಂದ ವಾರ್ಡ್‌ ಅಥವಾ ಬಡಾವಣೆಗೆ ಒಂದೊಂದು ಸಾರ್ವಜನಿಕ ಗಣಪತಿಗಳನ್ನು ಮಾತ್ರ ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸೂಚಿಸಿದ ಪ್ರಯುಕ್ತ ಈ ಬಾರಿ ಬೆರಳೆಣಿಕೆಯಷ್ಟು ಮಾತ್ರ ಗಣಪತಿಗಳನ್ನು ಕೂರಿಸಲಾಗಿತ್ತು. ಇವುಗಳ ಬಳಿ ಹೆಚ್ಚಿನ ಜನಸಂದಣಿಯೂ ಕಂಡು ಬರಲಿಲ್ಲ.

ಪ್ರತಿ ವರ್ಷವೂ ಸುಮಾರು 350ರಿಂದ 400 ಸಾರ್ವಜನಿಕ ಗಣೇಶೋತ್ಸವಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕೊರೊನಾ ಇದ್ದುದರಿಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ಮೊದಲಿನಿಂದ ಹೇಳುತ್ತಾ ಬಂದಿತ್ತು. ಚೌತಿ ನಾಲ್ಕು ದಿನಗಳು ಇರುವಂತೆಯೇ ತನ್ನ ನಿಲುವು ಬದಲಿಸಿದ ಸರ್ಕಾರ ಸೀಮಿತ ಸಂಖ್ಯೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಕೂಡ್ರಿಸಲು ಅನುಮತಿ ನೀಡಿತ್ತು. ಅಷ್ಟರಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಮಿತಿ ಸದಸ್ಯರಿಗೆ ಆಗಲಿಲ್ಲ. ಸುಮಾರು 5ರಿಂದ 15 ಅಡಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದ ಗಣೇಶ ಮಂಡಳದವರು ತಿಂಗಳ ಮುಂಚೆಯೇ ಮೂರ್ತಿ ತಯಾರಿಕರಿಗೆ ಬೇಡಿಕೆ ಸಲ್ಲಿಸುತ್ತಿದ್ದರು.

‘ಈ ಬಾರಿ ಸಮಯವೇ ಇಲ್ಲದ್ದರಿಂದ ಹಾಗೂ ನಾಲ್ಕು ಅಡಿಗಿಂತ ಎತ್ತರದ ಗಣಪತಿಗಳನ್ನು ಪ್ರತಿಷ್ಠಾಪಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ, ಮಂಡಳದವರು ಪ್ರತಿಷ್ಠಾಪಿಸಲು ಹೆಚ್ಚು ಆಸಕ್ತಿ ವಹಿಸಲಿಲ್ಲ’ ಎನ್ನುತ್ತಾರೆ ಕಲಬುರ್ಗಿ ಗಣೇಶ ಮಹಾಮಂಡಳದ ಕಾರ್ಯದರ್ಶಿ ಶಿವಾನಂದ ದಶಮನಿ.

ಟೆಂಟ್‌ ಇಲ್ಲ, ಸಂಗೀತದ ಸದ್ದೂ ಇಲ್ಲ: ಗಣಪತಿಗಳನ್ನು ಪ್ರತಿ ವರ್ಷ ಅದ್ಧೂರಿ ಪೆಂಡಾಲ್‌ ಹಾಕಿ, ರಸ್ತೆ ಬಂದ್‌ ಮಾಡಿ, ಇಡೀ ದಿನ ಸಂಗೀತ ಹಾಕಿ 5 ದಿನ, 9 ದಿನ ಹಾಗೂ 11 ದಿನಗಳವರೆಗೆ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಅದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ಹೆಚ್ಚೆಂದರೆ ನಗರದಲ್ಲಿ ಸುಮಾರು 50 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರಬಹುದು ಎನ್ನುತ್ತಾರೆ ಲಾಲಗೇರಿ ನಿವಾಸಿ ಜಯತೀರ್ಥ ದೇಸಾಯಿ.

ಗಣಪತಿಗಳತ್ತ ಸುಳಿಯದ ಭಕ್ತರು: ವಿನಾಯಕ ಚತುರ್ಥಿ ಬಂತೆಂದರೆ ಹಿರಿಯರು, ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮದಿಂದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ವೀಕ್ಷಿಸಿ ಖುಷಿಪಡುತ್ತಿದ್ದರು. ಆದರೆ, ಈ ಬಾರಿ ಗಣೇಶೋತ್ಸವ ತನ್ನ ವೈಭವ ಕಳೆದುಕೊಂಡಿದ್ದು, ಗಣೇಶ ಮೂರ್ತಿಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆ ಇತ್ತು. ಸಂಜೆ ಹೊತ್ತು ಮಳೆ ಸುರಿಯುತ್ತಿರುವುದು ಜನದಟ್ಟಣಿ ಕಡಿಮೆಯಾಗಲು ಕಾರಣವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು