ಭಾನುವಾರ, ಅಕ್ಟೋಬರ್ 17, 2021
23 °C

ವಾಡಿ: ಏಕಲವ್ಯ ಶಾಲೆಗೆ ಅತಿಥಿ ಉಪನ್ಯಾಸಕರೇ ಗತಿ‌

ಸಿದ್ದರಾಜ ಎಸ್ ಮಲ್ಕಂಡಿ Updated:

ಅಕ್ಷರ ಗಾತ್ರ : | |

Prajavani

ವಾಡಿ: ಕೊಂಚೂರಿನಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯ ಪದವಿಪೂರ್ವ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಇದ್ದು, ತಮ್ಮ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ಪೋಷಕರಲ್ಲಿ ಮೂಡಿದೆ.

ಕಾಯಂ ಉಪನ್ಯಾಸಕರು ಇಲ್ಲದೆ ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆಯು ವಸತಿ ಶಾಲೆಗೆ ಅನಿವಾರ್ಯವಾಗಿದೆ. ಕೊಂಚೂರಿನಲ್ಲಿ ಏಕಲವ್ಯ ವಸತಿ ಶಾಲೆಯ ಪದವಿಪೂರ್ವ ವಿಭಾಗವು 2016ರಲ್ಲಿ ಆರಂಭವಾಯಿತು. 5 ವರ್ಷ ಕಳೆದರೂ ಪೂರ್ಣ ಪ್ರಮಾಣ ಖಾಯಂ ಉಪನ್ಯಾಸಕರ ನೇಮಕವಾಗಿಲ್ಲ. ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡು ಬೋಧನೆ ಮಾಡಲಾಗುತ್ತಿದೆ.

ಕನ್ನಡ, ಇಂಗ್ಲಿಷ, ಜೀವಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಸೇರಿ 6 ವಿಷಯಗಳ ಪೈಕಿ ಕನ್ನಡ ವಿಷಯಕ್ಕೆ ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಉಳಿದವುಗಳನ್ನು ಅತಿಥಿ ಉಪನ್ಯಾಸಕರು ಬೋಧಿಸುತ್ತಿದ್ದಾರೆ.

ಕಾಯಂ ಉಪನ್ಯಾಸಕರ ಕೊರತೆಯಿಂದ ವಿಷಯಗಳ ಪೂರ್ಣ ಪ್ರಮಾಣದ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಪದವಿಪೂರ್ವ ವಿಜ್ಞಾನ ವಿಭಾಗವು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಹಂತವಾಗಿದೆ. ಜೀವಶಾಸ್ತ್ರ, ರಸಾಯನಶಾಸ್ತ್ರ, ಗಣಿತದಂತಹ ಅತ್ಯುಪಯುಕ್ತ ವಿಷಯಗಳಿಗೆ ನುರಿತ ಖಾಯಂ ಉಪನ್ಯಾಸಕರಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಹಾಗೂ ಫಲಿತಾಂಶದ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ. ಕೂಡಲೇ ಸರ್ಕಾರ ಕಾಯಂ ಉಪನ್ಯಾಸಕರ ನೇಮಕಕ್ಕೆ ಮುಂದಾಗಬೇಕು ಎಂಬುದು ಪೋಷಕರ ಮನವಿ.

ವಿಜ್ಞಾನ ವಿಭಾಗದ ಪ್ರಥಮ ವರ್ಷದ ಪ್ರವೇಶಾತಿ ನಡೆಯುತ್ತಿದೆ. ದ್ವಿತೀಯ ವರ್ಷದ 60 ಸೀಟುಗಳ ಪೈಕಿ 42 ವಿದ್ಯಾರ್ಥಿಗಳು ಓದುತ್ತಿದ್ದಾರೆ. 18 ಸೀಟುಗಳ ಅಭಾವವಿದೆ. ಕಾಯಂ ಉಪನ್ಯಾಸಕರ ಕಾರಣದಿಂದಾಗಿ ವಿದ್ಯಾರ್ಥಿಗಳು ಬೇರೆಡೆ ತೆರಳಿ ಅಧ್ಯಯನ ಮಾಡಲು ಇಚ್ಛಿಸುತ್ತಿದ್ದಾರೆ. ವಿಜ್ಞಾನದ ವಿಷಯಗಳಿಗೆ ಅತಿಥಿ ಉಪನ್ಯಾಸಕರೇ ಇರುವುದು ಶಿಕ್ಷಣಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಕೂಡಲೇ ಕಾಯಂ ಉಪನ್ಯಾಸಕರ ನೇಮಕಕ್ಕೆ ಮುಂದಾಗಬೇಕು ಎನ್ನುತ್ತಾರೆ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ವಾಡಿ ಸಮಿತಿ ಕಾರ್ಯದರ್ಶಿ ವೆಂಕಟೇಶ ದೇವದುರ್ಗ.

ವಸತಿ ಶಾಲೆಯು ಪಟ್ಟಣದಿಂದ ದೂರದಲ್ಲಿದೆ. ಪ್ರಮುಖ ವಿಷಯಗಳಿಗೆ ಅತಿಥಿ ಉಪನ್ಯಾಸಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ನೀಡುವ ಸಂಬಳವೂ ಕಡಿಮೆ ಮತ್ತು ಉದ್ಯೋಗ ಭದ್ರತೆಯೂ ಇಲ್ಲ. ಬೇರೆ ವೃತ್ತಿ ಮಾಡಿದರೆ ಇದಕ್ಕಿಂತ ಹೆಚ್ಚಿನ ಸಂಬಳ ಪಡೆಯಬಹುದು ಎನ್ನುತ್ತಾರೆ ಅತಿಥಿ ಉಪನ್ಯಾಸಕರೊಬ್ಬರು.

***

ಖಾಯಂ ಉಪನ್ಯಾಸಕರ ಅಭಾವದಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಆರಂಭದಿಂದಲೂ ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ

-ಸಿದ್ದು ನೀಡಾಲ, ವಿದ್ಯಾರ್ಥಿ ಪೋಷಕ

***

ವಸತಿ ಶಾಲೆಯ ಉಪನ್ಯಾಸಕರ ನೇಮಕಾತಿಯು ಕೇಂದ್ರ ಸರ್ಕಾರದಿಂದ ನಡೆಯುತ್ತದೆ. ಕಾಯಂ ಉಪನ್ಯಾಸಕರ ಅಗತ್ಯತೆ ಕುರಿತು ವಸತಿ ಶಾಲೆಗಳ ಮುಖ್ಯಸ್ಥರಿಗೆ ಬೇಡಿಕೆ ಸಲ್ಲಿಸಲಾಗಿದೆ

-ಶಿವಮ್ಮ ಬಡಿಗೇರ, ಶಾಲೆ ಪ್ರಾಂಶುಪಾಲ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು