ಭಾನುವಾರ, ಜನವರಿ 17, 2021
22 °C
ಹಾಲಿ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಉನ್ನತ ಶಿಕ್ಷಣ ಇಲಾಖೆ ಸೂಚನೆ

ಗುಲಬರ್ಗಾ ವಿಶ್ವವಿದ್ಯಾಲಯ: ಅತಿಥಿ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಅತಂತ್ರ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಚಂದ್ರಕಾಂತ ಯಾತನೂರ

ಕಲಬುರ್ಗಿ: ಕೋವಿಡ್–19 ಹರಡುತ್ತಿರುವುದರಿಂದ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ನಡೆಸುವ ಬದಲು ಹಾಲಿ ಇರುವ ಅತಿಥಿ ಉಪನ್ಯಾಸಕರ ಸೇವೆಯನ್ನೇ ಮುಂದುವರಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿರುವುದು ಹಾಲಿ ಈ ಹುದ್ದೆಯಲ್ಲಿರುವವರಿಗೆ ಖುಷಿ ತಂದಿದ್ದರೆ, ಈ ಬಾರಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ಅತಿಥಿ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಗುಲಬರ್ಗಾ ವಿಶ್ವವಿದ್ಯಾಲಯವು ಅತಿಥಿ ಉಪನ್ಯಾಸಕರ ನೇಮಕಕ್ಕೆ ಸೆಪ್ಟೆಂಬರ್ 11ಕ್ಕೆ ಅಧಿಸೂಚನೆ ಹೊರಡಿಸಿತ್ತು. ಸೆ 25ರೊಳಗಾಗಿ ಅರ್ಜಿ ಸಲ್ಲಿಸುವಂತೆಯೂ ಸೂಚನೆ ನೀಡಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ರಾಜ್ಯಶಾಸ್ತ್ರ, ಇತಿಹಾಸ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಮಾಜ ವಿಜ್ಞಾನ, ಮಹಿಳಾ ಅಧ್ಯಯನ ವಿಷಯಗಳಿಗೆ ನವೆಂಬರ್ 13ರಂದು ಸಂದರ್ಶನ ನಡೆಸಿತ್ತು. ಹಾಲಿ ಅತಿಥಿ ಉಪನ್ಯಾಸಕರಲ್ಲದೇ ಹೊಸದಾಗಿ ನೇಮಕ ಬಯಸಿದ ಅಭ್ಯರ್ಥಿಗಳೂ ಹಾಜರಾಗಿದ್ದರು.

ವಿವಿಧ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕವಾಗುವ ಹಂಬಲದಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡ, ಪ್ರವರ್ಗ–1, ಅಂಗವಿಕಲ ಅಭ್ಯರ್ಥಿಗಳು ₹ 300 ಹಾಗೂ ಸಾಮಾನ್ಯ, 2ಎ, 2ಬಿ, 3ಎ ಹಾಗೂ 3ಬಿ ಪಂಗಡದ ಅಭ್ಯರ್ಥಿಗಳು ₹ 600 ಶುಲ್ಕ ‍ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ನಿರ್ಧಾರದಿಂದ ಉದ್ಯೋಗವೂ ಇಲ್ಲದೇ, ಶುಲ್ಕ ಮರುಪಾವತಿ ಸಾಧ್ಯತೆಯೂ ಇಲ್ಲದ್ದರಿಂದ ಕಂಗಾಲಾಗಿದ್ದಾರೆ.

ಕೆಲ ವಿಭಾಗಗಳಿಗೆ ಸಂದರ್ಶನ ಪ್ರಕ್ರಿಯೆ ನಡೆಸಿದ್ದರೂ ನೇಮಕಾತಿ ಆದೇಶವನ್ನು ನೀಡಿಲ್ಲ. ಇನ್ನು ಕೆಲ ವಿಭಾಗಗಳಿಗೆ ಸಂದರ್ಶನ ನಡೆಯಬೇಕಿತ್ತಾದರೂ ಘಟಿಕೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮುಂದೂಡಲಾಗಿತ್ತು.

‘ಉನ್ನತ ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ನಮಗೆ ಮುಂದೇನು ಮಾಡಬೇಕು ಎಂಬುದೇ ತೋಚದಂತಾಗಿದೆ. ಸರ್ಕಾರದ ನಿರ್ಧಾರಕ್ಕೂ ಕಾಯದೇ ಗುಲಬರ್ಗಾ ವಿಶ್ವವಿದ್ಯಾಲಯವು ನೇಮಕಾತಿ ಅಧಿಸೂಚನೆ ಏಕೆ ಹೊರಡಿಸಬೇಕಿತ್ತು. ಹಳಬರನ್ನೇ ಮುಂದುವರಿಸುವ ಬದಲು ಮೆರಿಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು’ ಎಂದು ಕಲಾ ನಿಕಾಯದ ವಿಭಾಗವೊಂದರ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯೊಬ್ಬರು ಒತ್ತಾಯಿಸಿದರು.

‘ರಾಯಚೂರು, ಬೀದರ್ ಸ್ನಾತಕೋತ್ತರ ಕೇಂದ್ರ ಹಾಗೂ ಕಲಬುರ್ಗಿ ಕ್ಯಾಂಪಸ್‌ನಲ್ಲಿರುವ ಹಲವು ವಿಭಾಗಗಳಿಗೆ ನೂರಾರು ಅಭ್ಯರ್ಥಿಗಳು ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಇರುವವರನ್ನೇ ಮುಂದುವರಿಸುವ ಬಗ್ಗೆ ಹೇಳಿದ್ದರೆ ಬೇರೇನಾದರೂ ಮಾರ್ಗ ಹುಡುಕಿಕೊಳ್ಳುತ್ತಿದ್ದೆವು. ಇದೆಲ್ಲ ಪ್ರಹಸನ ಏಕೆ ಬೇಕಿತ್ತು? ಬೆಂಗಳೂರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಲಿ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸುತ್ತಿದ್ದಾರೆ. ಇಲ್ಲಿಯೂ ಆ ಬಗ್ಗೆ ನಿರ್ಧಾರ ತೆಗೆದುಕೊಂಡು ಅದರಂತೆ ನಡೆದುಕೊಳ್ಳಬೇಕಿತ್ತು’ ಎಂದು ಮತ್ತೊಬ್ಬ ಅಭ್ಯರ್ಥಿ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ನಿಕಾಯವೊಂದರ ಡೀನ್ ಒಬ್ಬರು, ‘ಸರ್ಕಾರದ ನಿರ್ಧಾರ ಏನು ಬರಬಹುದು ಎಂಬ ಆತಂಕದಲ್ಲಿಯೇ ಸಂದರ್ಶನ ನಡೆಸಿದ್ದೆವು. ಕೋವಿಡ್‌–19ನಿಂದ ಸಂಕಷ್ಟಕ್ಕೊಳಗಾದ ಹಾಲಿ ಉಪನ್ಯಾಸಕರನ್ನೇ ಮುಂದುವರಿಸುವ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಉತ್ತಮ ಮೆರಿಟ್ ಇರುವ ಅಭ್ಯರ್ಥಿಗಳನ್ನೂ ಕೈಬಿಡಬಾರದು ಎಂದರೆ ಹೆಚ್ಚುವರಿ ಕಾರ್ಯಭಾರವನ್ನು ತೋರಿಸಿ ನೇಮಕ ಮಾಡಿಕೊಳ್ಳಬಹುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು