ಮಂಗಳವಾರ, ಏಪ್ರಿಲ್ 20, 2021
32 °C
ಜಿಲ್ಲಾಡಳಿತದೊಂದಿಗೆ ವಿಡಿಯೊ ಸಂವಾದ

ಲಸಿಕೆ ಹಾಕಲು ವ್ಯವಸ್ಥಿತ ಕ್ರಮ ಅನುಸರಿಸಿ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೋವಿಡ್‌ ತಡೆಗೆ ರಾಮಬಾಣವಾಗಿರುವ ಲಸಿಕೆಯನ್ನು ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯವಸ್ಥಿತವಾಗಿ ಹಾಕಲು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸೂಚಿಸಿದರು.

ವಿಜಯಪುರದಲ್ಲಿ ಗುರುವಾರ ನಡೆದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ‘ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅತೀ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ಜಿಲ್ಲೆಯಲ್ಲಿ ಈವರೆಗೆ 23,969 ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 22,422 ಮಂದಿಯು ಗುಣಮುಖರಾಗಿದ್ದಾರೆ. 1204 ಪ್ರಕರಣಗಳು ಸಕ್ರಿಯವಾಗಿದೆ. ಈವರೆಗೆ 86,423 ಜನರಿಗೆ ಲಸಿಕೆಯನ್ನು ಹಾಕಲಾಗಿದೆ. 7787 ಮುಂಚೂಣಿ ಕೆಲಸಗಾರರಿಗೆ ಲಸಿಕೆ ಹಾಕಲಾಗಿದೆ. ಲಸಿಕೆಗೆ ಕೊರತೆ ಇಲ್ಲ’ ಎಂದರು.

‘ಜಿಲ್ಲೆಯಲ್ಲಿ 21ರಿಂದ 50 ವರ್ಷದೊಳಗಿನವರಿಗೆ, ಅದರಲ್ಲೂ ಗಂಡು ಮಕ್ಕಳಲ್ಲಿ ಕೊರೊನಾ ವೈರಾಣು ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ತಪಾಸಣೆ ಹಾಗೂ ಸಂಪರ್ಕಿತರ ಪತ್ತೆ ಪ್ರಮಾಣವನ್ನು ಹೆಚ್ಚಿಸಬೇಕು. ಒಂದು ಪ್ರಕರಣಕ್ಕೆ ಕನಿಷ್ಠ 20 ಜನರನ್ನು ಪರೀಕ್ಷೆಗೊಳಪಡಿಸಬೇಕು. ಹೋಮ್ ಐಸೋಲೇಷನ್‌ ಆದವರು ಮಾರ್ಗಸೂಚಿ ಅನುಸರಿಸದಿದ್ದರೆ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಹೇಳಿದರು.

‘ಅಂತರರಾಜ್ಯ ಗಡಿ ಪ್ರದೇಶದಲ್ಲಿ 5 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದ್ದು, ಅವುಗಳು ದಿನದ 24 ಗಂಟೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಬೇಕು. ಜಿಲ್ಲಾಡಳಿತವು ಅನೇಕ ಕ್ರಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಎಲ್ಲರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ‘ಜಿಲ್ಲೆಯಲ್ಲಿ ಮಾರ್ಚ್‌ ಮೊದಲನೇ ವಾರದಲ್ಲಿ ಶೇ 1.28ರಷ್ಟು ಕೋವಿಡ್ ಪಾಸಿಟಿವಿಟಿ ಪ್ರಮಾಣವಿದ್ದರೆ ನಾಲ್ಕನೇ ವಾರದಲ್ಲಿ ಇದರ ಪ್ರಮಾಣ ಶೇ 2.2ಕ್ಕೆ ಹೆಚ್ಚಳಗೊಂಡಿದೆ. ಕಳೆದ ಒಂದು ವಾರದಲ್ಲಿ 926 ಕೋವಿಡ್ ಪಾಸಿಟಿವ್ ವರದಿಯಾಗಿವೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಾದ್ಯಂತ ಮಾಸ್ಕ್ ಧರಿಸುವಿಕೆ, ಅಂತರ ಪರಿಪಾಲನೆಗೆ ಜಾಗೃತಿ ಕಾರ್ಯಕ್ರಮಗಳು ನಿರಂತರ ಸಾಗಿವೆ. ಒಂದು ವಾರದಲ್ಲಿ ಮಾಸ್ಕ್ ಧರಿಸದ 4562 ಜನರಿಗೆ ₹ 6.08 ಲಕ್ಷ ದಂಡ ವಿಧಿಸಲಾಗಿದೆ. ಕೋವಿಡ್ 2ನೇ ಅಲೆ ಉಲ್ಬಣಗೊಂಡಲ್ಲಿ ಇದರ ನಿಯಂತ್ರಣಕ್ಕೆ ಕೋವಿಡ್ ಕೇರ್ ಸೆಂಟರ್ ತೆರೆಯಲು ವಸತಿ ನಿಲಯಗಳನ್ನು ಗುರುತಿಸಿದೆ’ ಎಂದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ್, ನಗರ ಪೊಲೀಸ್ ಆಯುಕ್ತ ಎನ್.ಸತೀಷಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಶ್ ಸಾಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಮರಣ ಪ್ರಮಾಣ ತಗ್ಗಿಸಲು ಸೂಚನೆ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಗ್ಗಿಸಲು ಹೆಚ್ಚು ಗಮನ ಕೊಡಿ. ಟೆಸ್ಟಿಂಗ್, ಟ್ರೇಸಿಂಗ್ ಮತ್ತು ಟ್ರೀಟ್‍ಮೆಂಟ್ ಚುರುಕುಗೊಳಿಸಬೇಕು. ಆರಂಭದಲ್ಲಿಯೇ ಸೋಂಕು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮರಣ ಪ್ರಮಾಣ ಕಡಿಮೆಗೊಳಿಸಲು ಸಾಧ್ಯ’ ಎಂದೂ ಅವರು ಸೂಚಿಸಿದರು.

ಯುವಕರು ಅನಗತ್ಯ ಓಡಾಡದಂತೆ ಇವರಿಗೆ ತಿಳಿ ಹೇಳಬೇಕು. ಮಾಸ್ಕ್ ಇಲ್ಲದೆ ಓಡಾಡುತ್ತಿದ್ದರೆ ದಂಡ ಹಾಕಬೇಕು. ಹೆಚ್ಚು ಪ್ರಯಾಣಿಕರನ್ನು ತೆಗೆದುಕೊಂಡು ಹೋಗುವ ವಾಹನಗಳ ಮೇಲೂ ಕಣ್ಣಿಡಬೇಕು. ವಾಣಿಜ್ಯ ಅಂಗಡಡಿಗಳು ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಅಂತಹ ಅಂಗಡಿಗಳಿಗೆ ಸಾಂಕ್ರಾಮಿಕ ಕಾಯ್ದೆ ಅನ್ವಯ ದಂಡ ಹಾಕಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಕಾರ್ಯಾಚರಣೆ ತೀವ್ರಗೊಳಿಸಬೇಕು ಎಂದು ಸೂಚಿಸಿದರು.

ಕೋವಿಡ್‌ ಇನ್ನೂ ಉಲ್ಬಣಗೊಂಡಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ, ಗುತ್ತಿಗೆ ಸಿಬ್ಬಂದಿ ಸೇವೆ ಪಡೆಯುವುದು ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

‘ಸಾರ್ವಜನಿಕರೂ ಸಹಕರಿಸಿ ಸರ್ಕಾರದ ಮಾರ್ಗಸೂಚಿ ಹಾಗೂ ಜಿಲ್ಲಾಡಳಿತ ನಿರ್ದೇಶನಗಳನ್ನು ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು’ ಎಂದೂ ಕಾರಜೋಳ ಅವರು ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು