ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ ಅಂತ್ಯಕ್ಕೆ ಜನರಲ್ ಟಿಕೆಟ್ ವಿತರಣೆ: ಶೈಲೇಶ್ ಗುಪ್ತಾ ಭರವಸೆ

Last Updated 20 ಮೇ 2022, 5:06 IST
ಅಕ್ಷರ ಗಾತ್ರ

ಕಲಬುರಗಿ: ಕೋವಿಡ್ ಕಾರಣ ಎರಡು ವರ್ಷದಿಂದ ಸ್ಥಗಿತಗೊಂಡಿರುವ ತಿಂಗಳ ರೈಲ್ವೆ ಪಾಸ್ ಮತ್ತು ನಿಲ್ದಾಣದ ಕೌಂಟರ್‌ನಲ್ಲಿ ಜನರಲ್ ಟಿಕೆಟ್ ವಿತರಣೆಯನ್ನು ಜೂನ್ ಅಂತ್ಯಕ್ಕೆ ಪುನರಾರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ವಲಯದ ಸೊಲ್ಲಾಪುರ ವಿಭಾಗದ ವಿಭಾಗೀಯ ವ್ಯವಸ್ಥಾಪಕ (ಡಿಆರ್‌ಎಂ) ಶೈಲೇಶ್ ಗುಪ್ತಾ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಸದ ಡಾ.ಉಮೇಶ ಜಾಧವ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಶಹಾಬಾದ್, ವಾಡಿ ಹಾಗೂ ಕಲಬುರಗಿಯ
ಸ್ಥಳೀಯ ಮುಖಂಡರು ಮತ್ತು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರ ಅಹವಾಲು ಆಲಿಸಿ ಅವರು ಮಾತನಾಡಿದರು.

ಶಹಾಬಾದ್ ಪಟ್ಟಣದಲ್ಲಿ ಕೋವಿಡ್‌ಗಿಂತ ಮುಂಚೆ ನಿಲ್ಲುತ್ತಿದ್ದ ಎಲ್ಲಾ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲು ನಿಲುಗಡೆ ಮಾಡಬೇಕು ಎಂಬ ಶಹಾಬಾದ್ ನಿಯೋಗದ ಬೇಡಿಕೆ ಕುರಿತು ಅಧ್ಯಯನ ನಡೆಸುವೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಹೈದರಾಬಾದ್– ವಿಜಯಪುರ ಪ್ಯಾಸೆಂಜರ್ ರೈಲನ್ನು ಶಹಾಬಾದ್‌ನಲ್ಲಿ ನಿಲುಗಡೆ ಮಾಡಲಾಗುವುದು. ಶಹಾಬಾದ್ ರೈಲು ನಿಲ್ದಾಣದಲ್ಲಿನ ಸ್ವಚ್ಛತೆ, ಮೂಲಸೌಕರ್ಯದ ಬಗ್ಗೆ ಗಮನ ಹರಿಸಲಾಗುವುದು, ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲಾಗುವುದು. ಪ್ಲಾಟ್‌ಫಾರ್ಮ್‌ನಲ್ಲಿ ರೈಲಿನ ಕೋಚ್ ಸೂಚಕ ಫಲಕಗಳ ಅಳವಡಿಕೆಯನ್ನು ಸಿ.ಎಸ್.ಆರ್. ನಿಧಿಯಲ್ಲಿ ಮಾಡಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ಅಂಡರ್‌ಪಾಸ್ ಮತ್ತು ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ನೀರು ನಿಲುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ರಸ್ತೆ ಮೇಲಿನ ನೀರು ತೆಗೆದು ಹಾಕಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಇದಕ್ಕೂ ಮುನ್ನ ಶಹಾಬಾದ ಹೋರಾಟ ಸಮಿತಿ ಅಧ್ಯಕ್ಷ ಮೊಹಮ್ಮದ್ ಉಬೇದುಲ್ಲಾ ಮತ್ತು ಗೌರವಾಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ಮಾತನಾಡಿದರು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರ ವಣಿಕ್ಯಾಳ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಪ್ರದೀಪ್ ಹಿರಾಡೆ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಎಲ್.ಕೆ. ರಾನೆವಾಲೆ, ಹಿರಿಯ ವಿಭಾಗೀಯ ಎಂಜಿನಿಯರ್ (ಸಮನ್ವಯ) ಚಂದ್ರಭೂಷಣ, ವಿಭಾಗೀಯ ಎಂಜಿನಿಯರ್ (ದಕ್ಷಿಣ) ಎಂ.ಜಿ. ಜಗದೀಶ, ಸಹಾಯಕ ಭದ್ರತಾ ಆಯುಕ್ತ ಡಿ.ವಾಂಗಡೆ, ಕಲಬುರಗಿ ರೈಲು ನಿಲ್ದಾಣದ ಸ್ಟೇಷನ್ ಮ್ಯಾನೇಜರ್ ರಾಮಚಂದ್ರನ್ ಮೋನಿ, ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಆನಂದ ದೇಶಪಾಂಡೆ, ಶಹಾಬಾದ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಗಿರೀಶ ಕಂಬಾನೂರ, ಡಾ.ಎಂ.ಎ.ರಶೀದ್, ಅರುಣ ಪಟ್ಟಣಕರ್, ಅಣವೀರ ಇಂಗಿನಶೆಟ್ಟಿ, ಕೆ. ರಮೇಶ ಭಟ್ಟ ಹಾಗೂ ಪ್ರಮುಖರು ಇದ್ದರು.

ಬೆಂಗಳೂರಿಗೆ ರೈಲು ಆರಂಭಿಸಿ: ಜಾಧವ
‘ಕಲಬುರಗಿ–ಬೆಂಗಳೂರು ಮಧ್ಯೆ ಇಲ್ಲಿನ ಜನರ ಓಡಾಟ ಹೆಚ್ಚಿರುವ ಕಾರಣ ಹೊಸ ರೈಲು ಆರಂಭಿಸಬೇಕು. ಜಿಲ್ಲೆಯಲ್ಲಿ ಕೇಂದ್ರ ರೈಲ್ವೆ ವ್ಯಾಪ್ತಿಯಲ್ಲಿ ಬರುವ ಶಹಾಬಾದ, ವಾಡಿ ಹಾಗೂ ಕಲಬುರಗಿ ರೈಲು ನಿಲ್ದಾಣದಲ್ಲಿ ಕೋವಿಡ್ ಪೂರ್ವ ನಿಲ್ಲುತ್ತಿದ್ದ ಎಲ್ಲಾ ರೈಲುಗಳ ನಿಲುಗಡೆಗೆ ಸಕ್ಷಮ ಪ್ರಾಧಿಕಾರಕ್ಕೆ ಸೂಕ್ತ ಪ್ರಸ್ತಾವ ಸಲ್ಲಿಸಿ ನನಗೆಮಾಹಿತಿ ಕೊಡಬೇಕು. ನಾನು ರೈಲ್ವೆ ಸಚಿವರನ್ನು ಕಂಡು ರೈಲ್ವೆ ನಿಲುಗಡೆಗೆ ಕ್ರಮ ವಹಿಸುವೆ. ಅಲ್ಲದೇ ಎಲ್ಲಾ ನಿಲ್ದಾಣಗಳಲ್ಲಿ ಮೂಲಸೌಕರ್ಯ ವೃದ್ಧಿಸಬೇಕು‘ ಎಂದು ರೈಲ್ವೆ ಅಧಿಕಾರಿಗಳಿಗೆ ಸಂಸದ
ಡಾ. ಉಮೇಶ ಜಾಧವ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT