ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡ್‌ ಹೊಂದಿಸಲು ಜಿಮ್ಸ್ ವೈದ್ಯರ ಪರದಾಟ

ಕೊಂಚ ಹುಷಾರಾದ ರೋಗಿಗಳಿಗೆ ಬೇರೆಡೆ ಸ್ಥಳಾಂತರಿಸಿ ಗಂಭೀರ ಸ್ಥಿತಿ ಇರುವವರಿಗೆ ಹಂಚಿಕೆ
Last Updated 28 ಏಪ್ರಿಲ್ 2021, 4:38 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಸಾಗಿದ್ದರಿಂದ ಹಾಗೂ ಬಹುತೇಕರಿಗೆ ಉಸಿರಾಟದ ಸಮಸ್ಯೆ ತೀವ್ರವಾಗುತ್ತಿರುವುದರಿಂದ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಟಾಗಿರುವ ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌)ಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ದಾಖಲಾತಿ ಹೆಚ್ಚಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿಗೆ ಬೆಡ್‌ ಹೊಂದಿಸುವುದು ಸವಾಲಾಗಿದೆ.

ಅದಕ್ಕಾಗಿ ಅವರು ಕಂಡುಕೊಂಡಿರುವ ಮಾರ್ಗ, ಕೊಂಚ ಉಸಿರಾಟದಲ್ಲಿ ಸುಧಾರಣೆ ಕಂಡುಬಂದ ರೋಗಿಗಳನ್ನು ವೆಂಟಿಲೇಟರ್‌ ಬೆಡ್‌ನಿಂದ ಆಕ್ಸಿಜನ್‌ ಬೆಡ್‌ಗೆ ವರ್ಗಾಯಿಸುವುದು. ಇದರಿಂದಾಗಿ ಭಾರಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ವೆಂಟಿಲೇಟರ್‌ ಹಾಗೂ ಐಸಿಯು ವ್ಯವಸ್ಥೆ ಮಾಡಲಾಗುತ್ತಿದೆ.

ಮಂಗಳವಾರ ಮಧ್ಯಾಹ್ನದವರೆಗೆ ಜಿಮ್ಸ್‌ನ 404 ಬೆಡ್‌ಗಳ ಪೈಕಿ 390 ಬೆಡ್‌ಗಳು ಭರ್ತಿಯಾಗಿದ್ದವು. 40 ವೆಂಟಿಲೇಟರ್‌ ಬೆಡ್‌ಗಳು ಅದಾಗಲೇ ಭರ್ತಿಯಾಗಿವೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಡ್‌ ಪಡೆಯುವುದು ಸುಲಭವಿಲ್ಲ: ‘ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಇರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅಂಥವರಿಗೆ ಬೆಡ್‌ ಸಿಗಬೇಕೆಂದರೆ ಪ್ರಭಾವಿಗಳಿಂದ ಹೇಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಪರಿಚಯಸ್ಥರಿಗೆ ಬೆಡ್‌ ಇದೆಯೇ ಎಂದು ವಿಚಾರಿಸುತ್ತಿದ್ದಾರೆ. ಇದ್ದ ಬೆಡ್‌ಗಳಲ್ಲೇ ನಿಭಾಯಿಸಬೇಕಾಗಿದೆ. 10 ಜನ ಗುಣಮುಖರಾಗಿ ಹೊರಹೋದರೆ 15 ಜನರು ಆಡ್ಮಿಟ್‌ ಆಗಲು ಕಾಯುತ್ತಿರುತ್ತಾರೆ. ಇಂತಹ ಸನ್ನಿವೇಶವನ್ನು ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಕಂಡಿರಲಿಲ್ಲ’ ಎಂದು ಅವರು ಪರಿಸ್ಥಿತಿಯ ಗಂಭೀರತೆಯನ್ನು ಬಿಚ್ಚಿಟ್ಟರು.

‘ಬೆಡ್‌ಗಳು ಬೇಕು ಎಂದು ನನಗೂ ನಿತ್ಯ ಹಲವು ಕರೆಗಳು ಬರುತ್ತಿವೆ. ಎಷ್ಟೋ ಬಾರಿ ನಾನು ಹೇಳಿದರೂ ಅಲ್ಲಿ ಬೆಡ್‌ಗಳು ಸಿಗುತ್ತಿಲ್ಲ’ ಎಂದು ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.

ಉತ್ತಮ ಚಿಕಿತ್ಸೆ: ಇಷ್ಟೆಲ್ಲ ಒತ್ತಡಗಳ ಮಧ್ಯೆಯೂ ಕೋವಿಡ್‌ ರೋಗಿಗಳಿಗೆ ಜಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ದೊರಯುತ್ತಿದೆ ಎಂದು ಭಾನುವಾರ ದಾಖಲಾಗಿರುವ ವ್ಯಕ್ತಿಯೊಬ್ಬರು ತೃಪ್ತಿ ವ್ಯಕ್ತಪಡಿಸಿದರು.

‘ನನ್ನ ತಂದೆ ನಾಲ್ಕನೇ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೂ ಚೇತರಿಸಿಕೊಳ್ಳುತ್ತಿದ್ದಾರೆ. ಉಸಿರಾಟದ ತೊಂದರೆ ಸಾಕಷ್ಟು ಗಂಭೀರ ಸ್ವರೂಪ ಪಡೆದ ಬಳಿಕ ಇಲ್ಲಿಗೆ ರೋಗಿಗಳು ದಾಖಲಾಗುತ್ತಿರುವುದರಿಂದ ಅವರನ್ನು ಬದುಕಿಸುವುದೇ ಇಲ್ಲಿನ ವೈದ್ಯರಿಗೆ ಸವಾಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT