ಶುಕ್ರವಾರ, ಜುಲೈ 1, 2022
27 °C

ಗ್ರಾಮ ಪಂಚಾಯಿತಿ ಕೆಲಸಗಳು ಬಂದ್, ತಾಲ್ಲೂಕು ಪಂಚಾಯಿತಿ ಅಧಿಕಾರಿ ಹಸ್ತಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೊಗಲಾ ಗ್ರಾ.ಪಂ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿ ಪಂಚಾಯಿತಿಯ ಎಲ್ಲಾ ಯೋಜನೆಗಳ ಕೆಲಸ ಕಾರ್ಯಗಳು ಬಂದ್ ಮಾಡಿರುವ ಪ್ರಕರಣ ತಡವಾಗಿ ಬೆಳೆಕಿಗೆ ಬಂದಿದೆ.

ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ತೊಂದರೆ ಕೊಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿ ತಡೆಹಿಡಿದಿದ್ದಾರೆ. ಯೋಜನೆಗಳನ್ನು ಲಾಕ್ ಮಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮ ಮತ್ತು ತಾಂಡಾಗಳಲ್ಲಿ ಯಾವುದೇ ರೀತಿಯ ಕೆಲಸಗಳು, ಖರ್ಚುವೆಚ್ಚ ಮಾಡದಂತೆ ಪಿಡಿಓ ಅವರಿಗೆ ತಾಕೀತು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಫೆ.3 ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆದಿದ್ದಾರೆ.

ನರೇಗಾ, ರಾಜೀವಗಾಂಧಿ ಸೇವಾ ಕೇಂದ್ರ, ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ, ಕಸ ವಿಲೇವಾರಿ ಘಟಕ ಕಟ್ಟಡ ನಿರ್ಮಾಣ ಕೆಲಸ ಮಾಡದಂತೆ ತಡೆ ಹಿಡಿದಿದ್ದಾರೆ. ಸದಸ್ಯರಿಗೆ ಗೌರವ ಧನ ಕೊಡದಂತೆ, ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಮಾಡದಂತೆ ತಡೆ ಹಿಡಿದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಓರಿಯೆಂಟ್ ಸಿಮೆಂಟ್ ಕಂಪನಿ ಪಂಚಾಯಿತಿಗೆ ಪಾವತಿಸಿದ ₹75 ಲಕ್ಷ ತೆರಿಗೆ ಹಣ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಒತ್ತಾಯಿಸುತ್ತಿದ್ದಾರೆ.  ಕಳೆದ 6 ತಿಂಗಳಿನಿಂದ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡದೆ ತಡೆ ಹಿಡಿದಿದ್ದಾರೆ. ಗ್ರಾಮ ಪಂಚಾಯಿತಿಗೆ ಬರುವ ಯಾವುದೇ ಅನುದಾನ ಬಳಸಿ ಕೆಲಸ ಮಾಡದಂತೆ ಪಿಡಿಒ ಅವರಿಗೆ ಸೂಚಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಓರಿಯೆಂಟ್ ಸಿಮೆಂಟ್ ಕಂಪನಿ ಆಡಳಿತ ಸಿ.ಎಸ್.ಆರ್ ಯೋಜನೆಯಡಿ ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿ ಸಹಕಾರ ನೀಡುತ್ತಿಲ್ಲ. ನರೇಗಾ ಯೋಜನೆ ಬಂದ್ ಮಾಡಿಸಿ ದುಡಿಯುವ ಕೂಲಿಕಾರ್ಮಿಕರ ಕೆಲಸ ಕಸಿದುಕೊಂಡು ಕಾರ್ಮಿಕರಿಗೆ ವಂಚಿಸುತ್ತಿದ್ದಾರೆ. ತೆರಿಗೆ ಹಣ ಬ್ಯಾಂಕಿನಲ್ಲಿಟ್ಟು, ಎಲ್ಲಾ ಯೋಜನೆ ಬಂದ್ ಮಾಡಿದರೆ ಕೆಲಸಗಳು ಮಾಡುವುದು ಹೇಗೆ ಎಂದು ಅವರು ಜಿಲ್ಲಾ ಪಂಚಾಯಿತಿ ಅಧಿಕಾರಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು