ಸವಿತಾ ಸಮಾಜದ ಅಭಿವೃದ್ಧಿಗೆ ಬದ್ಧ: ಡಾ.ಜಿ.ಪರಮೇಶ್ವರ್

ಶನಿವಾರ, ಮೇ 25, 2019
22 °C

ಸವಿತಾ ಸಮಾಜದ ಅಭಿವೃದ್ಧಿಗೆ ಬದ್ಧ: ಡಾ.ಜಿ.ಪರಮೇಶ್ವರ್

Published:
Updated:
Prajavani

ಕಲಬುರ್ಗಿ: ‘ಸವಿತಾ ಸಮಾಜದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಬದ್ಧವಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಭರವಸೆ ನೀಡಿದರು.

ನಗರದ ಗ್ರ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸವಿತಾ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

‘ಸವಿತಾ ಸಮಾಜವು ಹಲವಾರು ರೀತಿಯಲ್ಲಿ ಶೋಷಣೆಗೆ ಒಳಗಾಗಿದೆ. ಎಲ್ಲ ರಂಗದಲ್ಲಿ ಹಿಂದುಳಿದಿರುವ ಸಮುದಾಯಕ್ಕೆ ಅಗತ್ಯ ಅನುಕೂಲಗಳನ್ನು ಒದಗಿಸಿ, ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುವುದು’ ಎಂದರು.

‘ಶಾಸಕ ಎಂ.ಸಿ.ವೇಣುಗೋಪಾಲ ಅವರು ವಿಧಾನ ಪರಿಷತ್‌ನಲ್ಲಿ ನಿಮ್ಮ ಸಮಾಜವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಎಲ್ಲ ಹಂತದಲ್ಲೂ ನಿಮ್ಮ ಸಮಾಜದ ವ್ಯಕ್ತಿಗಳು ಅಧಿಕಾರಕ್ಕೆ ಬರಬೇಕು. ಅಂದಾಗಲೇ ನಿಮಗೆ ಸಿಗಬೇಕಾದ ಸೌಲಭ್ಯ ಹಾಗೂ ಗೌರವ ಸಿಗಲಿವೆ’ ಎಂದು ಅಭಿಪ್ರಾಯಪಟ್ಟರು.

‘ಪಸ್ತುತ ಸವಿತಾ ಸಮಾಜ ಪ್ರವರ್ಗ ‘2–ಎ’ಯಲ್ಲಿದೆ. ಇದೇ ಪ್ರವರ್ಗದಲ್ಲಿ ಇತರ ಪ್ರಬಲ ಸಮುದಾಯಗಳನ್ನು ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನ್ಯಾಯ ಸರಿಪಡಿಸಲಾಗುವುದು. ಬೆಂಗಳೂರಿನಲ್ಲಿ ಸವಿತಾ ಮಹರ್ಷಿ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಶಾಸಕ ವೇಣುಗೋಪಾಲ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಆದಷ್ಟು ಬೇಗ ಬೇಡಿಕೆಯನ್ನು ಈಡೇರಿಸಲಾಗುವುದು. ಚಿತ್ತಾಪುರ ತಾಲ್ಲೂಕು ಕೊಂಚೂರು ಗ್ರಾಮದಲ್ಲಿರುವ ಸವಿತಾ ಸಮುದಾಯದ ಮಠಕ್ಕೆ ಹೆಚ್ಚಿನ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದಂತೆ ಚಿಂಚೋಳಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ, ಆಯ್ಕೆ ಮಾಡಿ ಕಳುಹಿಸಬೇಕು’ ಎಂದು ಮನವಿ ಮಾಡಿದರು.
‘ಕಾಂಗ್ರೆಸ್ ಪಕ್ಷ ಎಲ್ಲ ಜನಾಂಗ, ಸಮುದಾಯಗಳನ್ನು ಒಟ್ಟಿಗೆ ತೆಗದುಕೊಂಡು ಹೋಗುತ್ತದೆ. ಸಂವಿಧಾನದ ಅಡಿಯಲ್ಲಿ ಸಿಗುವ ಎಲ್ಲ ಅವಕಾಶ ಹಾಗೂ ಸೌಲಭ್ಯಗಳನ್ನು ಸವಿತಾ ಸಮಾಜಕ್ಕೆ ಒದಗಿಸಲಾಗುವುದು’ ಎಂದರು.

ಕೊಂಚೂರು ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಐಸಿಸಿ ಕಾರ್ಯದರ್ಶಿ ಸಾಕೆ ಸೈಲಜಾನಾಥ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಎಚ್.ಟಿ.ಸೋಮಶೇಖರ್, ವೆಂಕಟರಮಣಪ್ಪ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ ಜಾಧವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !