ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ನಿರ್ಲಕ್ಷ್ಯ ಆರೋಪ: ಮಹಾರಾಷ್ಟ್ರದಿಂದ ಚಿತ್ತಾಪುರಕ್ಕೆ ಗಾಂಜಾ?

Last Updated 14 ಡಿಸೆಂಬರ್ 2021, 3:49 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಶನಿವಾರ ರಾತ್ರಿ ಗಾಂಜಾ ಸಂಬಂಧ ನಡೆದ ಯುವಕನ ಹತ್ಯೆಯ ಬಳಿಕ ಚಿತ್ತಾಪುರಕ್ಕೆಗಾಂಜಾ ಪೂರೈಕೆಯಲ್ಲಿ ಮಹಾರಾಷ್ಟ್ರದ ನಂಟಿರುವುದು ಬೆಳಕಿಗೆ ಬಂದಿದೆ.

ಗಾಂಜಾ ಕೇಳಿದ್ದ ಅಬ್ದುಲ್ ರಶೀದ್ ಎಂಬ ಯುವಕನನ್ನು ಹತ್ಯೆ ಮಾಡಿದ ಆರೋಪಿ ಶೇಖ್ ಸಲೀಂನನ್ನು ವಶಕ್ಕೆ ಪಡೆದ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ‘ಮಹಾರಾಷ್ಟ್ರದ ಸೊಲ್ಲಾಪುರದಿಂದ ಗಾಂಜಾ ತರುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯ ಮಾಹಿತಿ ಆಧರಿಸಿ ಅಂತರರಾಜ್ಯ ಗಾಂಜಾ ಜಾಲ ಬೇಧಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಗಾಂಜಾ ದಂಧೆಯಲ್ಲಿ ಯಾರೆಲ್ಲ ತೊಡಗಿದ್ದಾರೆ? ಇತರೆ ಪ್ರದೇಶದಿಂದ ಮಾರಾಟ ನಡೆಯುತ್ತಿದೆಯಾ? ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಗಾಂಜಾ ಖರೀದಿಗೆ ಹೆಚ್ಚುವರಿ ಹಣ ಕೇಳಿದ ಪ್ರಕರಣ ಸಾವಿನಲ್ಲಿ ಅಂತ್ಯವಾದ ನಂತರ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪಟ್ಟಣದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ನಡೆಯುತ್ತಿದೆ. ಅದನ್ನು ಸೇವಿಸಿದ ಯುವಕರು ಗಾಂಜಾ ನಶೆಯಲ್ಲಿ ಮುಳುಗುತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಕೈಗಾರಿಕೆ ಬಡಾವಣೆ ಬಳಿಯೂ ಗಾಂಜಾ ಮಾರಾಟ ನಡೆಯುತ್ತಿದೆ. ಬಹುತೇಕ ಗಾಂಜಾ ಖರೀದಿದಾರರು ಯುವಕರೇ ಆಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದೆ. ಜನರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪಗಳಿವೆ.

ಗಾಂಜಾ ಮಾರಾಟದ ಬಗ್ಗೆ ತಿಂಗಳ ಹಿಂದೆಯೇ ಠಾಣೆಗೆ ಮಾಹಿತಿ ನೀಡಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ಮಾರಾಟಗಾರರನ್ನು ಠಾಣೆಗೆ ಕರೆಸಿಕೊಂಡು ವಾಪಾಸ್ ಕಳುಹಿಸಿದ್ದಾರೆ. ಆಗಲೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಬಹುದಿತ್ತು. ಯುವಕನ ಕೊಲೆ ನಡೆಯುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಗಾಂಜಾ ಪೂರೈಕೆ ಮತ್ತು ಮಾರಾಟದ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಪಟ್ಟಣದಲ್ಲಿ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂಬುದು ಸ್ಥಳೀಯರು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT