ಗುರುವಾರ , ಅಕ್ಟೋಬರ್ 17, 2019
28 °C
ನಾಲವಾರ ಹೋಬಳಿಯ ನೂರಾರು ರೈತರಿಗೆ ಅತಂಕ

ಶೇಂಗಾ ಬಿತ್ತನೆ ಬೀಜಕ್ಕೆ ಪರದಾಟ

Published:
Updated:
Prajavani

ವಾಡಿ: ಈ ಬಾರಿ ಒಂದೆಡೆ ಉತ್ತಮ ಮಳೆಯಾಗಿ ಹಿಂಗಾರು ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಯಾಗಿದ್ದರೆ ಮತ್ತೊಂದೆಡೆ ಬಿತ್ತನೆಗೆ ಶೇಂಗಾ ಬೀಜ ದೊರಕದೆ ರೈತರು ಪರದಾಡುತ್ತಿದ್ದಾರೆ.

ನಾಲವಾರ ಹೋಬಳಿಯು ಚಿತ್ತಾಪುರ ತಾಲ್ಲೂಕಿನಲ್ಲಿಯೇ ಅತ್ಯಧಿಕ ಶೇಂಗಾ ಬೆಳೆಯುವ ಪ್ರದೇಶವಾಗಿದೆ. ಆದರೆ ಸಕಾಲಕ್ಕೆ ಬೀಜಗಳ ಕೊರತೆಯಿಂದ ಬಿತ್ತನೆ ಸಾಧ್ಯವಾಗದೆ ಸಾವಿರಾರು ರೈತರು ಕಂಗಾಲಾಗಿದ್ದಾರೆ. ಬೀಜ ಪೂರೈಕೆಯಲ್ಲಿ ವಿಳಂಬಕ್ಕೆ ಕೃಷಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿಂಗಾರಿನ ಶೇಂಗಾ ಬಿತ್ತನೆಗಾಗಿ ಈಗಾಗಲೇ ರೈತರು ಜಮೀನು ಸಿದ್ಧಪಡಿಸಿಕೊಂಡಿದ್ದಾರೆ. ರಸಗೊಬ್ಬರ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಬೀಜ ಪಡೆಯಲು ಅಗತ್ಯ ಕಾಗದಪತ್ರಗಳನ್ನು ಹಿಡಿದು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಬೀಜ ಸಿಗದೆ ಚಿಂತೆಗೀಡಾಗಿದ್ದಾರೆ.

‘ಬಿತ್ತನೆಗಾಗಿ ಸಿದ್ಧಪಡಿಸಿದ ಜಮೀನಿನಲ್ಲಿ ಹಸಿ ತೇವಾಂಶ ಇರುವುದರೊಳಗೆ ಬೀಜ ಬಿದ್ದು ಮೊಳಕೆ ಬರಬೇಕು. ಆದರೆ ಬಿತ್ತಲು ಬೀಜ ಸಿಗುತ್ತಿಲ್ಲ. ಪಟ್ಟ ಶ್ರಮವೆಲ್ಲ ವ್ಯರ್ಥವಾಗುವ ಆತಂಕ ಕಾಡುತ್ತಿದೆ' ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷ ಸಪ್ಟೆಂಬರ್ ಕೊನೆಯ ವಾರದಲ್ಲಿಯೇ ಬಿತ್ತನೆ ಪೂರ್ಣಗೊಳಿಸಿದ್ದ ರೈತರಿಗೆ ಈ ಬಾರಿ ನಿರಾಶೆಯಾಗಿದೆ. ಬೀಜ ರೈತರ ಕೈ ಸೇರಿದ್ದರೆ ಇಷ್ಟೊತ್ತಿಗೆ ಶೇಂಗಾ ಮೊಳಕೆಯೊಡೆದು ಫಸಲು ಕಣ್ಣಿಗೆ ಕಾಣಿಸುತ್ತಿತ್ತು. ಆದರೆ ಬಹುತೇಕ ರೈತರ ಜಮೀನುಗಳು ಬಿತ್ತನೆಯಿಲ್ಲದೆ ಖಾಲಿ ಕಾಣಿಸುತ್ತಿವೆ.

'ಹೋದ ವರ್ಷ ಸಕಾಲಕ್ಕೆ ಬೀಜ ಸಿಕ್ಕು ಅನುಕೂಲ ಆಗಿತ್ತು.ಈ ಸಲ 20 ದಿನದಿಂದ ಕಚೇರಿಗೆ ತಿರುಗುತ್ತಿದ್ದೇವೆ. ಶೇಂಗಾ ಬೀಜ ಸಿಗುತ್ತಿಲ್ಲ. ಮೇಲಿನಿಂದ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ' ಎನ್ನುತ್ತಾರೆ ಹಣ್ಣಿಕೇರಾ ಗ್ರಾಮದ ರೈತರಾದ ಶರಣಪ್ಪ ನಾಲವಾರ, ಸುಭಾಸ್ ರಾಠೋಡ, ಹೀರಾಮನ್ ಪವಾರ, ದೇವಿಂದ್ರಪ್ಪ ಪೂಜಾರಿ, ಹಣಮಂತ ಹಣ್ಣಿಕೇರಾ. ಶಿವಕುಮಾರ ಕಳಸನೋರು. ಬಸವರಾಜ ಸಂಗನ್, ಬಸವರಾಜ ಸಜ್ಜನ, ಸಾಯಬಣ್ಣ ಗಡ್ಡಿಮನಿ.

ಬೀಜ ಪೂರೈಕೆ ಮಾಡುವ ಖಾಸಗಿ ಕಂಪನಿಗಳು ಹಾಗೂ ಸರ್ಕಾರದ ಮಧ್ಯೆ ದರದ ವಿಷಯದಲ್ಲಿ ಹೊಂದಾಣಿಕೆಯಾಗದ ಕಾರಣ ಬೀಜ ಪೂರೈಕೆಯಾಗುತ್ತಿಲ್ಲ. ಈಗಾಗಲೇ ಮಾತುಕತೆ ಮುಗಿದಿದ್ದು, 2–3 ದಿನಗಳಲ್ಲಿ ಬೀಜ ಪೂರೈಕೆಯಾಗಲಿವೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೂಡಲೇ ಶೇಂಗಾ ಬೀಜ ಪೂರೈಕೆ ಮಾಡದಿದ್ದರೆ ಕೃಷಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

Post Comments (+)