ಕಲಬುರಗಿ: ಸಂಕಟಗಳನ್ನು ಪರಿಹರಿಸುವ ದೇವರೆಂದೇ ಜನಜನಿತವಾಗಿರುವ ಗಜಮುಖ, ಗಣಪತಿಯ ಸ್ವಾಗತಕ್ಕೆ ಕಲಬುರಗಿ ನಗರ ಸಜ್ಜಾಗಿದ್ದು, ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಹಾಗೂ ಮನೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವವರು ಸಡಗರದಿಂದ ಶನಿವಾರದ ಗಣೇಶ ಚೌತಿಗೆ ಕಾಯುತ್ತಿದ್ದಾರೆ.
ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಬೆಳೆಯೂ ಭರ್ಜರಿಯಾಗಿದ್ದು, ಅದ್ಧೂರಿಯಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಕಲಬುರಗಿ ನಗರದಲ್ಲಿ 505 ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಪೆಂಡಾಲ್ ಹಾಕುವ ಕಾರ್ಯ ಮುಕ್ತಾಯದ ಹಂತ ತಲುಪಿದೆ.
ನಗರದ ಪುಟಾಣಿ ಗಲ್ಲಿ, ಸರಾಫ್ ಬಜಾರ್, ಚಪ್ಪಲ್ ಬಜಾರ್, ಮಕ್ತಂಪುರ, ಗಾಜಿಪುರ, ಹಫ್ತ್ ಗುಂಬಜ್, ಜಗತ್ ಸರ್ಕಲ್, ಶಹಾಬಜಾರ್, ಹಳೇ ಜೇವರ್ಗಿ ರಸ್ತೆ, ಹೊಸ ಜೇವರ್ಗಿ ರಸ್ತೆ, ಗುಬ್ಬಿ ಕಾಲೊನಿ, ಸೇಡಂ ರಸ್ತೆ, ಜಯನಗರ, ಓಂ ನಗರ, ಸಂತೋಷ ಕಾಲೊನಿ, ಎನ್‌ಜಿಒ ಕಾಲೊನಿ, ಹೀರಾಪುರ, ರಾಜಾಪುರ ಮತ್ತಿತರೆಡೆ ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯ ಪೆಂಡಾಲ್‌ಗಳನ್ನು ಅಳವಡಿಸಲಾಗಿದೆ.
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು 5 ದಿನ, 7 ದಿನ, 9 ದಿನ ಹಾಗೂ 11 ದಿನಗಳವರೆಗೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಿವೆ. 4 ಅಡಿಯಿಂದ 15 ಅಡಿಗಳವರೆಗೆ ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಈ ಬಾರಿ ಕಣ್ಮನ ಸೆಳೆಯಲಿವೆ.
ಕಲಬುರಗಿ ನಗರದ ವಿವಿಧ ಕಲಾವಿದರಲ್ಲದೇ ಮಹಾರಾಷ್ಟ್ರದ ಸೋಲಾಪುರ, ಪುಣೆ ಮತ್ತಿತರ ನಗರಗಳಿಂದ ಆಕರ್ಷಕ ಗಣೇಶ ಮೂರ್ತಿಗಳನ್ನು ತರಿಸಲಾಗುತ್ತಿದೆ. ಮನೆಗಳಲ್ಲಿ ಗಣಪತಿ ಕೂಡ್ರಿಸುವವರು ಬೆಳಿಗ್ಗೆಯೇ ಮಾರಾಟ ಮಳಿಗೆಗಳಿಗೆ ತೆರಳಿ ಗಣಪತಿಗಳನ್ನು ತರಲಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮಧ್ಯಾಹ್ನದ ಬಳಿಕ ಅಲಂಕೃತ ವಾಹನದೊಂದಿಗೆ ತೆರಳು ಗಣಪತಿಗಳನ್ನು ತರಲಿದ್ದಾರೆ.
ಸಾರ್ವಜನಿಕ ಗಣೇಶೋತ್ಸವಗಳ ಪ್ರತಿಷ್ಠಾಪನೆಗೆ ಅಗತ್ಯವಾದ ಪಾಲಿಕೆ, ಅಗ್ನಿಶಾಮಕ ದಳ, ಜೆಸ್ಕಾಂ, ಪೊಲೀಸ್ ಇಲಾಖೆ ಅನುಮತಿ ಪಡೆಯಲು ಮಹಾನಗರ ಪಾಲಿಕೆಯು ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಿದ್ದು, ಅಲ್ಲಿಂದಲೇ ಅನುಮತಿ ನೀಡಲಾಗುತ್ತಿದೆ.
ಕಲಬುರಗಿಯ ಶರಣಬಸವೇಶ್ವರ ಕೆರೆಯ ಪಕ್ಕದಲ್ಲಿ ಮಹಾನಗರ ಪಾಲಿಕೆಯು ಗಣಪತಿ ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಯನ್ನು ನಿರ್ಮಿಸಿದೆ. ಅಲ್ಲಿ ಪೊಲೀಸ್ ಸಿಬ್ಬಂದಿ, ಮುಳುಗು ತಜ್ಞರು ಇರಲಿದ್ದಾರೆ. ಅಲ್ಲದೇ, ಬಡಾವಣೆಗಳಲ್ಲಿನ ಗಣಪತಿಗಳ ವಿಸರ್ಜನೆಗೆ ಟ್ರ್ಯಾಕ್ಟರ್‌ನಲ್ಲಿ ನೀರಿನ ತೊಟ್ಟಿಗಳನ್ನು ಪಾಲಿಕೆ ಇರಿಸಿ ಸಂಚಾರ ನಡೆಸಲಿದೆ.
ಖರೀದಿ ಭರಾಟೆ: ಗಣೇಶ ಚತುರ್ಥಿ ಮುನ್ನಾದಿನವಾದ ಶುಕ್ರವಾರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಕಂಡು ಬಂತು. ಬಾಳೆ ಕಂಬ ₹ 50ಕ್ಕೆ ಎರಡು, ಕಬ್ಬು ₹ 50ಕ್ಕೆ ಎರಡು, ಗರಿಕೆ ಕಟ್ಟು, ವಿವಿಧ ಬಗೆಯ ಹೂವುಗಳು, ಹಣ್ಣುಗಳ ಮಾರಾಟ ಜೋರಾಗಿತ್ತು.
ಗಣೇಶ ಮೂರ್ತಿಗೆ ಅಲಂಕಾರ ಮಾಡುವ ಹತ್ತಾರು ಬಗೆಯ ವಸ್ತುಗಳ ಮಳಿಗೆಗಳು ನಗರದ ಅಲ್ಲಲ್ಲಿ ತಲೆಎತ್ತಿದ್ದು, ತರಹೇವಾರಿ ಆಲಂಕಾರಿಕ ಆಭರಣಗಳು, ತಲೆಪಟ್ಟಿಗಳ ಬಿರುಸಿನ ಮಾರಾಟ ಕಂಡು ಬಂತು.
ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಗಣೇಶ ವಿಗ್ರಹಗಳನ್ನು ತಂದು ಮಾರುತಿದ್ದೇನೆ. ಈ ವರ್ಷ ₹ 2 ಲಕ್ಷ ಬಂಡವಾಳ ಹೂಡಿದ್ದು ನಮ್ಮಲ್ಲಿ ಆರು ಇಂಚಿನಿಂದ ಎರಡೂವರೆ ಅಡಿಗಳ ಎತ್ತರದ ಮೂರ್ತಿಗಳಿವೆಶಿವಪ್ಪ ಕಾಳೆ ವ್ಯಾಪಾರಿ ಕಲಬುರಗಿ
ಈ ಬಾರಿಯೂ ಸುಮಾರು 15 ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ಕಲಬುರಗಿಯಲ್ಲಿ ಕೂರಿಸಲಾಗುತ್ತಿದೆ. ಉತ್ತಮ ಗಣಪತಿಗಳಿಗೆ ನವೆಂಬರ್ 1ರಂದು ಪ್ರಶಸ್ತಿ ನೀಡುವ ಚಿಂತನೆ ಇದೆಬಾಬುರಾವ ಜಹಾಗೀರದಾರ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ
‘ರಾತ್ರಿ 10ರ ಬಳಿಕ ಡಿಜೆ ಬಳಸುವಂತಿಲ್ಲ’
ಕಲಬುರಗಿ ನಗರದಾದ್ಯಂತ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ರಾತ್ರಿ 10ರ ಬಳಿಕ ಡಿ.ಜೆ. ಸೌಂಡ್ ಸಿಸ್ಟಂ ಬಳಸುವಂತಿಲ್ಲ. ಬಳಸಿದರೆ ಅವುಗಳನ್ನು ಜಪ್ತಿ ಮಾಡುವುದಾಗಿ ಈಗಾಗಲೇ ಡಿ.ಜೆ. ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು. ಗಣೇಶೋತ್ಸವದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ‘ಗಣೇಶೋತ್ಸವ ಇರುವುದರಿಂದ ಪೊಲೀಸ್ ಗಸ್ತು ಹೆಚ್ಚಿಸಲಾಗುತ್ತಿದೆ. ತಡರಾತ್ರಿ ಗಸ್ತು ಹಾಗೂ ಗುಡ್ ಮಾರ್ನಿಂಗ್ ಬೀಟ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಿವಿಲ್ ಪೊಲೀಸ್ ಸಿಬ್ಬಂದಿ ಜೊತೆಗೆ ಕೆಎಸ್‌ಆರ್‌ಪಿ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಗಣೇಶ ಮೂರ್ತಿಯ ವಿಸರ್ಜನೆಗಾಗಿ ತೆರಳುವ ಮೆರವಣಿಗೆಯ ಮಾರ್ಗದಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಗಣಪತಿ ಪೆಂಡಾಲ್‌ಗಳ ಬಳಿ ಸದಾ ಕಾಲ ಸ್ವಯಂಸೇವಕರು ಇರುವಂತೆ ಸಾಧ್ಯವಾದರೆ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸುವಂತೆ ಸಂಘಟಕರಿಗೆ ತಿಳಿಸಲಾಗಿದೆ’ ಎಂದರು.
‘4 ಸಾವಿರ ಪರಿಸರ ಸ್ನೇಹಿ ಗಣಪತಿಗಳ ಮಾರಾಟ’
ಕಲಬುರಗಿಯ ವಿವಿಧೆಡೆ ಇರುವ ಸ್ವಾಭಿಮಾನ ಸ್ವದೇಶಿ ಮಳಿಗೆಗಳಲ್ಲಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿಗಳನ್ನು ಮಾರಾಟ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ತಯಾರಿಸಲಾದ ಮೂರ್ತಿಗಳನ್ನು ತರಿಸಿಕೊಂಡು ಕಲಬುರಗಿ ಯಾದಗಿರಿ ಜಿಲ್ಲೆಗಳ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ 7500 ಮೂರ್ತಿಗಳನ್ನು ಮಾರಾಟ ಮಾಡುವ ಗುರಿ ಇದೆ ಎನ್ನುತ್ತಾರೆ ಸ್ವಾಭಿಮಾನ ಸ್ವದೇಶಿ ಮಳಿಗೆಯ ಪಾಲುದಾರರಾದ ಪ್ರಭು ಪಾಟೀಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.