ಬುಧವಾರ, ಆಗಸ್ಟ್ 10, 2022
24 °C
ಸಾಯಿನಗರ ಬಡಾವಣೆ; ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಮನೆಗಳ ನಿರ್ಮಾಣ

ಸಾರ್ವಜನಿಕ ಉದ್ಯಾನ ಸ್ಥಳ ಒತ್ತುವರಿ?

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ರಾಮಮಂದಿರ ವೃತ್ತದ ಸಾಯಿನಗರ ಬಡಾವಣೆ ಸಮೀಪ ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟ ಎರಡು ಎಕರೆ ಸ್ಥಳ ಒತ್ತುವರಿಯಾಗಿದ್ದು, ಇನ್ನಷ್ಟು ಮನೆಗಳನ್ನು ನಿರ್ಮಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

‘ಸತತ ಹೋರಾಟದ ಫಲವಾಗಿ ಮನೆಗಳ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಆದರೆ, ಪಾಲಿಕೆ ವಶದಲ್ಲಿ ಎಷ್ಟು ಎಕರೆ ಉದ್ಯಾನವಿದೆ ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳ ಬಳಿ ಸರಿಯಾದ ಮಾಹಿತಿ ಇಲ್ಲ. ಅಕ್ರಮವಾಗಿ ಮನೆ ಕಟ್ಟಿಕೊಂಡಿರುವುದನ್ನು ಪರಿಶೀಲಿಸಿ, ಅಂಥವರ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿಗಳ ಆರೋಪಿಸುತ್ತಾರೆ.

ಸಾಯಿ ಮಂದಿರದ ಹಿಂಭಾಗದಲ್ಲಿರುವ ಉದ್ಯಾನದ ಸ್ಥಳ ಪಾಳು ಬಿದ್ದಿದ್ದು, ಗಿಡ, ಕಂಟಿಗಳು ಬೆಳೆದು ನಿಂತಿವೆ. ಸಾಯಿಮಂದಿರ ಬಡಾವಣೆ, ಶ್ರೀ ಸಾಯಿ ರಾಮ ನಗರ, ಸಂಗಮೇಶ ಲೇಔಟ್, ರಾಘವೇಂದ್ರ ಲೇಔಟ್, ಭಾಗ್ಯಲಕ್ಷ್ಮಿ ಲೇಔಟ್‌ಗಳ ಜನರಿಗಾಗಿ ಉದ್ಯಾನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಆದರೆ, ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಉದ್ಯಾನವು ಎಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಪರಿಶೀಲಿಸಿ, ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಉದ್ಯಾನ ಸ್ಥಳದ ವ್ಯಾಪ್ತಿಯನ್ನು ಗುರುತಿಸಿ, ಅದರ ಸುತ್ತಲೂ ಬೇಲಿಯನ್ನು ಹಾಕಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಇತ್ತೀಚೆಗೆ ನಿವಾಸಿಗಳೆಲ್ಲ ಸೇರಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರನ್ನು ಭೇಟಿಯಾಗಿ, ಉದ್ಯಾನ ಸ್ಥಳದಲ್ಲಿ ಅಕ್ರಮವಾಗಿ ಮನೆಗಳ ನಿರ್ಮಾಣದ ಬಗ್ಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಲೋಖಂಡೆ ಅವರು ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದರು. ‘ಉದ್ಯಾನ ಸ್ಥಳದ ವ್ಯಾಪ್ತಿಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಪಾಲಿಕೆಯ ಕಾನೂನು ವಿಭಾಗದ ಸಲಹೆ ‍ಪಡೆದು ಉದ್ಯಾನ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದ್ದರು.

‘ಉದ್ಯಾನ ಸ್ಥಳವನ್ನು ಒತ್ತುವರಿ ಮಾಡಿ, ಕಟ್ಟಡ ನಿರ್ಮಿಸಲಾಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಉದ್ಯಾನಕ್ಕೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸುವ ವೇಳೆ ದೂರು ನೀಡಿದರೂ ಸ್ಪಂದನೆ ಸಿಗಲಿಲ್ಲ’ ಎಂದು ರಾಘವೇಂದ್ರ ನಗರ ಬಡಾವಣೆಯ ನಿವಾಸಿ ಲಕ್ಷ್ಮಿ ಕಾಂಬಳೆ ಟೀಕಿಸಿದರು.

‘ನಾವು ಮನೆ ಕಟ್ಟಿಕೊಂಡು ಹಲವು ವರ್ಷಗಳಾಗಿದ್ದು, ಅಂದಿನಿಂದಲೂ ಉದ್ಯಾನ ಅಭಿವೃದ್ಧಿಪಡಿಸುವಂತೆ ಕೇಳುತ್ತಲೇ ಇದ್ದೇವೆ. ಆದರೆ, ನಮ್ಮ ಮನವಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಈಗಲಾದರೂ ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಈರಣ್ಣಗೌಡ ಹಾಗೂ ಸಂಗೀತಾ ಒತ್ತಾಯಿಸಿದರು.

‘ಉದ್ಯಾನ ಸ್ಥಳ ಸ್ವಚ್ಛತೆ ಶೀಘ್ರ’

‘ಡಿ.22ರೊಳಗಾಗಿ ಉದ್ಯಾನ ಸ್ಥಳವನ್ನು ಪಾಲಿಕೆಯ ಜೆಸಿಬಿ ಹಾಗೂ ಸಿಬ್ಬಂದಿಯಿಂದ ಸ್ವಚ್ಛಗೊಳಿಸುತ್ತೇವೆ. ಮನೆ ಕಟ್ಟಿಕೊಂಡಿರುವ ನಿವಾಸಿಗಳು ಜಾಗದ ಖರೀದಿ ಪತ್ರವನ್ನು ಪರಿಶೀಲಿಸಲಾಗುವುದು. ಈ ಸ್ಥಳವು ಮೊದಲು ಕೋಟನೂರು ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಮನೆ ಕಟ್ಟಿಕೊಂಡವರು ನೀಡಿದ ದಾಖಲೆಗಳನ್ನು ಪರಿಶೀಲಿಸಲು ಕಾನೂನು ಕೋಶಕ್ಕೆ ಕಳುಹಿಸಲಾಗುವುದು. ಅವರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಡಾವಣೆ ನಿವಾಸಿಗಳ ಮನವಿ ಮೇರೆಗೆ ಹಾಗೂ ಖುದ್ದು ಪರಿಶೀಲನೆ ನಡೆಸಿದ ಬಳಿಕ, ಮನೆಗಳನ್ನು ಕಟ್ಟದಂತೆ ತಡೆಯಲಾಗಿದೆ’ ಎಂದು ಪಾಲಿಕೆ ವಲಯಾಧಿಕಾರಿ ಗುರುದೇವ ಕಳಸ್ಕರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು