ಚಿನ್ನಾಭರಣ ಪ್ರಿಯರಿಗೆ ‘ಜಿಎಸ್‌ಟಿ’ ಬಿಸಿ!

7
ದೊಡ್ಡ ವ್ಯಾಪಾರಿಗಳಿಗೆ ಖುಷಿ; ಸಣ್ಣ ವ್ಯಾಪಾರಿಗಳಿಗೆ ಕಸಿವಿಸಿ

ಚಿನ್ನಾಭರಣ ಪ್ರಿಯರಿಗೆ ‘ಜಿಎಸ್‌ಟಿ’ ಬಿಸಿ!

Published:
Updated:

ಕಲಬುರ್ಗಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಚಿನ್ನಾಭರಣಗಳ ಮೇಲಿನ ತೆರಿಗೆ ಶೇ 3ರಷ್ಟು ಏರಿಕೆಯಾಗಿದ್ದು, ಇದರಿಂದ ಚಿನ್ನಾಭರಣ ಪ್ರಿಯರು ನಿರಾಸೆ ಅನುಭವಿಸುವಂತಾಗಿದೆ.

ಚಿನ್ನಾಭರಣಗಳ ಮೇಲೆ ಈ ಹಿಂದೆ ಶೇ 1ರಷ್ಟು ತೆರಿಗೆ (ವ್ಯಾಟ್– ಮೌಲ್ಯ ವರ್ಧಿತ ತೆರಿಗೆ) ವಿಧಿಸಲಾಗುತ್ತಿತ್ತು. 2017ರ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬಂದಿದ್ದು, ಅಂದಿನಿಂದ ಶೇ 1.5ರಷ್ಟು ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಹಾಗೂ ಶೇ 1.5ರಷ್ಟು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಸೇರಿ ಒಟ್ಟು ಶೇ 3ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. ಹೆಚ್ಚುವರಿ ಶೇ 2ರಷ್ಟು ತೆರಿಗೆ ಗ್ರಾಹಕರಿಗೆ ಹೊರೆಯಾಗಿದ್ದು, ಚಿನ್ನಾಭರಣ ಖರೀದಿಸಲು ಹಿಂದೇಟು ಹಾಕುವಂತಾಗಿದೆ.

‘ಈ ಮೊದಲು ಸಣ್ಣ ವ್ಯಾಪಾರಿಗಳು ಸಾಮಾನ್ಯವಾಗಿ ಬಿಲ್ ಕೊಡುತ್ತಿರಲಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ಅವರ ಬಳಿಯೇ ಖರೀದಿಸಲು ಇಚ್ಛೆ ಪಡುತ್ತಿದ್ದರು. ಆದರೆ, ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ಕಡ್ಡಾಯವಾಗಿದೆ. ಹೀಗಾಗಿ ಅವರೂ ಕೂಡ ಶೇ 3ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ಇದರಿಂದ ಗ್ರಾಹಕರು ಎಲ್ಲೇ ಚಿನ್ನಾಭರಣ ಖರೀದಿಸಿದರೂ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ’ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.

‘ಜಿಎಸ್‌ಟಿ ಜಾರಿಗೂ ಮುನ್ನ 10 ಗ್ರಾಂ ಚಿನ್ನಾಭರಣ ಖರೀದಿಸಿದರೆ ₹300 ತೆರಿಗೆ ಪಾವತಿಸಬೇಕಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ 10 ಗ್ರಾಂಗೆ ₹900 ತೆರಿಗೆ ಪಾವತಿಸಬೇಕಿದೆ. ವ್ಯಾಪಾರಿಗಳು ಚಿನ್ನಾಭರಣದ ತಯಾರಿಕಾ ಶುಲ್ಕ ಸೇರಿ ತೆರಿಗೆ ವಿಧಿಸುತ್ತಿದ್ದಾರೆ. ಹೀಗಾಗಿ 10 ಗ್ರಾಂ ಚಿನ್ನಾಭರಣ ಖರೀದಿಸಿದರೆ ₹1,500ರಿಂದ ₹2 ಸಾವಿರದಷ್ಟು ತೆರಿಗೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ’ ಎಂದು ಗ್ರಾಹಕರು ಹೇಳುತ್ತಾರೆ.

‘ಈ ಮೊದಲು 10 ಗ್ರಾಂ ಶುದ್ಧ ಚಿನ್ನ (ಅಪರಂಜಿ) ಖರೀದಿಸಿದಾಗ ₹300 ತೆರಿಗೆ ಮತ್ತು ₹100 ತಯಾರಿಕಾ ಶುಲ್ಕ ಸೇರಿ 400 ಹೊರೆಯಾಗುತ್ತಿತ್ತು. ಮರಳಿ ಮಾರಾಟ ಮಾಡಿದಾಗ ₹400 ನಷ್ಟವಾಗುತ್ತಿತ್ತು. ಆದರೆ, ಜಿಎಸ್‌ಟಿಯಿಂದಾಗಿ ₹1,500 ನಷ್ಟ ಅನುಭವಿಸುವಂತಾಗಿದೆ’ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಆಮದು ಚಿನ್ನದ ಮೇಲೆ ಶೇ 10ರಷ್ಟು ಕಸ್ಟಮ್ ಡ್ಯೂಟಿ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ಇಳಿಸಬೇಕು ಅಥವಾ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ಆಗ ಚಿನ್ನದ ವಹಿವಾಟು ಜೋರಾಗಿ ನಡೆಯುತ್ತದೆ. ಇಲ್ಲವಾದಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗುತ್ತದೆ’ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !