ಸೋಮವಾರ, ಜನವರಿ 24, 2022
29 °C

ಕಸಾಪ ಸಹಯೋಗದಲ್ಲಿ ಗ್ರಾಮೋತ್ಸವ- ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಗಡಿ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗ್ರಾಮೋತ್ಸವ ಹೆಸರಿನಲ್ಲಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಪ್ರಕಟಿಸಿದರು.

ನಗರದ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಾಧಿಕಾರವು ಈಗಾಗಲೇ ನಾಟಕ ಅಕಾಡೆಮಿ ಹಾಗೂ ಚಲನಚಿತ್ರ ಅಕಾಡೆಮಿಗೆ ಹಣಕಾಸು ನೆರವು ನೀಡಿದ್ದು, ನಾಟಕ ಅಕಾಡೆಮಿ ಗಡಿ ಗ್ರಾಮಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲಿದೆ. ಚಲನಚಿತ್ರ ಅಕಾಡೆಮಿಯು ಈ ಭಾಗದ ಯುವಜನರಿಗೆ ಕ್ಯಾಮೆರಾ ನಿರ್ವಹಣೆ ತರಬೇತಿ ನೀಡಲಿದೆ’ ಎಂದರು.

ಅನುದಾನ ಸಾಕಾಗದು: ರಾಜ್ಯ ಸರ್ಕಾರ ಕೋವಿಡ್‌ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ₹ 15 ಕೋಟಿ ಮೀಸಲಿಟ್ಟಿದೆ. ಆದರೆ, ಇಷ್ಟು ಹಣ ಸಾಕಾಗದು. ಕನಿಷ್ಠ ₹ 150 ಕೋಟಿಯನ್ನಾದರೂ ಕೊಟ್ಟರೆ ಹೆಚ್ಚು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು ಎಂದು ಡಾ. ಸೋಮಶೇಖರ್ ಹೇಳಿದರು.

ಗಡಿ ನಾಡ ಕನ್ನಡಿಗರ ಬಗ್ಗೆ ಕಳಕಳಿ ಹೊಂದಿದ್ದ ಡಾ. ಜಯದೇವಿತಾಯಿ ಲಿಗಾಡೆ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾರಂಭಿಸಿದ್ದು, ಈ ಬಾರಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಲಿಗಾಡೆ ಪ್ರಶಸ್ತಿ ಹಾಗೂ ಕಾಸರಗೋಡಿನ ಬಿ. ಪುರುಷೋತ್ತಮ ಮಾಸ್ಟರ್ ಅವರಿಗೆ ಕಿಞ್ಞಣ್ಣ ರೈ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದರು.

ಶಾಲೆ ದತ್ತು ತೆಗೆದುಕೊಳ್ಳಿ: ಕನ್ನಡ ಸಾಹಿತ್ಯ ಪರಿಷತ್ತು ಗಡಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಪ್ರಾಧಿಕಾರವೂ ಕೈಜೋಡಿಸಲಿದೆ ಎಂದು ಹೇಳಿದರು.

ರಾಜ್ಯದ 19 ಜಿಲ್ಲೆಗಳ 63 ತಾಲ್ಲೂಕುಗಳು ಬೇರೆ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಕಲಬುರಗಿ ಜಿಲ್ಲೆಯ ಸೇಡಂ, ಅಫಜಲಪುರ, ಆಳಂದ ಹಾಗೂ ಚಿಂಚೋಳಿ ತಾಲ್ಲೂಕುಗಳು ಮಹಾರಾಷ್ಟ್ರ, ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿವೆ. ಇಲ್ಲಿ ಕನ್ನಡದ ಚಟುವಟಿಕೆಗಳನ್ನು ವಿಸ್ತರಿಸಲು ವಿಶೇಷ ಅನುದಾನ ನೀಡುವಂತೆ ಕೋರಿ ಸಚಿವ ಮುರುಗೇಶ ನಿರಾಣಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಗೌರವ ಕೋಶಾಧ್ಯಕ್ಷ ಡಾ.ಶರಣರಾಜ್ ಛಪ್ಪರಬಂದಿ, ಯಶವಂತರಾಯ ಅಷ್ಠಗಿ ವೇದಿಕೆಯಲ್ಲಿದ್ದರು.

‘ಪ್ರಜಾವಾಣಿ ವರದಿಗೆ ಸ್ಪಂದಿಸಿ ಪತ್ರ’

ಬೆಳಗಾವಿ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಕನ್ನಡ ಪ್ರೌಢಶಾಲೆಗಳಲ್ಲಿ ಎಂಬ ಬಗ್ಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿಯನ್ನು ಗಮನಿಸಿ ಈ ಸಂಬಂಧ ಕನ್ನಡ ಮಾಧ್ಯಮ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಪತ್ರ ಬರೆದಿದ್ದೇನೆ ಎಂದು ಡಾ. ಸಿ. ಸೋಮಶೇಖರ್ ತಿಳಿಸಿದರು.

ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಪ್ರೌಢಶಾಲೆ ಇರದಿದ್ದರೆ ಗ್ರಾಮಸ್ಥರು ಅನಿವಾರ್ಯವಾಗಿ ಮರಾಠಿ ಶಾಲೆಗೆ ಸೇರ್ಪಡೆಯಾಗುತ್ತಾರೆ. ಹೀಗಾಗಬಾರದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು