ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಥೀವ ಶರೀರಕ್ಕಿಲ್ಲ ಗೌರವ‍ದ ವಿದಾಯ...

ಜಿಲ್ಲೆಯ ಹಲವೆಡೆ ಶವ ಸಂಸ್ಕಾರಕ್ಕಿಲ್ಲ ಸರ್ಕಾರಿ ಜಾಗ; ಹಳ್ಳದ ದಂಡೆಯ ಬಳಿಯೇ ಅಂತ್ಯಕ್ರಿಯೆ
Last Updated 1 ಫೆಬ್ರುವರಿ 2021, 4:47 IST
ಅಕ್ಷರ ಗಾತ್ರ

ಕಲಬುರ್ಗಿ:ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲ

ಒಡಲ ಉರೀಲಿ ಹೆಣಬೆಂದೊ ದೇವರೆ

ಬಡವರಿಗೆ ಸಾವ ಕೊಡಬೇಡ...

ಬಡವರು ಸತ್ತರೆ ಅವರಿಗೆ ಗೌರವಪೂರ್ವಕ ಶವಸಂಸ್ಕಾರವೂ ಸಾಧ್ಯವಿಲ್ಲ ಎಂದು ನಮ್ಮ ಜನಪದರು ಶತಮಾನಗಳ ಹಿಂದೆಯೇ ಹೇಳಿದ ಮಾತಿದು. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿಯೂ ಅದೇ ಪರಿಸ್ಥಿತಿ ಮುಂದುವರಿದಿದೆ.

ತಿಂಗಳ ಹಿಂದೆ ಕಲಬುರ್ಗಿ ತಾಲ್ಲೂಕಿನ ನಂದಿಕೂರ ತಾಂಡಾದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವಸಂಸ್ಕಾರ ಮಾಡುವುದು ಅವರ ಕುಟುಂಬದವರಿಗೆ ಸವಾಲಾಗಿ ಕಾಡಿತು. ಏಕೆಂದರೆ ತಾಂಡಾದಲ್ಲಿ ಶವಸಂಸ್ಕಾರಕ್ಕೆಂದು ಅಧಿಕೃತ ಸರ್ಕಾರಿ ಜಾಗವೇ ಇರಲಿಲ್ಲ. ಕೇಂದ್ರ ಕಾರಾಗೃಹಕ್ಕೆ ಸೇರಿದ ಖಾಲಿ ಜಮೀನಿನಲ್ಲಿ ತಾಂಡಾದ ಜನರು ಹಿಂದೆ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕಾರಾಗೃಹದ ಹಿರಿಯ ಅಧಿಕಾರಿಗಳು ತಮ್ಮ ಇಲಾಖೆಗೆ ಸೇರಿದ ಜಾಗದಲ್ಲಿ ಅಂತ್ಯಕ್ರಿಯೆ ನಡೆಸದಂತೆ ನಿರ್ಬಂಧ ವಿಧಿಸಿದ್ದರು. ಇದರಿಂದ ರೊಚ್ಚಿಗೆದ್ದ ತಾಂಡಾದ ಜನತೆ ಆ ಯುವಕನ ಮೃತದೇಹವನ್ನು ಕಲಬುರ್ಗಿ–ವಿಜಯಪುರ ಹೆದ್ದಾರಿಯ ಪಕ್ಕದ ಬಸ್ ತಂಗುದಾಣದಲ್ಲಿ ಗಂಟೆಗಟ್ಟಲೇ ಇಟ್ಟು ಪ್ರತಿಭಟನೆ ನಡೆಸಿದರು.

ಇದರಿಂದ ಬೆಚ್ಚಿದ ಜಿಲ್ಲಾಡಳಿತ ತಕ್ಷಣ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ರನ್ನು ಸ್ಥಳಕ್ಕೆ ಕಳಿಸಿ ಹಳ್ಳದ ಬಳಿಯಲ್ಲಿ ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿತು. ಇದು ಬರೀ ಒಂದು ಊರಿನ, ಒಂದು ತಾಂಡಾದ ಕಥೆ ಅಲ್ಲ. ಜಿಲ್ಲೆಯ ಹಲವು ಗ್ರಾಮಗಳಲ್ಲಿ, ತಾಂಡಾಗಳಲ್ಲಿ ಸರ್ಕಾರದ ಅಧಿಕೃತ ರುದ್ರಭೂಮಿಗಳಿಲ್ಲ. ಹಾಗಾಗಿ, ಜನರು ಯಾಕಾದರೂ ಸಾಯುತ್ತಾರೋ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿರುತ್ತದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳ ಸ್ಮಶಾನ ಸಮಸ್ಯೆಯನ್ನು ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.

ಜೇವರ್ಗಿ ತಾಲ್ಲೂಕಿನ 94 ಗ್ರಾಮಗಳ ಪೈಕಿ 52 ಗ್ರಾಮಗಳಲ್ಲಿ ಸಾರ್ವಜನಿಕ ರುದ್ರಭೂಮಿ ಇಲ್ಲ. ಈ ಗ್ರಾಮಗಳ ಪೈಕಿ 20 ಗ್ರಾಮಗಳಲ್ಲಿ ಸಾರ್ವಜನಿಕ ರುದ್ರಭೂಮಿಗಳನ್ನು ಗುರುತಿಸಲಾಗಿದೆ. ಇನ್ನು ಮೇಲಷ್ಟೇ ಪಹಣಿಯಲ್ಲಿ ರುದ್ರಭೂಮಿಯೆಂದು ನೋಂದಣಿಯಾಗಬೇಕಿದೆ. 32 ಗ್ರಾಮಗಳಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಿ ಅಲ್ಲಿ ಸ್ಮಶಾನ ಮಾಡಬೇಕಿದೆ. ಆ ಪೈಕಿ 4 ಜಾಗಗಳನ್ನು ಗುರುತಿಸಿ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ತಹಶೀಲ್ದಾರ್ ಸಿದರಾಯ ಬೋಸಗಿ.

ಯಡ್ರಾಮಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಭೂಮಿಯೇ ಇಲ್ಲ. ಹಲವು ಗ್ರಾಮಗಳಲ್ಲಿ ವ್ಯಕ್ತಿ ಮೃತಪಟ್ಟಾಗ ಮಾತ್ರ ಧುತ್ತನೆ ಸಮಸ್ಯೆ ಏಳುತ್ತದೆ. ನಂತರ ಹೇಗೋ ಮಾಡಿ ಎಲ್ಲೋ ಒಂದು ಕಡೆ ಹೂಳಲಾಗುತ್ತದೆ. ಇಂತಹ ಸಮಸ್ಯೆ ತಾಲ್ಲೂಕಿನಲ್ಲಿ ಇರುವುದು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿಲ್ಲದೇನಿಲ್ಲ. ಕೆಲವು ಕಡೆ ಸ್ಮಶಾನ ಭೂಮಿ ಇದ್ದರೂ ಕೆಲವು ಪ್ರಭಾವಿಗಳು ಅತಿಕ್ರಮಿಸಿ ಹೊಲಗಳಾಗಿ ಪರಿವರ್ತಿಸಿಕೊಂಡಿದ್ದಾರೆ.

ಯಡ್ರಾಮಿ ತಾಲ್ಲೂಕು ಕೇಂದ್ರದಲ್ಲೇ ದಹನ ಮಾಡಲು ರುದ್ರಭೂಮಿ ಇಲ್ಲ. ಲಂಡೆನ ಹಳ್ಳದ ಆಸು ಪಾಸಿನ ಕಲ್ಲು ಕೊರಕಲಿನ ಮಧ್ಯ ಆದಿ ಕಾಲದಿಂದಲೂ ಶವ ದಹನ ಮಾಡಲಾಗುತ್ತಿದೆ. ಬಿಳವಾರ ಗ್ರಾಮದ ಸಮಸ್ಯೆಯಂತೂ ಹೇಳತೀರದು. ಮೊದಲು ಹೂಳುತ್ತಿದ್ದ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ಬಿಡಿಸಿದ್ದಾರೆ. ಗ್ರಾಮದಿಂದ ನಾಲ್ಕು ಕಿ.ಮೀ. ದೂರವಿರುವ ತಮ್ಮ ಹೊಲಗಳಲ್ಲಿ ಅಂತ್ಯಕ್ರಿಯ ಮಾಡಲಾಗುತ್ತಿದೆ. ಇಡೀ ಗ್ರಾಮದ ಜನತೆಗೆ ನಿರ್ದಿಷ್ಟವಾದ ಸ್ಮಶಾನ ಜಾಗವಿಲ್ಲ. ಗುಳ್ಯಾಳ, ಅಂಬರಖೇಡ, ಕಡಕೋಳ, ಶಿವಪುರ, ಯತ್ನಾಳ, ಮಲ್ಲಾಬಾದ್, ಕಾಚಾಪೂರ, ಹಂಗರಗಾ (ಕೆ), ಕರಕಿಹಳ್ಳಿ, ಹಂಗರಗಾ (ಬಿ) ಸೇರಿದಂತೆ ಅನೇಕ ಗ್ರಾಮಗಲ್ಲಿ ಇಲ್ಲಿಯೂ ಕೂಡ ಸ್ಮಶಾನ ಜಾಗವಿಲ್ಲ. ತಹಶೀಲ್ದಾರರು ಗ್ರಾಮಗಳಲ್ಲಿ ಇಲ್ಲಿಯ ತನಕ ಸ್ಮಶಾನ ಜಾಗ ಗುರುತಿಸಿಲ್ಲ ಎಂಬುವುದು ವಿಪರ್ಯಾಸ ಸಂಗತಿ. ಜನರ ಈ ಬೇಡಿಕೆಯನ್ನು ಕೂಡಲೇ ಅಧಿಕಾರಿಗಳು ಬಗೆಹಸಿಬೇಕಿದೆ.

ಚಿಂಚೋಳಿ ತಾಲ್ಲೂಕಿನ 61 ಗ್ರಾಮಗಳಲ್ಲಿ ಮಾತ್ರ ಸಾರ್ವಜನಿಕ ರುದ್ರಭೂಮಿಯಿದೆ. 46 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಇದರಿಂದ ಜನರು ತಮ್ಮ ಹೊಲಗಳಲ್ಲಿ ಮೃತರ ಅಂತ್ಯಕ್ರಿಯೆ ನಡೆಸಿದರೆ, ಜಮೀನು ಇಲ್ಲದವರು ನದಿ, ನಾಲಾ, ತೊರೆ ಮತ್ತು ಅರಣ್ಯದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.

15 ಗ್ರಾಮಗಳಲ್ಲಿ ಖಾಸಗಿ ಜಮೀನು ಕೂಡ ಲಭ್ಯವಿಲ್ಲ. ತಾಲ್ಲೂಕಿನಲ್ಲಿ 119 ಗ್ರಾಮಗಳಿವೆ. ಇದರಲ್ಲಿ 12 ಗ್ರಾಮಗಳು ಜನ ವಸತಿ ರಹಿತ ಗ್ರಾಮಗಳಾಗಿವೆ. 2 ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ಖಾಸಗಿ ಜಮೀನು ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ.

ಚಿತ್ತಾಪುರ ತಾಲ್ಲೂಕಿನ 81 ಗ್ರಾಮಗಳ ಪೈಕಿ ನಾಲವಾರ ಮತ್ತು ಗುಂಡಗುರ್ತಿ ಹೋಬಳಿಗಳ 16 ಗ್ರಾಮಗಳಲ್ಲಿ ಶವಸಂಸ್ಕಾರ ಮಾಡಲು ಸ್ಮಶಾನ ಭೂಮಿಯ ಸೌಲಭ್ಯವೇ ಇಲ್ಲ ಎನ್ನುತ್ತವೆ ಕಂದಾಯ ಇಲಾಖೆಯ ದಾಖಲೆಗಳು.

ನಾಲವಾರ ಹೋಬಳಿಯ ಕನಗನಹಳ್ಳಿ, ರಾಂಪುರಹಳ್ಳಿ, ಮಳಗ (ಎನ್), ಕುಲಕಂದ, ತುನ್ನೂರ, ಮಾರಡಗಿ (ಎನ್), ಯಾಗಾಪುರ, ಬೆಳಗೇರಾ, ಶಿವನಗರ, ಚಾಮನೂರ, ಕೊಂಚೂರ ಗ್ರಾಮಗಳು ಹಾಗೂ ಗುಂಡಗುರ್ತಿ ಹೋಬಳಿಯ ಇವಣಿ, ಹದನೂರ, ಮುಗುಳನಾಗಾಂವ, ತೊನಸನಹಳ್ಳಿ (ಟಿ), ಮುಗುಟಾ ಗ್ರಾಮಗಳಲ್ಲಿ ಸ್ಮಶಾನವಿಲ್ಲ.

‘ಸೇಡಂ ತಾಲ್ಲೂಕನ್ನು ಸ್ಮಶಾನಭೂಮಿ ಮುಕ್ತಭೂಮಿಯನ್ನಾಗಿ ಮಾಡುವ ಸಂಕಲ್ಪ ಮಾಡುವ ಉದ್ದೇಶ ನಮ್ಮದಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಶಾಸಕರ ಮಾರ್ಗದರ್ಶನದ ಮೇರೆಗೆ ಕಾರ್ಯ ಚಾಲ್ತಿಯಲ್ಲಿದೆ’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಭೂಮಿ ಇರಲಿಲ್ಲ. ಆದರೆ ಇರುವ ಸರ್ಕಾರಿ ಭೂಮಿಯಲ್ಲಿ ಸ್ಮಶಾನಕ್ಕೆ ಮೀಸಲಿಡುವ ಮೂಲಕ ಅಂತ್ಯ ಸಂಸ್ಕಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಈಗಾಗಲೇ ಕಂದಾಯ ಅಧಿಕಾರಿಗಳನ್ನು ಹಾಗೂ ಗ್ರಾಮ ಲೆಕ್ಕಿಗರನ್ನು ಕರೆದು ಸೂಚನೆ ನೀಡಲಾಗಿದ್ದು, ಕಾರ್ಯ ಚಾಲ್ತಿಯಲ್ಲಿದೆ. ಖಾಸಗಿ ವ್ಯಕ್ತಿಗಳು ಮುಂದೆ ಬಂದಲ್ಲಿ, ಸರ್ಕಾರ ನಿಗದಿಪಡಿಸಿದ ದರ ಹಾಗೂ ಕಾನೂನು ಅನುಸಾರ ಖರೀದಿ ಮಾಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT