ಮಂಗಳವಾರ, ನವೆಂಬರ್ 19, 2019
29 °C
ಗುಲಬರ್ಗಾ ವಿಶ್ವವಿದ್ಯಾಲಯದ ಎರಡು ದಿನಗಳ ಅಂತರ ಕಾಲೇಜು ಯುವಜನೋತ್ಸವಕ್ಕೆ ಚಾಲನೆ

‘ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು’

Published:
Updated:
Prajavani

ಕಲಬುರ್ಗಿ: ‘ಜೀವನದಲ್ಲಿ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು’ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್‌ ವಾದಕ ಪಂ. ನರಸಿಂಹಲು ವಡವಾಟಿ ಅಭಿಪ್ರಾಯಪಟ್ಟರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆರಂಭವಾದ ಎರಡು ದಿನಗಳ ಅಂತರ ಕಾಲೇಜು ಯುವಜನೋತ್ಸವಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

‘ಮನುಷ್ಯ ದೊಡ್ಡ ಕನಸು ಕಾಣಬೇಕು. ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ದೇಶದ ಬಗ್ಗೆ ಕಾಳಜಿ ಇರಬೇಕು. ಗಡಿ ಕಾಯುವ ಸೈನಿಕರನ್ನು ಗೌರವಿಸಬೇಕು’ ಎಂದು ಹೇಳಿದರು.

ನಾವು ಮಾಡುವ ಖಚಿತತೆ ಇರಬೇಕು ಎಂದು ತಿಳಿಸಿದ ಅವರು ಬಾಲಗಂಗಾಧರ ತಿಲಕ್‌ ಅವರು ವಿದ್ಯಾರ್ಥಿಯಾಗಿದ್ದಾಗಿನ ಘಟನೆಯೊಂದು ತಿಳಿಸಿದರು.

ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಬಾಲಕನೊಬ್ಬನ ಅಂಕಗಳು ಬಂದಿರಲಿಲ್ಲ. ಈ ಬಗ್ಗೆ ಶಾಲಾ ಮುಖ್ಯಸ್ಥರನ್ನು ಕೇಳಿದಾಗ ನೀನು ಅನುತ್ತೀರ್ಣನಾಗಿದ್ದೀಯಾ ಎನ್ನುತ್ತಾರೆ. ಉತ್ತೀರ್ಣವೋ, ಅನುತ್ತೀರ್ಣವೋ ನನಗೆ ನನ್ನ ಅಂಕಪಟ್ಟಿ ಕೊಡಿ ಎಂದು ಪಟ್ಟು ಹಿಡಿಯುತ್ತಾನೆ. ಆಗ ಅಂಕಪಟ್ಟಿಗಳನ್ನು ತಂದಿದ್ದ ಸಿಪಾಯಿಗೆ ಅನುಮಾನ ಉಂಟಾಗಿ ಅಂಕಪಟ್ಟಿ ಇಟ್ಟಿದ್ದ ಕೊಠಡಿಗೆ ಹೋಗಿ ನೋಡಿದಾಗ ಮೂಲೆಯಲ್ಲಿ ಬಿದ್ದಿತ್ತು. ಅದರಲ್ಲಿನ ಅಂಕಗಳನ್ನು ನೋಡಿದಾಗ ಅತಿ ಹೆಚ್ಚಿನ ಅಂಕಗಳು ದೊರೆತಿದ್ದವು. ಆ ಬಾಲಕನೇ ಬಾಲಗಂಗಾಧರ ತಿಲಕ್ ಎಂದರು.

ಪ್ರಭಾರ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಮಾತನಾಡಿ, ‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 496 ಕಾಲೇಜುಗಳಿವೆ. ಆದರೆ ಕೇವಲ 25 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಷಾದನೀಯ. ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಬೇಕು. ವಿ.ವಿ. ಮಟ್ಟದ ಉತ್ಸವಕ್ಕೆ ಇಷ್ಟು ಕಡಿಮೆ ಕಾಲೇಜುಗಳು ಭಾಗವಹಿಸಿವೆ ಎಂದರೆ ಸಾಂಸ್ಕೃತಿಕ ದುಃಸ್ಥಿತಿ ಎಷ್ಟಿದೆ ಎಂಬುದು ಅರಿವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ₹ 8 ಸಾವಿರ: ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ₹ 5 ಸಾವಿರ ಆರ್ಥಿಕ ನೆರವನ್ನು ₹ 8 ಸಾವಿರಕ್ಕೆ ಹೆಚ್ಚಿಸುವುದಾಗಿಯೂ ಅಂಬೇಕರ್‌ ಇದೇ ವೇಳೆ ಪ್ರಕಟಿಸಿದರು. ವಿದ್ಯಾರ್ಥಿಗಳು ನೆರವನ್ನು ಹೆಚ್ಚಿಸುವಂತೆ ಕೋರಿ ಮನವಿ ಸಲ್ಲಿಸಿದ್ದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಅವರು ವಡವಾಟಿ ಅವರ ವ್ಯಕ್ತಿ ಪರಿಚಯ ಮಾಡಿಕೊಟ್ಟರು.

ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ವಿಜಯ ಭಾಸ್ಕರ್‌, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯ ಪ್ರೊ.ಸಿ.ಎಸ್‌.ಬಸವರಾಜ, ಕುಲಸಚಿವ ಪ್ರೊ.ಸಿ.ಸೋಮಶೇಖರ್‌, ಮೌಲ್ಯಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ್‌ ಕೆ.ಎಂ, ಹಣಕಾಸು ಅಧಿಕಾರಿ ಬಿ.ವಿಜಯ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಿಲಿಂದ್‌ ಸುಳ್ಳದ ವೇದಿಕೆಯಲ್ಲಿದ್ದರು.

 

ವಿ.ವಿ. ಆವರಣದಲ್ಲಿ ವಿದ್ಯಾರ್ಥಿಗಳ ರಂಗು

ಯುವಜನೋತ್ಸವದ ಅಂಗವಾಗಿ ವಿಶ್ವವಿದ್ಯಾಲಯದ ಆವರಣ ಕಳೆಗಟ್ಟಿತ್ತು. ವಿವಿಧ ಕಾಲೇಜುಗಳು ಹಾಗೂ ವಿ.ವಿ. ಆವರಣದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಧೋತರ, ನೆಹರೂ ಶರ್ಟ್‌, ಕೇಸರಿ ರುಮಾಲು ತೊಟ್ಟುಕೊಂಡು ಡೊಳ್ಳಿನ ಕುಣಿತಕ್ಕೆ ಹೆಜ್ಜೆ ಹಾಕಿದರು. ತಾವೇನು ಕಡಿಮೆ ಎಂಬಂತೆ ವಿದ್ಯಾರ್ಥಿನಿಯರೂ ಆಕರ್ಷಕ ಸೀರೆ ತೊಟ್ಟು, ರುಮಾಲು ಸುತ್ತಿಕೊಂಡು, ಮೂಗುತಿ ಉಟ್ಟುಕೊಂಡು ನಾದದ ಲಯಕ್ಕೆ ಹೆಜ್ಜೆ ಹಾಕಿದರು. ಹೀಗಾಗಿ ಆವರಣದಲ್ಲಿ ಕೆಲ ಹೊತ್ತು ಗಂಧರ್ವ ಲೋಕವೇ ಸೃಷ್ಟಿಯಾದಂತಹ ಅನುಭವವಾಯಿತು. ಇದಕ್ಕೆ ಪೂರಕವಾಗಿ ವಿವಿಧ ಪ್ರಾಣಿಗಳ ಮುಖವಾಡ ತೊಟ್ಟ ಕಲಾವಿದರೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಮುಖ್ಯ ಅತಿಥಿಯಾಗಿದ್ದ ಪಂ.ನರಸಿಂಹಲು ವಡವಾಟಿ, ಪ್ರಭಾರ ಕುಲಪತಿ ಪ್ರೊ.ಪರಿಮಳಾ ಅಂಬೇಕರ್, ಕುಲಸಚಿವ ಸಿ.ಸೋಮಶೇಖರ್‌ ಮೆರವಣಿಗೆ ಆರಂಭದಲ್ಲಿ ಡೊಳ್ಳು ಬಾರಿಸಿದರು. ಕಾರ್ಯಸೌಧದಿಂದ ಆರಂಭವಾದ ಮೆರವಣಿಗೆ ಡಾ.ಅಂಬೇಡ್ಕರ್‌ ಸಭಾಂಗಣಕ್ಕೆ ಬಂದು ಮುಕ್ತಾಯವಾಯಿತು.

 

ರನ್ನ ರಾಷ್ಟ್ರಕವಿಯೇ?

ಬಳೆಗಾರ ಮನೆತನದಿಂದ ಬಂದಿದ್ದ ವ್ಯಕ್ತಿಯೊಬ್ಬರು ರಾಷ್ಟ್ರಕವಿಯಾಗಿದ್ದಾರೆ. ಅವರ ಹೆಸರು ಏನು ಎಂದು ಪಂ.ನರಸಿಂಹಲು ವಡವಾಟಿ ಅವರು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ರನ್ನ ಎಂದು ಉತ್ತರಿಸಿದ. ಸರಿಯಾದ ಉತ್ತರ ಒಬ್ಬರಾದರೂ ಹೇಳಿದರಲ್ಲ ಎಂದು ಹೇಳಿ ಮಾತು ಮುಗಿಸಿದರು. ಇದು ಸರಿಯಾದ ಉತ್ತರ ಅಲ್ಲ ಎಂದು ಕೆಲ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ವೇದಿಕೆ ಮೇಲಿದ್ದ ವಡವಾಟು ಅವರನ್ನು ಪ್ರಶ್ನಿಸಲು ವೇದಿಕೆಯತ್ತ ಧಾವಿಸಿದರು.

ಇದನ್ನು ಗಮನಿಸಿದ ಪ್ರಾಧ್ಯಾಪಕ ಪ್ರೊ.ಎಚ್‌.ಟಿ.ಪೋತೆ ವಿದ್ಯಾರ್ಥಿಗಳನ್ನು ಅಲ್ಲಿಯೇ ತಡೆದು ವೇದಿಕೆ ಏರಿದರು. 

ರನ್ನ ರಾಷ್ಟ್ರಮಟ್ಟದ ಕವಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ರಾಷ್ಟ್ರಕವಿಗಳು ಎಂದು ಸರ್ಕಾರ ಎಂ.ಗೋವಿಂದ ಪೈ, ಕುವೆಂಪು ಹಾಗೂ ಜಿ.ಎಸ್‌.ಶಿವರುದ್ರಪ್ಪ ಅವರ ಹೆಸರಿಸಿದೆ. ಈ ವಿವಾದವನ್ನು ಹೆಚ್ಚು ಬೆಳೆಸಬೇಡಿ ಎಂದು ಹೇಳಿದ ನಂತರ ವಿದ್ಯಾರ್ಥಿಗಳು ಸುಮ್ಮನಾದರು.

 

ಪ್ರತಿಕ್ರಿಯಿಸಿ (+)