ಶನಿವಾರ, ನವೆಂಬರ್ 28, 2020
26 °C

ಅನುದಾನ ಮಂಜೂರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಚರ್ಚ್ ನವೀಕರಣ, ಆವರಣ ಗೋಡೆ, ಸ್ಮಶಾನ ಆವರಣ ಗೋಡೆ, ಸಮುದಾಯ ಭವನ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಅನುದಾನ ಮಂಜೂರಾತಿಗಾಗಿ ಅರ್ಹ ಕ್ರಿಶ್ಚಿಯನ್ ಸಮುದಾಯದವರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಚರ್ಚ್‍ಗಳ ನವೀಕರಣ, ಆವರಣ ಗೋಡೆ, ಸ್ಮಶಾನ ಆವರಣ ಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಕ್ರಿಶ್ಚಿಯನ್ ಸಂಘ- ಸಂಸ್ಥೆಯಿಂದ ಕಾರ್ಯನಿರ್ವಹಿಸುತ್ತಿರುವ ಅನಾಥಾಲಯ, ವೃದ್ಧಾಶ್ರಮ, ಎಚ್.ಐ.ವಿ., ಏಡ್ಸ್ ಸೋಂಕಿತ ವ್ಯಕ್ತಿಗಳ ಆಶ್ರಯಧಾಮ ಮತ್ತು ಮಾನಸಿಕ ಹಾಗೂ ದೈಹಿಕ ಅಂಗವಿಕಲರ  ಆಶ್ರಯಧಾಮಗಳಿಗೆ ಸರ್ಕಾರ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಹಾಯಾನುದಾನ ನೀಡಲಾಗುತ್ತದೆ. ಮಾಹಿತಿಗೆ 08472-247260 ಸಂಪರ್ಕಿಸಬಹುದು.

ಮಾಳಿಂಗರಾಯ ಜಾತ್ರೆ ರದ್ದು

ಕಲಬುರ್ಗಿ: ಕೊರೊನಾ ವೈರಸ್ (ಕೋವಿಡ್-19) ಹರಡುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ನ. 15ರಿಂದ  24ರವರೆಗೆ ನಡೆಯಬೇಕಿದ್ದ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದ ಸಿದ್ಧೇಶ್ವರ/ ಮಾಳಿಂಗರಾಯ ದೇವಸ್ಥಾನದ ಜಾತ್ರಾ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ತಹಶೀಲ್ದಾರ್‌ ಮಲ್ಲೇಶ ತಂಗಾ ತಿಳಿಸಿದ್ದಾರೆ.

ಫರಹತಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ, ಪಟ್ಟಣ ಉಪ ತಹಶೀಲ್ದಾರ್‌, ಮೇಳಕುಂದಾ (ಬಿ) ಗ್ರಾಮದ ಮಾಳಿಂಗರಾಯ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಹಾಗೂ ಸಿದ್ಧೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಮೇಳಕುಂದಾ (ಬಿ) ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಂಘ ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ ಈ ಜಾತ್ರೆ ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಹದಾರ್ಢ್ಯತೆ ಪರೀಕ್ಷೆ 19ರಿಂದ

ಕಲಬುರ್ಗಿ: ಸಿವಿಲ್ ಪೊಲೀಸ್ ಕಾನ್ಸ್‍ಸ್ಟೇಬಲ್ (ಪುರುಷ ಮತ್ತು ಮಹಿಳೆ) ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ (ಇಟಿ ಅಂಡ್ ಪಿಎಸ್‍ಟಿ)ಯನ್ನು ನ. 19 ಹಾಗೂ 20ರಂದು ಕಲಬುರ್ಗಿಯ ಡಿಎಆರ್ ಹೆಡ್‍ಕ್ವಾರ್ಟರ್ಸ್ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಅಭ್ಯರ್ಥಿಗಳಿಗೆ ಹಾಜರಾತಿ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಬೆಂಗಳೂರಿನ ನೇಮಕಾತಿ ಹಾಗೂ ತರಬೇತಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಈಗಾಗಲೇ ಸಂದೇಶವನ್ನು ರವಾನಿಸಲಾಗಿದೆ. ಅಭ್ಯರ್ಥಿಗಳು ಹಾಜರಾತಿ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.

ಬಸ್‍ ಪ್ರಯಾಣ ದರ ಇಳಿಕೆ

ಕಲಬುರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ವಿಭಾಗ-1ರ ವತಿಯಿಂದ ಕಲಬುರ್ಗಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‍ಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಭಾಗ-1ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಚ್‌. ಸಂತೋಷಕುಮಾರ್ ತಿಳಿಸಿದ್ದಾರೆ.

ಹಂತ-1ಕ್ಕೆ ₹ 5, ಹಂತ-2ಕ್ಕೆ ₹ 8, ಹಂತ-3ಕ್ಕೆ ₹ 10, ಹಂತ-4ಕ್ಕೆ ₹ 12, ಹಂತ-5ಕ್ಕೆ ₹ 14, ಹಂತ-6ಕ್ಕೆ ₹ 15, ಹಂತ-7ಕ್ಕೆ ₹ 16 ಹಾಗೂ ಹಂತ 8ಕ್ಕೆ ₹ 17 ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.