ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ದುರ್ಬಳಕೆ ಆರೋಪ: ಕಮರವಾಡಿ ಗ್ರಾ.ಪಂ ಅಧ್ಯಕ್ಷೆಯ ಸದಸ್ಯತ್ವ ಅನರ್ಹ

Last Updated 26 ಜನವರಿ 2023, 5:56 IST
ಅಕ್ಷರ ಗಾತ್ರ

ಕಲಬುರಗಿ: ಗ್ರಾಮ ಪಂಚಾಯಿತಿ ಅನುದಾನ ದುರ್ಬಳಕೆ ಆರೋಪ ಸಾಬೀತಾದ ಕಾರಣ ಚಿತ್ತಾಪುರ ತಾಲ್ಲೂಕಿನ ಕಮರವಾಡಿ ಗ್ರಾ.ಪಂ ಅಧ್ಯಕ್ಷೆ ಸರೋಜಿನಿ ಬಸವರಾಜ ಅವರ ಅಧ್ಯಕ್ಷತೆ ಹಾಗೂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ ಅತೀಕ್‌ ಆದೇಶಿಸಿದ್ದಾರೆ ಎಂದು ಗ್ರಾ.ಪಂ ಉಪಾಧ್ಯಕ್ಷ ಡಾಕು ಚಂದು ರಾಠೋಡ ಹೇಳಿದ್ದಾರೆ.

2021–22ನೇ ಸಾಲಿನ ಎಲ್ಲಾ ಯೋಜನೆಗಳಲ್ಲಿನ ಹಣವನ್ನು ಪಿಡಿಒ ಶೇಖಪ್ಪ ಶಂಖು ಹಾಗೂ ಸರೋಜಿನಿ ಅವರು ಸದಸ್ಯರಿಗೆ ಮಾಹಿತಿ ನೀಡದೆ ₹13.75 ಲಕ್ಷ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು.

ದೂರಿನ ಅನ್ವಯ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೋಡೆಲ್ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಗ್ರಾ.ಪಂ ಅಧಿನಿಯಮ ಪಾಲಿಸದೆ ಮತ್ತು ಪಾರದರ್ಶಕ ಖರೀದಿ ನಿಯಮಗಳನ್ನು ಉಲ್ಲಂಘಿಸಿದ್ದು, ಕಾಮಗಾರಿ ಮಾಡದಯೇ ನಕಲಿ ಬಿಲ್‌ಗಳಿಗೆ ಸಹಿ ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ, ಪಿಡಿಒ ಶೇಖಪ್ಪ ಅವರನ್ನು 2021ರ ಆ.19ರಂದು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸರೋಜಿನಿ ಅವರು ತಮ್ಮ ಮೇಲಿನ ಆರೋಪಗಳಿಗೆ ಸಮರ್ಥನೀಯವಾದ ಯಾವುದೇ ಲಿಖಿತ ವಿವರಣೆ, ದಾಖಲೆಗಳನ್ನು ಸಲ್ಲಿಸಿಲ್ಲ. ಇದರಿಂದ ಆರೋಪಗಳು ದೃಢಪಟ್ಟಿರುತ್ತವೆ. ಹೀಗಾಗಿ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಪ್ರಕರಣಗಳ ಅನ್ವಯ ಅವರನ್ನು ಅಧ್ಯಕ್ಷತೆ ಹಾಗೂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT