ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮರಗೋಳ, ಯರಗಲ್, ಮೊಗಲಾ, ಇಟಗಾ ಹಾಗೂ ದಿಗ್ಗಾಂವ್ ಗ್ರಾಮ ಗಳಲ್ಲಿನ ಸರ್ಕಾರಿ ಜಮೀನು ಅಕ್ರಮ ಕಬಳಿಕೆ ಕುರಿತು ದಾಖಲೆ ಪರಿಶೀಲನೆ ನಡೆಸಿ, ವಿಸ್ತೃತ ವರದಿ ನೀಡುವಂತೆ ಸೂಚಿಸಿ ಐವರು ಅಧಿಕಾರಿಗಳ ಸಮಿತಿ ರಚಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
‘ಜಮೀನು ಮಂಜೂರಾತಿ ಕಡತ ತಹಶೀಲ್ದಾರ್ ಕಚೇರಿಯಲ್ಲಿಲ್ಲ, ಸಾವಿರ ಎಕರೆ ಸರ್ಕಾರಿ ಜಮೀನು ಕಬಳಿಕೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಆ.14ರ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆದಿತ್ತು. ವರದಿ ಪ್ರಕಟವಾದ ದಿನವೇ ಜಿಲ್ಲಾಧಿಕಾರಿಯು ಸಮಿತಿ ರಚಿಸಿ ಅದೇಶಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸೇಡಂ ಎ.ಸಿ ಪ್ರಭು ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ರಾಮಚಂದ್ರ ಗಡಾದೆ, ಚಿತ್ತಾಪುರ ತಹಶೀಲ್ದಾರ್ ಅಮರೇಶ ಬಿರಾದಾರ, ಸೇಡಂ ಎ.ಸಿ ಕಚೇರಿಯ ಗ್ರೇಡ್-2 ತಹಶೀಲ್ದಾರ್ ನಾಗನಾಥ ತರಗೆ ಒಳಗೊಂಡ ಸಮಿತಿ ರಚಿಸಿದ್ದಾರೆ.